Karnataka rain: ಕರಾವಳಿ-ಉತ್ತರ ಒಳನಾಡಿಗೆ ಮುಂಗಾರು ವಿರಾಮ, ಮುಂದಿನ 48 ಗಂಟೆ ಮಾತ್ರ ಮಳೆ
ಬೆಂಗಳೂರು, ಜುಲೈ 28: ಕರ್ನಾಟಕ ರಾಜ್ಯದ ಸುಮಾರು ಅರ್ಧದಷ್ಟು ಜಿಲ್ಲೆಗಳಲ್ಲಿ ಬಹುದಿನಗಳಿಂದ ಅಬ್ಬರಿಸಿದ್ದ ಮುಂಗಾರು ಮಳೆಯ ತೀವ್ರತೆ ಸದ್ಯ ಇಳಿಕೆ ಆಗಿದೆ. ನಿರಂತರ ಮಳೆ ಕಂಡಿದ್ದ ಕರಾವಳಿ ಹಾಗೂ ಉತ್ತರ ಒಳನಾಡಿನ ಜನರಿಗೆ ಶುಕ್ರವಾರ ಬೆಳಗ್ಗೆ ಸೂರ್ಯನ ದರ್ಶನವಾಗಿದೆ.
ರಾಜ್ಯದ ಕರಾವಳಿಯಲ್ಲಿ ತಿಂಗಳಿಂದ ಸುರಿದಿದ್ದ ಮಹಾಮಳೆಗೆ ಬ್ರೇಕ್ ಬಿದ್ದಿದೆ. ಪ್ರವಾಹದ ಭೀತಿ ಎದುರಿಸುತ್ತಿದ್ದ ವಿವಿಧ ಜಿಲ್ಲೆಗಳ ಗ್ರಾಮಸ್ಥರು ವರುಣಾರ್ಭಟ ತಣ್ಣಗಾಗಿದ್ದರಿಂದ ತುಸು ನಿಟ್ಟುಸಿರು ಬಿಡುವಂತಾಗಿದೆ. ರೆಡ್ ಅಲರ್ಟ್ ಪಡೆದಿದ್ದ ಕರಾವಳಿ ಜಿಲ್ಲೆಗಳು, ಪುನಃ ಯೆಲ್ಲೋ ಅಲರ್ಟ್‌ಗೆ ಮರಳಿವೆ. ಭಾನುವಾರದಿಂದ ಮಳೆ ಪೂರ್ತಿ ಕಡಿಮೆಯಾಗುವ ಸಾಧ್ಯತೆಗಳು ಇವೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ದಿನಪೂರ್ತಿ ಸುರಿಯುತ್ತಿದ್ದ ಜಿಟಿ ಜಿಟಿ ಮಳೆ ಇದೀಗ ವಿರಾಮ ನೀಡಿದೆ. ಹಳ್ಳಿ ಭಾಗದಲ್ಲಿ ವಾತಾವರಣ ಸಹಜ ಸ್ಥಿತಿಯತ್ತ ಬರುತ್ತಿದ್ದು, ಇದು ಹೀಗೆ ಮುಂದುವರಿದರೆ ಭಾನುವಾರ ಹೊತ್ತಿಗೆ ರೈತರ ಜಮೀನುಗಳತ್ತ ಮುಖ ಮಾಡಲಿದ್ದಾರೆ. ಬಾಕಿ ಉಳಿದ ಕೃಷಿ ಚಟುವಟಿಕೆಗಳು ಮುಂದುವರಿಯಲಿವೆ.
ಮುಂದಿನ 48 ಗಂಟೆ ಮಾತ್ರ ಮಳೆ ಎಚ್ಚರಿಕೆ
ರಾಜ್ಯದಲ್ಲಿ ಮುಂದಿನ 48 ಗಂಟೆ ವರೆಗೆ ಮಾತ್ರ ಮಳೆ ಮುನ್ಸೂಚನೆ ಇದೆ. ಭಾನುವಾರ ಕೆಲವು ಕಡೆಗಳಲ್ಲಿ ಮಾತ್ರ ಮಳೆ ಬೀಳುವ ಮುನ್ಸೂಚನೆ ಇದೆ. ಅಲ್ಲಿಯವರೆಗೆ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ವ್ಯಾಪಕ ಮಳೆ ಆಗಲಿದೆ.

ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ, ಬೀದರ್, ಕಲಬುರಗಿ ಜಿಲ್ಲೆಗಳಿಗೆ ಇಂದು ಒಂದು ದಿನ ಅತ್ಯಧಿಕ ಮಳೆ ಬರಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಶನಿವಾರ ಈ ಭಾಗದಲ್ಲಿ ಮಳೆ ಮತ್ತಷ್ಟು ಇಳಿಕೆ ಆಗಲಿದ್ದು, ಅಂದು ಇದೇ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಒಳನಾಡಿನ ಜಿಲ್ಲೆಗಳಿಗೂ ಮಳೆ ಇಳಿಕೆ
ಅದೇ ರೀತಿ ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ, ಯಾದಗಿರಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಮೂಲಕ ಹವಾಮಾನ ಇಲಾಖೆಯು ಮಳೆ ಇಳಿಕೆಯ ಮುನ್ಸೂಚನೆಯನ್ನು ಖಚಿತಪಡಿಸಿದೆ.
ಇನ್ನೂ ರಾಜ್ಯ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮುಂದಿನ ಮೂರು ದಿನ ನಿತ್ಯ ಸಂಜೆ ಹೊತ್ತಿಗೆ ಅಲ್ಲಲ್ಲಿ ತುಂತುರು ಮಳೆ, ಕೆಲವೆಡೆ ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಜಾಸ್ತಿ ಮಳೆ ದಾಖಲಾಗಿದೆ. ಉತ್ತರ ಕನ್ನಡದ ಕ್ಯಾಸಲ್ ರಾಕ್ ನಲ್ಲಿ 17 ಮಿಲಿ ಮೀಟರ್ ಮಳೆ ಬಿದ್ದಿದ್ದು, ಕದ್ರಾ, ದಕ್ಷಿಣ ಕನ್ನಡದ ಮುಲ್ಕಿ, ಉತ್ತರ ಕನ್ನಡದ ಸಿದ್ದಾಪುರ, ಕುಂದಾಪುರ, ಕಾರವಾರ, ಅಂಕೋಲಾ, ಬೆಳಗಾವಿಯ ಲೊಂಡಾದಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗ, ರಾಯಚೂರು, ಹಾವೇರಿ, ಯಾದಗಿರಿ, ಹಾಸನ ಕಡೆಗಳಲ್ಲಿ ಸಾಧಾರಣವಾಗಿ ಮಳೆ ದಾಖಲಾಗಿದೆ ಎಂದು ವರದಿ ಆಗಿದೆ.












Click it and Unblock the Notifications