Karnataka Rain: 5 ದಿನ ಮುಂದುವರೆದ ಮಳೆ; ಯಾವ ಜಿಲ್ಲೆಗಳಲ್ಲಿ ವರುಣನ ಆಗಮನ ಇಲ್ಲಿದೆ ನೋಡಿ
ಬೆಂಗಳೂರು,ಸೆಪ್ಟೆಂಬರ್ 01: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಕ್ರಿಯಗೊಂಡ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದ್ದು, ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ವಾಡಿಕೆಯಂತೆ ಮಳೆ ಶುರುವಾಗಿದೆ. ಬೆಂಗಳೂರಿನಲ್ಲಿ ಮುಂದಿನ ಐದಾರು ದಿನಗಳ ಕಾಲ ಮಧ್ಯಾಹ್ನದ ನಂತರ ಇಲ್ಲವೇ ರಾತ್ರಿ ಉತ್ತಮ ಮಳೆ ಸುರಿಯಲಿದೆ. ಒಂದೆರಡು ಧಾರಾಕಾರ ಮಳೆ ಆದರೆ, ಇನ್ನೂ ಕೆಲವೆಡೆ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಈಗಾಗಲೇ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಶುರುವಾದ ಮಳೆ ಶುಕ್ರವಾರ ಬೆಳಗಿನ ಜಾವದವರೆಗೂ ಸುರಿದಿದ್ದು, ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ವಿಜಯನಗರ ಸೇರಿದಂತೆ ಒಂದು ಅಥವಾ ಎರಡು ಕಡೆ ಸಿಡಿಲು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಗುರುವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮುಂದಿನ ಐದು ದಿನ ಮಳೆಯ ಮುನ್ಸೂಚನೆ ಇದ್ದರೂ ಸಹಿತ ತಾಪಮಾನದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಇಲ್ಲದಾಗಿದೆ. ಅಂದರೆ ಮಳೆ ಮಧ್ಯೆ ನಗರದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಮಳೆ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.
ಇನ್ನೂ ದಕ್ಷಿಣ ಒಳನಾಡಿನಲ್ಲಿಯೂ ಮಳೆಯಾಗುವ ಸಾಧ್ಯತೆಗಳಿವೆ. ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಕೊರತೆಯುಂಟಾಗಿದೆ. ರಾಜ್ಯಕ್ಕೆ ಆಗಸ್ಟ್ನಲ್ಲಿ ಶೇಕಡಾ 74ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ 123 ವರ್ಷಗಳಲ್ಲೇ ದಾಖಲೆಯ ಮಳೆ ಕೊರತೆ ಉಂಟಾಗಿದೆ.
ಗುರುವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರಿನ ಹಲವೆಡೆ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಾಮರಾಜಪೇಟೆ, ಮಲ್ಲೇಶ್ವರಂ, ವಿಜಯನಗರ, ಶಾಂತಿನಗರ, ಚಿಕ್ಕಪೇಟೆ, ಕೆ.ಆರ್ ಮಾರ್ಕೇಟ್, ಕೋರಮಂಗಲ ಸೇರಿ ಸಿಲಿಕಾನ್ ಸಿಟಿಯ ಹಲವೆಡೆ ಭರ್ಜರಿ ಮಳೆಯಾಗಿದೆ. ಮುಂದಿನ ಸೆಪ್ಟೆಂಬರ್ ತಿಂಗಳು ಇದೇ ರೀತಿ ಮಳೆಯಾಗಲಿದೆ ಎಂದು ಐಎಂಡಿ ಸೂಚನೆ ನೀಡಿದೆ.












Click it and Unblock the Notifications