Karnataka Rain: ಮಳೆ ಅಬ್ಬರ ಮತ್ತೆ ಶುರು, ಜಲಾಶಯಗಳ ಮಟ್ಟ ತಿಳಿಯಿರಿ

ಕರ್ನಾಟಕದ ಮೇಲೆ ಮುನಿಸಿಕೊಂಡಿದ್ದ ಮಳೆರಾಯ ಈಗ ಒಂದಿಷ್ಟು ಕರುಣೆ ತೋರಿದ್ದು, ಭರ್ಜರಿ ಮಳೆ ಬೀಳುತ್ತಿದೆ. ಕೇವಲ ಒಂದೆರಡು ಜಿಲ್ಲೆಗೆ ಮಾತ್ರವಲ್ಲ, ಕರ್ನಾಟಕದ ಅಷ್ಟೂ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಬರದ ಬೇಗೆಯಲ್ಲಿದ್ದ ಕರ್ನಾಟಕದ ಅನ್ನದಾತರಿಗೆ ಮಳೆರಾಯನ ರೌದ್ರಾವತಾರ ಒಂದಷ್ಟು ರಿಲೀಫ್ ನೀಡಿದೆ. ಹಾಗೇ ರಾಜ್ಯದ ಜಲಾಶಯಗಳು ಕೂಡ ಮೆಲ್ಲಗೆ ತುಂಬುವ ನಿರೀಕ್ಷೆ ಮೂಡಿದೆ. ರಾಜ್ಯದ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ.

ಕರ್ನಾಟಕದಲ್ಲಿ ಮುಂಗಾರು ಮಳೆ (Monsoon) ಆಗಸ್ಟ್ ತಿಂಗಳಲ್ಲಿ ಬಿಡುವು ಪಡೆದರೂ ಈಗ ಮತ್ತೆ ಅಬ್ಬರಿಸುತ್ತಿದೆ. ಭಾಗಶಃ ಕರ್ನಾಟಕಕ್ಕೆ ಮುಂಗಾರು ಮಾರುತ ಮತ್ತೆ ಎಂಟ್ರಿ ಕೊಟ್ಟಿದ್ದು ಕರ್ನಾಟಕದಲ್ಲಿ (Karnataka Rain) ಭರ್ಜರಿ ಮಳೆಯಾಗುತ್ತಿದೆ. ಹೀಗಾಗಿ ರಾಜ್ಯದ ಡ್ಯಾಂ, ಕೆರೆ, ಹಳ್ಳಕೊಳ್ಳಗಳಿಗೆ ಮತ್ತೆ ನೀರು ಹರಿದು ಬರ್ತಿದೆ. ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮತ್ತೆ ಶುರುವಾಗಿದೆ. ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಕೂಡ ಭಾರಿ ಪ್ರಮಾಣದ ಮಳೆ ಬೀಳುತ್ತಿದೆ. ಹಾಗಾದರೆ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಈಗ? ಮುಂದೆ ಓದಿ.

karnataka-rain-and-karnataka-dam-water-level

ಕರ್ನಾಟಕದ ಡ್ಯಾಂಗಳ ನೀರಿನ ಮಾಹಿತಿ

1) ಕೆಆರ್‌ಎಸ್ ​ ಜಲಾಶಯ: ಈ ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 21.73 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ​ ಜಲಾಶಯದಲ್ಲಿ 49.37 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು ಹೆಚ್ಚುವ ನಿರೀಕ್ಷೆ ಇದೆ. ಕೆಆರ್‌ಎಸ್ ​ ಜಲಾಶಯಕ್ಕೆ 2,432 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಆದರೆ ತಮಿಳುನಾಡು ಕಿರಿಕ್ ಹಿನ್ನೆಲೆ 6,344 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಹೀಗಾಗಿ KRS ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದೆ.

2) ಕಬಿನಿ ಜಲಾಶಯ: ಕಾವೇರಿ ಕೊಳ್ಳದ ಕಬಿನಿ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಈಗ 13.55 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಕಬಿನಿ ಜಲಾಶಯದಲ್ಲಿ 19.28 ನೀರು ಸಂಗ್ರಹವಾಗಿತ್ತು. ಬರದ ಆತಂಕದ ನಡುವೆ ಈಗ ಕಬಿನಿ ಡ್ಯಾಂಗೆ ಕೇವಲ 788 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಆದರೆ ಈಗ ಮಳೆಯ ಆರ್ಭಟ ಶುರುವಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಬಿನಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆ ಇದೆ.

3) ಹೇಮಾವತಿ ಡ್ಯಾಂ: ಕಾವೇರಿ ನದಿ ಉಪನದಿ ಹೇಮಾವತಿಗೆ ಕಟ್ಟಿರುವ ಡ್ಯಾಂಗೆ ಕೂಡ ನೀರಿನ ಹರಿವು ಕಡಿಮೆಯಾಗಿದೆ. 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯವು, ಕಳೆದ 4-5 ವರ್ಷದಿಂದ ತುಂಬಿ ತುಳುಕಿತ್ತು. ಆದರೆ ಈ ಬಾರಿ ಮಳೆ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ಹೇಮಾವತಿ ಜಲಾಶಯ ಕೂಡ ಬರಿದಾಗುತ್ತಿದೆ. ಈಗ 22.21 ಟಿಎಂಸಿ ಮಾತ್ರ ಬಾಕಿ ಇದ್ದು, 700 ಕ್ಯುಸೆಕ್ ಒಳಹರಿವು ಹೇಮಾವತಿ ಡ್ಯಾಂಗೆ ಬರುತ್ತಿದೆ.

karnataka-rain-and-karnataka-dam-water-level

4) ತುಂಗಭದ್ರಾ ಜಲಾಶಯ: ಬಯಲು ಸೀಮೆ ಜೀವನಾಡಿ ತುಂಗಭದ್ರಾ ಡ್ಯಾಂ ಪೂರ್ತಿಯಾಗಿ ತುಂಬಿಲ್ಲ. ಗರಿಷ್ಠ 105 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಇದೀಗ ಕೇವಲ 72.76 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಬರೋಬ್ಬರಿ 104 ಟಿಎಂಸಿ ನೀರು ಸಂಗ್ರಹವಿತ್ತು. ತುಂಗಭದ್ರಾ ಜಲಾಶಯದ ಒಳಹರಿವು ಕೇವಲ 1191 ಕ್ಯುಸೆಕ್ ಇದ್ದು, ಹೊರ ಹರಿವು 6613ಕ್ಕೆ ತಲುಪಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಕೊರತೆಯ ಆತಂಕ ಕಾಡುತ್ತಿದೆ.

5) ಆಲಮಟ್ಟಿ ಡ್ಯಾಂ: ಉತ್ತರ ಕರ್ನಾಟಕದ ಜನರ ಜೀವನಾಡಿ, ಆಲಮಟ್ಟಿ ಡ್ಯಾಂಗೆ ಮಾತ್ರ ಈ ಬಾರಿ ಉತ್ತಮವಾಗಿ ನೀರು ಹರಿದು ಬಂದಿದೆ. ಇಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಆಲಮಟ್ಟಿ ಜಲಾಶಯದ ಒಟ್ಟು ಸಾಮರ್ಥ್ಯ 123.08 ಟಿಎಂಸಿ, ಇದೀಗ 118.56 ಟಿಎಂಸಿ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಈ ಸಮಯಕ್ಕೆ 123.08 ಟಿಎಂಸಿ ನೀರು ಇತ್ತು. ಆಲಮಟ್ಟಿ ಒಳ ಹರಿವು 784 ಕ್ಯುಸೆಕ್ ಇದ್ದು 12,908 ಕ್ಯುಸೆಕ್ ಹೊರಹರಿವು ದಾಖಲಾಗಿದೆ.

6) ಲಿಂಗನಮಕ್ಕಿ ಜಲಾಶಯ: ಕರ್ನಾಟಕದ ದೊಡ್ಡ ಡ್ಯಾಂ ಎನಿಸಿಕೊಂಡಿರುವ ಲಿಂಗನಮಕ್ಕಿ ಕೇವಲ ಅರ್ಧ ಕೂಡ ತುಂಬಿಲ್ಲ. ಮಲೆನಾಡು ಭಾಗದಲ್ಲಿ ಭರ್ಜರಿ ಮಳೆ ಬೀಳದ ಹಿನ್ನೆಲೆ, ಈ ಬಾರಿ ಲಿಂಗನಮಕ್ಕಿ ಜಲಾಶಯಕ್ಕೆ ಕಡಿಮೆ ಪ್ರಮಾಣದಲ್ಲಿ ನೀರು ಬಂದಿತ್ತು. ಹೀಗಾಗಿ ಲಿಂಗನಮಕ್ಕಿ ಡ್ಯಾಂ ಒಟ್ಟು ಸಾಮರ್ಥ್ಯ 151 ಟಿಎಂಸಿ ಇದ್ದರೂ ಈಗ 67 ಟಿಎಂಸಿ ನೀರು ಇದೆ. ಒಳಹರಿವು 2415 ಸಾವಿರ ಕ್ಯುಸೆಕ್ ಇದ್ದು, 4545 ಕ್ಯುಸೆಕ್ ಹೊರಹರಿವು ಇದೆ.

karnataka-rain-and-karnataka-dam-water-level

7) ಭದ್ರಾ ಡ್ಯಾಂ: ಭದ್ರಾ ಡ್ಯಾಂನಲ್ಲಿ 71 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಕೇವಲ 45 ಟಿಎಂಸಿ ನೀರು ಸಂಗ್ರಹವಾಗಿದ್ದು ಕಳೆದ ವರ್ಷ ಈ ವೇಳೆಗೆ ಭದ್ರಾ ಜಲಾಶಯದಲ್ಲಿ 70.49 ನೀರು ಸಂಗ್ರಹವಾಗಿತ್ತು. ಭದ್ರಾ ಡ್ಯಾಂಗೆ 434 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಸಮಯದಲ್ಲೇ ಕೃಷಿಗೆ ನೀರು ಹರಿಸುತ್ತಿರುವ ಕಾರಣ 3,316 ಹೊರಹರಿವು ದಾಖಲಾಗಿದೆ.

