ಕರ್ನಾಟಕ: 4 ಬಾರಿ ತಸ್ತಿಕ್ ಹೆಚ್ಚಿಸಿದ ಸಿದ್ದರಾಮಯ್ಯ: ಅರ್ಚಕರು-ಆಗಮಿಕರು ಭೇಟಿ
ಬೆಂಗಳೂರು, ಮಾರ್ಚ್ 16: ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳು ಇತ್ತೀಚೆಗೆ ತಾವು ಮಂಡಿಸಿದ ಬಜೆಟ್ 2025 ನಲ್ಲಿ ದೇವಸ್ಥಾನ, ದತ್ತಿ ಇಲಾಖೆ, ಅರ್ಚಕರಿಗೆ ಸಿಹಿ ಸುದ್ದಿ ನೀಡಿದ್ದರು. ತಸ್ತಿಕ್ ಮೊತ್ತ ಹೆಚ್ಚಳ ಜೊತೆಗೆ ವಿವಿಧ ಯೋಜನೆಗಳನ್ನು ಘೋಷಿಸಿದ್ದರು. ಅದಕ್ಕೆ ಪ್ರತಿಯಾಗಿ ಅರ್ಚಕರ ಸಂಘದ ಸದಸ್ಯರು ಸಿಎಂ ಸಿದ್ದರಾಮಯ್ಯ ಹಾಗೂ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಅಭಿನಂದಿಸಿದ್ದಾರೆ.
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುಮಾರು 25,551 ಧಾರ್ಮಿಕ ದೇವಸ್ಥಾನಗಳ ಅರ್ಚಕರಿಗೆ ಹಾಲಿ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತವನ್ನು 60,000 ರೂಪಾಯಿಂದ 72,000 ರೂ.ಗೆ ಹೆಚ್ಚಿಸಲಾಯಿತು. ಇದನ್ನು ಹೆಚ್ಚಿಸಿರುವುದಾಗಿ ಸಿಎಂ ಅಧಿಕೃತವಾಗಿ ಬಜೆಟ್‌ನಲ್ಲಿ ಘೋಷಿಸಿದೆ.

ಆರ್ಥಿಕ ಅನುದಾನದ ನಿರೀಕ್ಷೆಯಲ್ಲಿದ್ದ ಜನರುಗೆ ಸರ್ಕಾರದ ಅನುದಾನ ಹಂಚಿಕೆಗೆ ಖುಷಿ ತಂದಿದೆ. ಈ ಸಂಬಂಧ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ(ರಿ) ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಶಾಲು ತುರಾಯಿ ಹಾಕಿ ಗೌರವಿಸಿ ಅಭಿನಂದಿಸಿದರು. ನಮ್ಮ ಸಮುದಾಯ ಪರ ನಿರಂತರ ನಾಲ್ಕು ಬಾರಿ ತಸ್ತಿಕ್ ಮೊತ್ತ ಹೆಚ್ಚಿಸಿದ್ದಕ್ಕಾಗಿ ಅವರು ಕೃತಜ್ಞತೆ ಅರ್ಪಿಸಿದರು. ರಾಮಲಿಂಗಾ ರೆಡ್ಡಿ ಅವರಿಗೆ ಸಿಹಿ ತಿನ್ನಿಸಿದರು.
ಸರ್ಕಾರದ ಬಜೆಟ್ ನಲ್ಲಿ ತಸ್ತೀಕ್ ಮೊತ್ತವನ್ನು ರೂ.60,000 ದಿಂದ ರೂ.72,000 ಹೆಚ್ಚಿಸಲಾಗಿದೆ. ತಸ್ತಿಕ್ ಮೊತ್ತ ಹೆಚ್ಚಳ ಇದೇ ಮೊದಲೇನಲ್ಲ. ಈ ಮೊದಲು ಅಂದರೆ 2013, 2015 ಮತ್ತು 2017 ಹಾಗೂ ಪ್ರಸ್ತುತ 2025 ರಲ್ಲಿ ಒಟ್ಟು 4 ಬಾರಿ 48,000 ರೂಪಾಯಿ ತಸ್ತೀಕ್ ಮೊತ್ತವನ್ನು ಹೆಚ್ಚಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಎಂದ ಅವರು ಅರ್ಚಕ ಸಮುದಾಯ, ಸಂಘದ ಸದಸ್ಯರು ಈ ವೇಳೆ ಸ್ಮರಿಸಿದರು.
ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ, ದುಮ್ಮಾನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಮುಜರಾಯಿ ಇಲಾಖೆಯಲ್ಲಿ ಅಭಿವೃದ್ಧಿಯ ಪ್ರವಾಹವೇ ಜರುಗಿದೆ ಎಂದು ಅರ್ಚಕರು ತಿಳಿಸಿದರು.

ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಈಗಾಗಲೇ ಅರ್ಚಕರ ಕಣ್ಮಣಿಯಾಗಿದ್ದಾರೆ. ಕರ್ನಾಟಕದ ಬಂಗಾರದ ಮನುಷ್ಯ ಎಂದು ಅರ್ಚಕ ಸಮೂಹದಿಂದ ಮನೆಮಾತಾಗಿದ್ದಾರೆ. ಮುಜರಾಯಿ ಇಲಾಖೆಯಲ್ಲಿ ಧಾರ್ಮಿಕ ಸ್ನೇಹಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ, ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡು ಇತಿಹಾಸ ಸೃಷ್ಟಿಸಿದ ಏಕೈಕ ಮುಜರಾಯಿ ಸಚಿವರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ(ರಿ) ರಾಜ್ಯಾಧ್ಯಕ್ಷ ಶ್ರೀವತ್ಸ್ ಹೇಳಿದರು.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ (ರಿ.) ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಗೌರವ ಪ್ರಧಾನ ಸಲಹೆಗಾರರ ಡಾ. ರಾಧಾಕೃಷ್ಣ ಕೆ.ಇ, ಗೌರವ ಉಪಾಧ್ಯಕ್ಷ ಡಾ.ಎಸ್.ಆರ್. ಶೇಷಾದ್ರಿ ಭಟ್ಟರ್, ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಮತ್ತಿತರರು ಸರ್ಕಾರದ ಸ್ಪಂದನೆ ಸ್ಮರಿಸಿದರು.












Click it and Unblock the Notifications