List Of Candidates Who Filled Election Nomination Today: ಭರ್ಜರಿ ರೋಡ್ ಶೋ: ನಾಮಪತ್ರ ಸಲ್ಲಿಸಿದ ಘಟಾನುಘಟಿ ನಾಯಕರು
ಬೆಂಗಳೂರು,ಏಪ್ರಿಲ್17: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣ ರಂಗೇದಿದ್ದು, ಹಲವು ರಾಜಕೀಯ ಪಕ್ಷಗಳ ನಾಯಕರು ಸೋಮವಾರ ಭರ್ಜರಿ ರೋಡ್ ಶೋ ಹಾಗೂ ಶಕ್ತಿ ಪ್ರದರ್ಶನ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ರ ವೇಳಾಪಟ್ಟಿಯಂತೆ ಈಗಾಗಲೇ ಚುನಾವಣೆ ಘೋಷಿಸಿದ್ದು, ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 13 ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್ 20 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ಇತ್ತ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್,ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಈ ಬಾರಿಯ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಹಲವು ತಂತ್ರಗಾರಿಕೆ ಹಾಗೂ ಬೃಹತ್ ರೋಡ್ ಶೋ ಮೂಲಕ ಘಟಾನುಘಟಿ ರಾಜಕೀಯ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ.
ಕನಕಪುರದಲ್ಲಿ ಡಿ ಕೆ ಶಿವಕುಮಾರ ನಾಮಪತ್ರ
ಈ ಬಾರಿಯ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಜನಸಾಗರವೇ ಹರಿದು ಬಂದಿದೆ. ಕನಪುರದಲ್ಲಿ ನಾಮಪತ್ರ ಸಲ್ಲಿಕೆಗೂ ಮೊದಲು ಪ್ರಸಿದ್ದ ಕೆಂಕೇರಮ್ಮ ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿಯಿಂದ ಆರ್ ಅಶೋಕ್ ಅವರನ್ನ ಕಣಕ್ಕಿಳಿಸಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ದ ಡಿ ಕೆ ಶಿವಕುಮಾರ್ ಅವರು ತಮ್ಮ ಶಕ್ತಿ ಪ್ರದರ್ಶನವನ್ನ ತೋರಿಸಿದ್ದು, ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಡಿಕೆಶಿ ಪರ ಘೋಷಣೆಯನ್ನು ಕೂಗಿದ್ದಾರೆ.
ವರುಣಾದಿಂದ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ
ಮೈಸೂರಿನಲ್ಲಿ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿ. ಸೋಮಣ್ಣ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನಾ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆಯಲಾಯಿತು. ಈ ವೇಳೆ ಮೈಸೂರು ಸಂಸದರಾದ ಪ್ರತಾಪ್ ಸಿಂಹ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೋಮಣ್ಣ ಅವರಿಗೆ ಸಾಥ್ ನೀಡಿದರು. ಹೈವೋಲ್ಟೇಜ್ ಕ್ಷೇತ್ರವಾದ ವರುಣಾದಲ್ಲಿ ಪಕ್ಷದ ಅಭ್ಯರ್ಥಿ ಪರ ಬೊಮ್ಮಾಯಿ ಮತಯಾಚನೆ ಮಾಡಿದರು
ಹೊಸಕೋಟೆಯಿಂದ ಶರತ್ ಬಚ್ಚೇಗೌಡ ನಾಮಪತ್ರ
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಹೊಸಕೋಟೆ ತಾಲೂಕು ಕಚೇರಿಯಲ್ಲಿ ತಮ್ಮ ಉಮೇದುವಾರಿಗೆ ಸಲ್ಲಿಸಿದರು. ಇದಕ್ಕೂ ಮುನ್ನ ಸೂಲಿಬೆಲೆ ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಮದ ಹಜರತ್ ಚೋಕೋ ಬಿಬೀಮಾ ದರ್ಗಾ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಹೊಳೆ ನರಸೀಪುರದಿಂದ ಹೆಚ್. ಡಿ. ರೇವಣ್ಣ ನಾಮಪತ್ರ ಸಲ್ಲಿಕೆ
ಹಾಸನ ಜಿಲ್ಲೆಯ ಹೊಳೆ ನರಸೀಪುರದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್. ಡಿ. ರೇವಣ್ಣ ನಾಮಪತ್ರ ಸಲ್ಲಿಸಿದರು. ಈ ವೇಳೆ ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ಸೂರಜ್ ರೇವಣ್ಣ ಅವರಿಗೆ ಸಾಥ್ ನೀಡಿದರು.
