Rain Alert: ಮುಂದಿನ 24 ಗಂಟೆಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆ!
ಬೆಂಗಳೂರು, ಆಗಸ್ಟ್ 03: ದೇಶಾದ್ಯಂತ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಕೇರಳ, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯ ಆರ್ಭಟ ಜನರನ್ನು ಭಯಗೊಳಿಸಿದ್ದು, ಕರ್ನಾಟಕದಲ್ಲಿ ನಿರಂತರವಾಗಿ ಕಳೆದ ಒಂದು ತಿಂಗಳಿನಿಂದ ಮಳೆಯಾಗುತ್ತಿದೆ. ಇತ್ತ ಭರ್ಜರಿ ಮಳೆಯಿಂದಾಗಿ ಕರ್ನಾಟಕದ ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿದ್ದು, ಮಳೆರಾಯನ ಆರ್ಭಟಕ್ಕೆ ಜನ ರೋಸಿ ಹೋಗಿದ್ದಾರೆ.
ವಯನಾಡು ಸೇರಿದಂತೆ ಕೇರಳದ ಉತ್ತರದ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 3 ರಿಂದ, ಮಳೆ ಚಟುವಟಿಕೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದಾದ ನಂತರ ಮುಂದಿನ ನಾಲ್ಕು ದಿನಗಳ ಕಾಲ ಮಾತ್ರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಆಗಸ್ಟ್ 3 ರಿಂದ ಆಗಸ್ಟ್ 5 ರವರೆಗೆ ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ಕರ್ನಾಟಕದಲ್ಲಿ ದಕ್ಷಿಣ ಒಳನಾಡು ಜಿಲ್ಲೆಗಳಿಗೆ, ಇಂದು ಮತ್ತು ನಾಳೆ ಭಾರಿ ಮಳೆಯಾಗಲಿದ್ದು, ಇನ್ನುಳಿದ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ, ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಭಾರೀ ಮಳೆಯಿಂದಾಗಿ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಅಗಷ್ಟ 6 ರ ವರೆಗೆ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಭಾರಿಯಿಂದ ಅತ್ಯಂತ ಭಾರೀ ಮಳೆ ಹಿನ್ನಲೆಯಲ್ಲಿ ಆಗಸ್ಟ್ 4ರ ವರೆಗೆ ಆರೆಂಜ್ ಹಾಗೂ 5, 6 ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನೂ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಭಾರಿಯಿಂದ ಅತಿ ಭಾರೀ ಮಳೆ ಹಿನ್ನಲೆಯಲ್ಲಿ ಆಗಸ್ಟ್ 3,4 ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯ್ಡಾ, ದಾಂಡೇಲಿ, ಶಿರಸಿ, ಸಿದ್ದಾಪುರದ ಶಾಲಾ-ಕಾಲೇಜಿಗೆ ರಜೆ ಘೋಷಿಸಿದ್ದು, ಜನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೇ ಬೆಂಗಳೂರಿನಲ್ಲಿ ಇಂದಿನಿಂದ ಆಗಸ್ಟ್ 6ರ ವರೆಗೆ ಹಲವೆಡೆ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ ಇದೇ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಗುಜರಾತ್ ಮತ್ತು ಕೇರಳ ರಾಜ್ಯಗಳ ಕರಾವಳಿ ಸಮುದ್ರಗಳಲ್ಲಿ ಸರಾಸರಿ ಸಮುದ್ರಮಟ್ಟದಲ್ಲಿ ಉಂಟಾದ ಮೇಲುಬ್ಬರದ ಪರಿಣಾಮ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಜೋರಾದ ಗಾಳಿಯೊಂದಿಗೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕರಾವಳಿ & ಮಲೆನಾಡು ಪ್ರದೇಶಗಳ ಕೆಲವೆಡೆ ರಸ್ತೆ ಅಡಚಣೆಗಳು, ಹಠಾತ್ ಪ್ರವಾಹ & ಭೂಕುಸಿತವುಂಟಾಗುವ ಸಾಧ್ಯತೆಗಳಿದೆ. ಹೆಚ್ಚಿನ ಮಳೆಯಿಂದಾಗಿ ನದಿಪಾತ್ರಗಳಿಗೆ ಹೆಚ್ಚಿನ ಒಳಹರಿವು ಕಂಡುಬರಲಿದೆ.
ಇನ್ನು, ರಾಜಧಾನಿ ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಸಾಧಾರಣ ಮಳೆಯಾಗಿದೆ. ಉತ್ತರಾಖಂಡದಲ್ಲಿ ಇದುವರೆಗೆ ಪ್ರವಾಹದಿಂದಾಗಿ 13 ಜನರು ಸಾವನ್ನಪ್ಪಿದ್ದಾರೆ, ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.












Click it and Unblock the Notifications