8) ಘಟಪ್ರಭಾ ಜಲಾಶಯ: ಡ್ಯಾಂನಲ್ಲಿ 51 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಕೇವಲ 41.53 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಘಟಪ್ರಭಾ ​ಜಲಾಶಯದಲ್ಲಿ 51.00 ಟಿಎಂಸಿ ನೀರು ಇತ್ತು. ಘಟಪ್ರಭಾ ಡ್ಯಾಂಗೆ 445 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕೇವಲ 167 ಕ್ಯುಸೆಕ್ ಹೊರಹರಿವು ದಾಖಲಾಗಿದೆ.

9) ಸೂಫಾ ಜಲಾಶಯ: ಮಲೆನಾಡು ಭಾಗದಲ್ಲಿ ಮಳೆ ಕೊರತೆ ಹಿನ್ನೆಲೆ ಸೂಫಾ ಡ್ಯಾಂನಲ್ಲಿ ಕೂಡ ನೀರಿನ ಕೊರತೆ ಕಾಡುತ್ತಿದೆ. ಸೂಫಾ ಡ್ಯಾಂ ಸಾಮರ್ಥ್ಯ 145 ಟಿಎಂಸಿ ಆಗಿದ್ದು, ಈಗ 77.06 ಟಿಎಂಸಿ ನೀರು ಇದೆ. ಕಳೆದ ವರ್ಷ 94.55 ನೀರು ಇತ್ತು. ಆದರೆ ಒಳಹರಿವು 1461 ಕ್ಯುಸೆಕ್ ಇದ್ದು, ಬಹುತೇಕ ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.

10) ವರಾಹಿ ಜಲಾಶಯ: ಜಲಾಶಯದ ಗರಿಷ್ಠ ಸಾಮರ್ಥ್ಯ 31 ಟಿಎಂಸಿ. ಜಲಾಶಯದಲ್ಲೀಗ 9.13 ಟಿಎಂಸಿ ನೀರು ಇದೆ. ಕಳೆದ ವರ್ಷ ಇದೇ ಸಮಯಕ್ಕೆ ವರಾಹಿ ​ ಜಲಾಶಯದಲ್ಲಿ 21.54 ಟಿಎಂಸಿ ನೀರು ಸಂಗ್ರಹವಾಗಿತ್ತು. ವರಾಹಿ​ ಜಲಾಶಯಕ್ಕೆ 1164 ಕ್ಯುಸೆಕ್ ನೀರು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಲಾಶಯ ಈ ವರ್ಷ ತುಂಬುವ ನಿರೀಕ್ಷೆ ಇಲ್ಲ. ಆದರೆ ಈಗ ಬೀಳುತ್ತಿರುವ ಮಳೆ ಹೀಗೆ ಒಂದಷ್ಟು ದಿನ ಮುಂದುವರಿದರೆ ಈ ಡ್ಯಾಂ ತುಂಬುವ ನಿರೀಕ್ಷೆ ಇದೆ.

11) ಮಲಪ್ರಭಾ ಜಲಾಶಯ: 37.73 ಟಿಎಂಸಿ ಗರಿಷ್ಠ ಸಾಮರ್ಥ್ಯ ಮಲಪ್ರಭಾ ಜಲಾಶಯಕ್ಕೆ ಇದೆ. ಆದರೆ ಇದೀಗ ಜಲಾಶಯದಲ್ಲಿ 21.68 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಂದರ್ಭಕ್ಕೆ ಮಲಪ್ರಭಾ ​ಜಲಾಶಯದಲ್ಲಿ 37 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಗ ಮಲಪ್ರಭಾ ಜಲಾಶಯಕ್ಕೆ 00 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಆದರೆ ಹೊರಹರಿವು 760
ಕ್ಯುಸೆಕ್ ದಾಖಲಾಗಿದೆ.

12) ಹಾರಂಗಿ ಜಲಾಶಯ: ಹಾರಂಗಿ ಗರಿಷ್ಠ 8.50 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈಗ 7.17 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಕೂಡ ಬಹುತೇಕ ಇಷ್ಟೇ ಅಂದ್ರೆ 7.68 ಟಿಎಂಸಿ ನೀರು ಸಂಗ್ರಹವಿತ್ತು. ಹಾರಂಗಿ ಜಲಾಶಯದ ಒಳಹರಿವು 1291 ಕ್ಯುಸೆಕ್ ಆಗಿದ್ದು, ಈಗ ಕೃಷಿ ಮತ್ತಿತರ ಉದ್ದೇಶಕ್ಕೆ ಒಟ್ಟಾರೆ 550 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+