ಶಿಕಾರಿಪುರದಿಂದ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಕೆ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ, ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಏಪ್ರಿಲ್ 19ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
ಪದ್ಮನಾಭ ನಗರದಲ್ಲಿ ಆರ್ ಅಶೋಕ್ ನಾಮಪತ್ರ ಸಲ್ಲಿಕೆ
ಪದ್ಮನಾಭ ನಗರದಲ್ಲಿ ಆರ್ ಅಶೋಕ್ ನಾಮಪತ್ರ ಸಲ್ಲಿಕೆ ಮಾಡಿದರು. ಬಿಜೆಪಿ ಹೈಕಮಾಂಡ್ ಆರ್ ಅಶೋಕ್‌ಗೆ ಎರಡು ಕ್ಷೇತ್ರದ ಟಿಕೆಟ್ ನೀಡಿದೆ. ಹೀಗಾಗಿ ನಾಳೆ ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸೋಮವಾರ ಪದ್ಮನಾಭ ನಗರದಲ್ಲಿ ನೂರಾರು ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಆರ್ ಅಶೋಕ್ ನಾಮಪತ್ರ ಸಲ್ಲಿಕೆ ಮಾಡಿದರು.
ಗಾಂಧಿನಗರದಿಂದ ದಿನೇಶ್ ಗುಂಡೂರಾವ್ ನಾಮಪತ್ರ ಸಲ್ಲಿಕೆ
ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನ ಹಾಗೂ ದರ್ಗಾಕ್ಕೆ ಭೇಟಿ ನೀಡಿದರು. ಈ ವೇಳೆ ಅಧಿಕ ಸಂಖ್ಯೆಯಲ್ಲಿ ಜನ ಸೇರಿ ಅವರಿಗೆ ಜೈ ಕಾರ ಹಾಕಿದರು. ನಾಮಪತ್ರ ಸಲ್ಲಿಕೆ ತೆರಳುವ ಮುನ್ನ ಅಭಿಮಾನಿಗಳ ದಂಡೇ ನೆರೆದಿತ್ತು. ಈ ವೇಳೆ ಅಭಿಮಾನಿಗಳು ಅತ್ಯಂತ ಸಡಗರದಿಂದ ಭಾಗಿಯಾದರು.
ಸೊರಬ ಕ್ಷೇತ್ರದ ಕುಮಾರ ಬಂಗಾರಪ್ಪ ನಾಮಪತ್ರ ಸಲ್ಲಿಕೆ
ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯೂ ಮೊದಲು ರಂಗನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದು, ನಾಮಪತ್ರ ಸಲ್ಲಿಸಿದ್ದರು.
ಚಿತ್ತಾಪುರದಿಂದ ಪ್ರಿಯಾಂಕ್ ಖರ್ಗೆ ನಾಮಪತ್ರ ಸಲ್ಲಿಕೆ
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕ್ ಖರ್ಗೆ ಅವರು ಬೆಂಬಲಿಗರ ಜತೆ ಆಗಮಿಸಿ ಜಿಲ್ಲೆಯ ಚಿತ್ತಾಪುರ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರವೂ ಪ್ರತಿಷ್ಠೆಯ ಕಣವಾಗಿದ್ದು, ಸಾವಿರಾರು ಸಂಖ್ಯೆಯ ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ಬೃಹತ್ ಪ್ರಚಾರ ನಡೆಸಿ ನಾಮಪತ್ರ ಸಲ್ಲಿಸಿದರು.

ಕುಂದಗೋಳದಿಂದ ನಾಮಪತ್ರ ಸಲ್ಲಿಸಿದ ಚಿಕ್ಕನಗೌಡರ್
ಕುಂದಗೋಳ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಐ.ಚಿಕ್ಕನಗೌಡ್ರ ನಾಮಪತ್ರ ಸಲ್ಲಿಸಿದ್ದಾರೆ. ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.
ಕೋಲಾರದಲ್ಲಿ ವರ್ತೂರ್ ಪ್ರಕಾಶ್ ನಾಮಪತ್ರ ಸಲ್ಲಿಕೆ
ಕೋಲಾರ ಜಿಲ್ಲೆಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ಕುರುಡುಮಲೆ ಗಣೇಶ, ಕೋಲಾರಮ್ಮ, ಸೋಮೇಶ್ವರ ದೇವಾಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಮನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಸೋಮವಾರ ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಅನಿತಾ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಾಥ್ ನೀಡಿದರು.
ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಕೆ
ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ನ ಸ್ಥಳೀಯ ನಾಯಕರು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆ ಸಾಥ್ ನೀಡಿದರು.
ಹೊಸ ಕೋಟೆಯಲ್ಲಿ ಎಂಟಿಬಿ ನಾಗರಾಜ್ ಸಲ್ಲಿಕೆ
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಅವರು ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಕಾರ್ಯಕರ್ತರ ಭಾರಿ ಮೆರವಣಿಗೆಯಲ್ಲಿ ಸಚಿವರು ಪಾಲ್ಗೊಂಡರು.
ಪುಲಿಕೇಶಿನಗರದಿಂದ ಅಖಂಡ ಶ್ರೀನಿವಾಸ ಮೂರ್ತಿ ನಾಮಪತ್ರ ಸಲ್ಲಿಕೆ
ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಂಡ ಶ್ರೀನಿವಾಸ ಮೂರ್ತಿ ಸೋಮವಾರ ನಾಮಪತ್ರ ಸಲ್ಲಿಸಿದರು. ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿರುವ ಫ್ರೇಜರ್‌ಟೌನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಕೆ ಮಾಡಿದರು.
ಕಾಂಗ್ರೆಸ್‌ನ ಹಾಲಿ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕಾಂಗ್ರೆಸ್ ಇದುವರೆಗೂ ಟಿಕೆಟ್ ಘೋಷಿಸದ ಕಾರಣ ಅವರು ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಚನ್ನಪಟ್ಟಣದಿಂದ ಎಚ್ ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
ಚನ್ನಪಟ್ಟಣ ದಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿ ಅವರು ಸಲ್ಲಿಸಿದರು. ಇನ್ನೂ ನಾಮಪತ್ರ ಸಲ್ಲಿಸುವುದಕ್ಕೆ ಮುನ್ನ ಬೃಹತ್ ರೋಡ್ ಶೋ ನಡೆಸಿದರು.
ಶಂಕರ ಪಾಟೀಲ್ ಮನೇನಕೊಪ್ಪ ನಾಮಪತ್ರ ಸಲ್ಲಿಕೆ
ನವಲಗುಂದ ಕ್ಷೇತ್ರದಿಂದ ಸಚಿವ ಶಂಕರ ಪಾಟೀಲ್ ಮನೇನಕೊಪ್ಪ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಶಾಸಕ ಬಸನಗೌಡ ಯತ್ನಾಳ ಮತ್ತು ಸ್ಥಳೀಯ ಮುಖಂಡರು ಸಾಥ್ ನೀಡಿದರು.












Click it and Unblock the Notifications