ಒಂದು ವರ್ಷದಲ್ಲಿ ₹300 ಕೋಟಿ ಮೌಲ್ಯದ ಡ್ರಗ್ಸ್ ವಶ: ಜಿ.ಪರಮೇಶ್ವರ್
ಕಳೆದ ಒಂದು ವರ್ಷದ ಅವಧಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಯುವಜನತೆ ಮಾದಕ ವ್ಯಸನಗಳಿಂದ ದೂರ ಉಳಿಯಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ನಿರಂತರವಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಗುರಿ ಸಾಧಿಸುವವರೆಗೂ ಕಾರ್ಯಾಚರಣೆಗಳನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಹಾಗೂ ಫೆಡರೇಷನ್ ಆಫ್ ಹಿಸ್ಟೋರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಪೌಲ್ ಜಾನ್ ರೆಸಾರ್ಟ್ ಮತ್ತು ಹೋಟೆಲ್ ಸಂಸ್ಥೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ವಿಂಟೇಜ್ ಕಾರ್ ರ್ಯಾಲಿ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಈ ವಿಚಾರ ಹೇಳಿದ್ದಾರೆ.

ಮಾದಕ ದ್ರವ್ಯಗಳು ವಿಶ್ವಕ್ಕೆ ಮಾರಕವಾಗಿದೆ. ಭವಿಷ್ಯದ ಯುವ ಪೀಳಿಗೆಯನ್ನು ನಾಶಪಡಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಘೋಷಿಸಲಾಗಿದೆ. ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಮರ ಸಾರಿದ್ದೇವೆ. ಪೊಲೀಸರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.
ಪೊಲೀಸರಿಗೆ ಹೈಜಿನ್ ಆನ್ ಗೋ ವಾಹನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ "ಹೈಜಿನ್ ಆನ್ ಗೋ" ವಾಹನಗಳನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಪೊಲೀಸ್ ಇಲಾಖೆಯ ಪ್ರಗತಿಯ ಸ್ತಂಭಗಳು ಪುಸ್ತಕವನ್ನು ಜಿ.ಪರಮೇಶ್ವರ್ ಬಿಡುಗಡೆಗೊಳಿಸಿದರು.
ಬೆಂಗಳೂರು ನಗರದಲ್ಲಿ ಪೊಲೀಸರು ವಿವಿಧ ರೀತಿಯ ಕರ್ತವ್ಯದ ವೇಳೆ "ಹೈಜಿನ್ ಆನ್ ಗೋ" ಸಂಚಾರಿ ಸ್ವಚ್ಛತಾ ಘಟಕಗಳು ಉಪಯುಕ್ತವಾಗಲಿದೆ. ಇದರಲ್ಲಿ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ಶೌಚಾಲಯ, ಸ್ವಚ್ಛತಾ ಸಾಮಗ್ರಿ, ಪ್ರಥಮ ಚಿಕಿತ್ಸೆಯ ಕಿಟ್ ವ್ಯವಸ್ಥೆ ಇರಲಿದೆ. ಮಳೆ, ಚಳಿಯನ್ನು ಲೆಕ್ಕಿಸದೆ ಕರ್ತವ್ಯನಿರ್ವಹಿಸುವ ಪೊಲೀಸರಿಗೆ ಈ ರೀತಿಯ ಸೌಲಭ್ಯಗಳು ಇನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಉತ್ತೇಜನವಾಗಲಿದೆ. ಸುಮಾರು 2 ಕೋಟಿ ರೂಪಾಯಿ ಮೊತ್ತದ ಸಂಚಾರಿ ಸ್ವಚ್ಛತಾ ವಾಹನಗಳನ್ನು ನೀಡಿರುವ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದಿದ್ದಾರೆ.
ಈ ವೇಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿ ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೇಬಶಿಸ್ ನಿಯೋಗಿ, ಕಾರ್ಯಾಧ್ಯಕ್ಷೆ ಡಾ.ಕಲ್ಪನಾ ಶಂಕರ್, ಮುಖ್ಯ ಅಭಿಯಂತರ ವಿಕ್ರಮ್ ವೆಲ್ಲಂಡಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications