Karnataka Rain: ಅಕ್ಟೋಬರ್ 7ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ
ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದ್ದು, ಮುಂದಿನ ಒಂದು ವಾರಗಳ ಕಾಲ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 7ರವರೆಗೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತನ್ನ ವರದಿಯಲ್ಲಿ ಮಾಹಿತಿ ನೀಡಿದೆ.
ಮುಂಗಾರು ಮುಗಿಯುವ ಹಂತದಲ್ಲಿ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಿರುಗಾಳಿ ಬೀಸಲಿದ್ದು, ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ದಾವಣಗೆರೆ, ತುಮಕೂರು, ಕೊಡಗು, ಬೆಳಗಾವಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಒಂದು ವಾರ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಗದಗ, ಬೀದರ್, ವಿಜಯಪುರ, ಹಾಸನ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಕಲಬುರಗಿ, ರಾಮನಗರ, ವಿಜಯನಗರ, ಚಿತ್ರದುರ್ಗ, ಹಾವೇರಿ, ಮಂಡ್ಯ ಕೋಲಾರ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಗುರುವಾರ ಮಳೆಯಾದ ವಿವರ
ಕರಾವಳಿ ಜಿಲ್ಲೆಗಳಲ್ಲಿ ಮಳೆ ಚುರುಕಾಗಿದ್ದು ಭಾರಿ ಮಳೆಯಾಗುತ್ತಿದೆ. ಗುರುವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 108.5 ಮಿಮೀ ಮಳೆಯಾಗಿದ್ದು ಅತಿ ಹೆಚ್ಚು ಮಳೆ ಬಿದ್ದ ಜಿಲ್ಲೆಯಾಗಿದೆ. ದಕ್ಷಿಣ ಕನ್ನಡ 101 ಮಿಮೀ, ಉಡುಪಿ 72 ಮಿ.ಮೀ, ಬೀದರ್ 67.5 ಮಿ.ಮೀ, ಚಿಕ್ಕಮಗಳೂರು 51.5 ಮಿ.ಮೀ, ಶಿವಮೊಗ್ಗ 49 ಮಿ.ಮೀ, ಬೆಳಗಾವಿ 43.5 ಮಿ.ಮೀ, ತುಮಕೂರು 43.5 ಮಿ.ಮೀ, ಚಿಕ್ಕಬಳ್ಳಾಪುರ 43 ಮಿ.ಮೀ, ಮಂಡ್ಯ 42.5 ಮಿ.ಮೀ, ಯಾದಗಿರಿ 41.5 ಮಿ.ಮೀ, ಕೊಡಗು 35 ಮಿ.ಮೀ, ಹಾಸನ 35 ಮಿ.ಮೀ, ವಿಜಯಪುರ 31 ಮಿ.ಮೀ ಮಳೆಯಾಗಿದೆ.
ಇನ್ನೂ ಒಂದು ತಿಂಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ. ಕರಾವಳಿ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications