BJP 'ಉರಿ ನಂಜಿ'ಗೆ ಶ್ರೀಗಳು ಮದ್ದು ಅರೆದಿದ್ದಾರೆ: ಉರಿಗೌಡ, ನಂಜೇಗೌಡ ವಿವಾದದ ಕುರಿತು JDS ಸರಣಿ ಟ್ವೀಟ್
ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ಬಿಜೆಪಿ ಹುಟ್ಟು ಹಾಕಿದ 'ಉರಿ ನಂಜು'ಗೆ ಶ್ರೀಗಳು ಮದ್ದು ಅರೆದಿದ್ದಾರೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಬೆಂಗಳೂರು, ಮಾರ್ಚ್ 20: ಐತಿಹಾಸಿಕ ವಿಚಾರಕ್ಕೆ ಕೋಮು ಬಣ್ಣ ಹಚ್ಚಿ ಬಿಜೆಪಿ ( BJP ) ಹಿಂದಿನಿಂದಲೂ ರಾಜಕೀಯ ಮಾಡುತ್ತಾ ಬಂದಿದೆ. ಚುನಾವಣೆ ಗೆಲ್ಲಲು ಬಿಜೆಪಿ ಯಾವ ಮಟ್ಟಕ್ಕೆ ಇಳಿಯಲಿದೆ ಎಂಬುದಕ್ಕೆ 'ಉರಿನಂಜು' ಕಥೆ ಸಾಕ್ಷಿ. ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ಬಿಜೆಪಿ ಹುಟ್ಟು ಹಾಕಿದ 'ಉರಿ ನಂಜು'ಗೆ ಶ್ರೀಗಳು ಮದ್ದು ಅರೆದಿದ್ದಾರೆ ಎಂದು ಜೆಡಿಎಸ್ ( JDS ) ಟ್ವೀಟ್ ಮಾಡಿದೆ. ಈ ಟ್ವೀಟ್ ಜೊತೆಗೆ ಆದಿಚುಂಚನಗಿರಿಯ ನಿರ್ಮಾಲಾನಂದ ಸ್ವಾಮೀಜಿಗಳ ವಿಡಿಯೊವೊಂದನ್ನು ಹಂಚಿಕೊಂಡಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, 'ಅನಾದಿಕಾಲದಿಂದಲೂ ದೇಶಕ್ಕಾಗಿ ಪ್ರಾಣ ಒತ್ತೆಯಿಟ್ಟು ಹೋರಾಟ ಮಾಡಿದ ಒಕ್ಕಲಿಗ ಸಮುದಾಯವನ್ನು ದೇಶದ್ರೋಹಿಗಳಂತೆ ಬಿಂಬಿಸುವ ಹುನ್ನಾರ ಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯ ಮಧ್ಯಪ್ರವೇಶದಿಂದ ವಿಫಲವಾಗಿದೆ. ಮಿಸ್ಟರ್ ಸಿಟಿ ರವಿ, ಅಶ್ವತ್ಥ ನಾರಾಯಣ ಅವರೇ ಚುನಾವಣೆಗೆ ಮುಂಚೆಯೆ ಮಂಡ್ಯ- ಮೈಸೂರಿನ ಜನರು ನಿಮ್ಮನ್ನು ಸೋಲಿಸಿದ್ದಾರೆ' ಎಂದೂ ತಿಳಿಸಿದೆ.

ಮುನಿರತ್ನ ಅವರೇ, ನಿಮ್ಮಂತಹ ಸುಳ್ಳುಕೋರರ ಮಾತನ್ನು ಜನರು ನಂಬುವುದಿಲ್ಲ. ಮೈಸೂರು ಪ್ರಾಂತ್ಯದ ಜನರು ಪ್ರಾಚೀನ ಕಾಲದಿಂದಲೂ ಸೌಹಾರ್ದ ಪರಂಪರೆ ಮತ್ತು ಬಹುತ್ವದ ಮೇಲೆ ನಂಬಿಕೆಯಿಟ್ಟವರು. ಇಂದು ಹಳೆ ಮೈಸೂರು ಪ್ರಾಂತ್ಯದಲ್ಲಿ ನಡೆದಂತೆ ರಾಜ್ಯದಾದ್ಯಂತ ನಿಮ್ಮ ಸುಳ್ಳುಗಳನ್ನು ಒಕ್ಕಲಿಗರು ಒಡೆಯಲಿದ್ದಾರೆ. ಸತ್ಯಮೇವ ಜಯತೆ ಎಂದೂ ಜೆಡಿಎಸ್ ಟ್ವೀಟ್ ಮಾಡಿದೆ.
ಉರಿಗೌಡ ನಂಜೇಗೌಡ ಕುರಿತಾದ ಸಿನಿಮಾ ನಿರ್ಮಾಣಕ್ಕೆ ಸಚಿವ ಮುನಿರತ್ನ ಅವರು ಸಿದ್ದರಾಗಿದ್ದರು. ಈ ವಿಚಾರವಾಗಿ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದರು. 'ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ 'ಉರೀಗೌಡ ನಂಜೇಗೌಡ' ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದರು.

'ಊರಿಗೌಡ ಮತ್ತು ನಂಜೇಗೌಡ' ಎಂಬ ಟೈಟಲ್ ರಿಜಿಸ್ಟರ್ ಮಾಡಿಸಿ ಸಿನಿಮಾ ಮಾಡಲು ಮುಂದಾಗಿದ್ದ ಮುನಿರತ್ನ ಅವರೊಂದಿಗೆ ನಿರ್ಮಲಾನಂದ ಸ್ವಾಮೀಜಿಗಳು ಚರ್ಚೆ ನಡೆಸಿದ್ದಾರೆ. ಚಿತ್ರ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
'ಐತಿಹಾಸಿಕ ಹಿನ್ನೆಲೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವ ಸಂದರ್ಭದಲ್ಲಿ ಸಮುದಾಯವನ್ನು ಪ್ರತಿನಿಧಿಸುವ ಇಬ್ಬರು ವ್ಯಕ್ತಿಗಳ ಮೇಲೆ ಸಿನಿಮಾ ಮಾಡುವುದು ಸರಿಯಲ್ಲ. ಅದು ಯಾಕೆ ಸರಿಯಿಲ್ಲ ಅಂತ ಅವರಿಗೂ (ಮುನಿರತ್ನ) ಹೇಳಿದ್ದೇನೆ. ವಿಷಯಗಳನ್ನು ಅರಿತುಕೊಂಡ ನಂತರ, ಯಾರನ್ನೂ ನೋಯಿಸುವ ಉದ್ದೇಶವಿಲ್ಲ ಎಂದು ಅವರು ಹೇಳಿದರು ಮತ್ತು ಈ ದಿಕ್ಕಿನಲ್ಲಿ ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಸದ್ಯಕ್ಕೆ ಮಾತ್ರವಲ್ಲ, ಭವಿಷ್ಯದಲ್ಲಿ ಎಂದಿಗೂ ಈ ಕುರಿತಾಗಿ ಮಾತನಾಡುವುದಿಲ್ಲ' ಎಂದು ಸ್ವಾಮೀಜಿ ಮಂಡ್ಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಒಕ್ಕಲಿಗ ಸಮುದಾಯದ ಬಿಜೆಪಿ ಮುಖಂಡರಾದ ಅಶ್ವತ್ಥ ನಾರಾಯಣ್, ಗೋಪಾಲಯ್ಯ ಅವರಿಗೆ ಐತಿಹಾಸಿಕ ಹಿನ್ನೆಲೆ ಹಾಗೂ ವಾಸ್ತವಾಂಶಗಳ ಅರಿವಿದೆ. ಈ ವಿಚಾರದಲ್ಲಿ ಅವರ ಮೌನ ವಹಿಸುತ್ತಾರೆ ಎನ್ನುವ ನಿರೀಕ್ಷೆಯಿದೆ ಸ್ವಾಮೀಜಿ ತಿಳಿಸಿದರು.
ಈ ವಿಚಾರದ ಕುರಿತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೆಂಡ ಕಾರಿದ್ದಾರೆ. ಉರಿಗೌಡ ಹಾಗೂ ನಂಜೇಗೌಡರ ಪ್ರಸ್ತಾಪಿಸಿದರು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮುಖಂಡರು ನಮ್ಮ ಸಮುದಾಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಮಲಾನಂದ ಸ್ವಾಮೀಜಿಗಳು ಏನು ಹೇಳುತ್ತಾರೋ, ಹಾಗೇಯೇ ಕೇಳುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications