ಹುಬ್ಬಳ್ಳಿ ಏನ್ ಪಾಕಿಸ್ತಾನ ನಾ? ಶೆಟ್ಟರ್ ಕಾಂಗ್ರೆಸ್ ನಲ್ಲೇ ಇದ್ದು ಸಾಯಲಿ,ನಾವೇನು ಮಾಡೋಕೆ ಅಗುತ್ತೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ,ಏಪ್ರಿಲ್29: ಬೆಳಸಿದ ತಾಯಿಯನ್ನೇ ಸಾಯಿಸಲು ಹೊರಟವನು. ಬಾರಪ್ಪ ವಾಪಸ್ ಬಾ ಎಂದೆ ಆದರೆ ಮಾತು ಕೇಳಲಿಲ್ಲ, ಕಾಂಗ್ರೆಸ್ ನಲ್ಲೇ ಇದ್ದು ಸಾಯಲಿ ಬಿಡಿ. ನಾವೇನು ಮಾಡೋಕೆ ಅಗುತ್ತೆ ಎಂದು ಜಗದೀಶ್ ಶೆಟ್ಟರ್ ವಿರುದ್ದ ಕೆ ಎಸ್ ಈಶ್ವರಪ್ಪ ಕಿಡಿಕಾರಿದರು.
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾವು ಜಗದೀಶ್ ಶೆಟ್ಟರ್ ಅವರನ್ನ ಟಾರ್ಗೆಟ್ ಮಾಡಿಲ್ಲ, ಎಲ್ಲರೂ ಎಲ್ಲಾ ಕಡೆ ಹೋಗ್ತಾ ಇದ್ದೇವೆ.ಇದು ಜಗದೀಶ್ ಶೆಟ್ಟರ್ ಹುಚ್ಚು, ಭ್ರಮೆ.
ಅವರೇನು ಇಂಟರ್ನ್ಯಾಷನಲ್ ಲೀಡರ್ ಹಾ.? ಎಲ್ಲಾ ಅಲ್ಲಿಗೆ ಹೋಗೋಕೆ. ಎಲ್ಲಿಂದ ಎಲ್ಲಿಗೆ ಹೋಗಿದ್ದೀರಿ ಎಂದು ನೆನಪಿಟ್ಟುಕೊಳ್ಳಿ. ಖಂಡಿತ, ಇದು ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದರು.

ಎಲ್ಲಾ ಕಡೆ ಪ್ರಚಾರ ಮಾಡುವ ಹಾಗೇ ಹುಬ್ಬಳ್ಳಿಯಲ್ಲಿ ಪ್ರಚಾರ ಮಾಡ್ತಾ ಇದ್ದೇವೆ. ಹುಬ್ಬಳ್ಳಿ ಏನು ಪಾಕಿಸ್ತಾನ ನಾ? ಅಲ್ಲಿ ಬಿಟ್ಟು ಪ್ರಚಾರ ಮಾಡುವುದಕ್ಕೆ, ಎಲ್ಲಾ ಕಡೆಯಂತೆ ಅಲ್ಲೂ ಕೂಡ ಪ್ರಚಾರ ಮಾಡ್ತಾ ಇದ್ದೇವೆ. ಹುಬ್ಬಳ್ಳಿ ಕೂಡ ರಾಜ್ಯದ ಒಂದು ಭಾಗ ಅಲ್ಲಿ ಪ್ರಚಾರ ಮಾಡುತ್ತೇವೆ. ಜಗದೀಶ್ ಶೆಟ್ಟರ್ ಪರ್ಮಿಷನ್ ತೆಗೆದುಕೊಂಡು ಹುಬ್ಬಳ್ಳಿಗೆ ಹೋಗಬೇಕಾ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಜಗದೀಶ್ ಶೆಟ್ಟರ್ ತಾಯಿಗೆ ದ್ರೋಹ ಮಾಡಿದವನು. ಬೆಳಸಿದ ತಾಯಿಯನ್ನೇ ಸಾಯಿಸಲು ಹೊರಟವನು, ಬಾರಪ್ಪ ವಾಪಸ್ ಬಾ ಎಂದೆ ಆದರೆ ಮಾತು ಕೇಳಲಿಲ್ಲ. ಆದರೆ, ಜಗದೀಶ್ ಶೆಟ್ಟರ್ ಗೆ ಸೊಕ್ಕು ಬಂದಿದೆ. 16 ಜನ ಕಾರ್ಪೊರೇಟರ್ ಗಳಲ್ಲಿ ಒಬ್ಬರೂ ಜಗದೀಶ್ ಶೆಟ್ಟರ್ ಜೊತೆ ಹೋಗಿಲ್ಲ. ಜಗದೀಶ್ ಶೆಟ್ಟರ್ ದು ಹಿಂದುತ್ವದ ರಕ್ತ. ಹಿಂದುತ್ವದ ಶೆಟ್ಟರ್ ಹೀಗೆ ಮಾಡುತ್ತಿದ್ದಾರಲ್ಲಾ ಎಂಬ ಕಾರಣಕ್ಕೆ ಆಕ್ರೋಶ ಅಷ್ಟೇ ಎಂದು ಈಶ್ವರಪ್ಪ ಹೇಳಿದರು.
ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ವಿಚಾರವಾಗಿ ಮಾತನಾಡಿ, ಅದು ಕಾಂಗ್ರೆಸ್- ಬಿಜೆಪಿ ಗಲಾಟೆ ಅಲ್ಲ. ಸಿದ್ದರಾಮಯ್ಯನಹುಂಡಿಯಲ್ಲಿ ನಡೆದಿದ್ದು ಕಾಂಗ್ರೆಸ್ ನ ಗುಂಡಾಗಿರಿ, ನಮ್ಮ ಪಕ್ಷದ ಕಾರ್ಯಕರ್ತರು ಚುನಾವಣೆಗಾಗಿ ಮನೆ ಮನೆಗೆ ಹೋಗಿ ಮತ ಕೇಳುತ್ತಿದ್ದಾರೆ. ಕಾಂಗ್ರೆಸ್ ನ ಗುಂಡುಗಳು ಈ ಸಂದರ್ಭದಲ್ಲಿ ಕಲ್ಲು ಹೊಡೆದಿದ್ದಾರೆ. ಘಟನೆ ಸಂಬಂಧ ಪೊಲೀಸ್ ಕಂಪ್ಲೇಂಟ್ ಕೂಡ ಆಗಿದೆ. ಸೋಲುವ ಭೀತಿಯಲ್ಲಿ ಈ ರೀತಿಯ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡ್ತಾ ಇದ್ದಾರೆ. ಜನರ ಮನಸ್ಸಿಗೆ ವಿರುದ್ಧ ಈ ರೀತಿ ಕೆಲಸ ಮಾಡ್ತಾ ಇದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ಮೋದಿ ವಿಷಸರ್ಪ ಎಂಬ ಮಲ್ಲಿಕಾರ್ಜುನ್ ಹೇಳಿಕೆ ವಿಚಾರವಾಗಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆರನ್ನು ನಾವು ತಂದೆ ಸ್ಥಾನದಲ್ಲಿ ಇಟ್ಟಿದ್ದೆವು. ಕಾಂಗ್ರೆಸ್ ಪಕ್ಷದ ಹೀರೋ ಎಂದು ಭಾವಿಸಿದ್ದೆವು. ಈ ರೀತಿ ನೀತಿಗೆಟ್ಟು ಮಾತಾಡ್ತಾರೆ ಎಂದು ನಾವ್ಯಾರು ಭಾವಿಸಿರಲಿಲ್ಲ, ವಿಶ್ವನಾಯಕ ಮೋದಿಯನ್ನು ವಿಷ ಸರ್ಪ ಎಂದು ಕರೆದಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿರನ್ನು ತೃಪ್ತಿಪಡಿಸಿ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇನ್ನು ಯಾವ ಮಟ್ಟಕ್ಕೆ ಹೋಗ್ಬೆಕು ಎಂದುಕೊಂಡಿದ್ದೀರಿ? ಎಂದು ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಪ್ರಶ್ನಿಸಿದರು.
ವಿಲನ್ ಆಗಬೇಡಿ..ಇಡೀ ದೇಶವೇ ನಿಮ್ಮನ್ನು ಗೌರವದಿಂದ ಕಾಣುತ್ತಿದೆ. ಖರ್ಗೆಯವರಿಗೆ ವಾಪಾಸ್ ನಾನು ಅದೇ ರೀತಿ ಹೇಳಲು ಇಷ್ಟಪಡಲ್ಲ. ರಾಷ್ಟ್ರೀಯ ನಾಯಕರಾಗಿ ಈ ರೀತಿ ಮಾತಾಡುವುದಲ್ಲ.
ದೇಶದಲ್ಲಿ ಕಾಂಗ್ರೆಸ್ ಈಗಾಗಲೇ ನಿರ್ನಾಮವಾಗಿದೆ. ಖರ್ಗೆಯವರ ಈ ಹೇಳಿಕೆಯಿಂದ ಮತ್ತಷ್ಟು ನಿರ್ನಾಮ ಆಗುತ್ತೆ. ಮಲ್ಲಿಕಾರ್ಜುನ್ ಖರ್ಗೆಯವರ ಬಾಯಲ್ಲಿ ಬರುವಂತಹ ಮಾತಾ ಇದು.? ಮಲ್ಲಿಕಾರ್ಜುನ್ ಖರ್ಗೆಯವರಿಗೆ ಅವರದ್ದೆ ಆದ ಒಂದು ತೂಕವಿದೆ. ನರೇಂದ್ರ ಮೋದಿ ಅವರನ್ನು ಟೀಕೆ ಮಾಡೋರು ಉದ್ದಾರ ಆಗಲ್ಲ, ಟೀಕೆ ಮಾಡುವುದರಿಂದ ನೀವು ಉದ್ದಾರ ಆಗಲ್ಲ, ನಿಮ್ಮ ಪಕ್ಷವು ಉದ್ದಾರ ಆಗಲ್ಲ ಎಂದು ಕಿಡಿಕಾರಿದರು.
ನಾನು ಎಲ್ಲ ಮುಸಲ್ಮಾನರನ್ನ ಟೀಕೆ ಮಾಡಲ್ಲ.ರಾಷ್ಟ್ರೀಯವಾದಿ ಮುಸಲ್ಮಾನರು ನಮಗೆ ವೋಟ್ ಹಾಕ್ತಾರೆ. ರಾಷ್ಟ್ರದ್ರೋಹಿಗಳ ಮತ ನಮಗೆ ಬೇಡ ಎಂದು ಹೇಳಿದ್ದೇನೆ. ಹಿಂದುತ್ವದ ವಿಷಯ ಸಂಕಟ ಬಂದಾಗ ನಾನು ಯಾವುದೇ ಕಾರಣಕ್ಕೂ ಸುಮ್ಮನೆ ಇರಲ್ಲ ಎಂದು ಹೇಳಿದ ಅವರು, ಶಿವಮೊಗ್ಗ ನಗರ ಸೇರಿದಂತೆ ರಾಜ್ಯದಲ್ಲಿ ನಾವು 140 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications