ಹೊಸ ಸಂಪುಟ ಸೇರುವ ಮುಸ್ಲಿಂ ನಾಯಕರು ಯಾರು, ಸಂಭಾವ್ಯ ಸಚಿವರು ಯಾರು?
Karnataka New Cabinet: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬಹುತೇಕ ಖಚಿತವಾಗುತ್ತಿದ್ದು, ಮೇ 28ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲಿದ್ದಾರೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟರೆ, ಇಡೀ ಸಚಿವ ಸಂಪುಟ ಬದಲಾವಣೆ ಆಗಲಿದೆ. ಮುಂದಿನ ಸಚಿವ ಸಂಪುಟದಲ್ಲಿ ಯಾರೆಲ್ಲ ಇರಲಿದ್ದಾರೆ ಹಾಗೂ ಮುಸ್ಲಿಂ ಸಮುದಾಯದಿಂದ ಯಾರು ಸಚಿವರಾಗಲಿದ್ದಾರೆ. ಸಿದ್ದರಾಮಯ್ಯ ಆಪ್ತ ಸಚಿವರಾದ ಜಮೀರ್ ಅಹ್ಮದ್ ಖಾನ್, ಎಂ.ಬಿ ಪಾಟೀಲ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಡಿ.ಕೆ ಶಿವಕುಮಾರ್ ಅವರ ಸಚಿವ ಸಂಪುಟ ಸಭೆಯಲ್ಲಿ ಇರಲಿದ್ದಾರೆಯೇ ಎನ್ನುವುದು ಈಗ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದರಿಂದ ಹಾಲಿ ಸಚಿವ ಸಂಪುಟವು ವಿಸರ್ಜನೆಯಾಗಲಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಎಲ್ಲ 31 ಸಚಿವರು ಸಹ ಸಂಪುಟ ಸದಸ್ಯ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಗಲಿರುವವರು ಸಂಪುಟ ರಚನೆ ಮಾಡಬೇಕಾಗುತ್ತದೆ. ಹೊಸ ಮುಖ್ಯಮಂತ್ರಿ ಯಾರನ್ನು ಅವರ ತಂಡದಲ್ಲಿ ಸೇರಿಸಿಕೊಳ್ಳಲಿದ್ದಾರೆ ಎನ್ನುವುದು ಈ ಕ್ಷಣದ ಕುತೂಹಲವಾಗಿದೆ. ಈ ಬಾರಿ ಹಲವು ನಾಯಕರು ಹಾಗೂ ಮುಸ್ಲಿಂ ಸಮುದಾಯದಿಂದಲೂ ಹೆಚ್ಚು ಬೇಡಿಕೆ ಇದೆ. ಇದರೊಂದಿಗೆ ಮುಖ್ಯಮಂತ್ರಿ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಲಿದೆಯೇ ಎನ್ನುವುದು ಈ ಕ್ಷಣದ ಕುತೂಹಲವಾಗಿದೆ.

ಹೊಸ ಸಚಿವ ಸಂಪುಟ ಸಭೆಯಲ್ಲಿ ಯುವಕ ನಾಯಕ / ನಾಯಕಿಗೆ ಆದ್ಯತೆ
ಇನ್ನು ಹೊಸ ಸಚಿವ ಸಂಪುಟದಲ್ಲಿ ಹೊಸ ಮತ್ತು ಯುವ ನಾಯಕರಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ರಾಹುಲ್‌ಗಾಂಧಿ ಅವರಿಗೆ ತಮಿಳುನಾಡು ಮಾದರಿಯಲ್ಲಿ ಯುವಕರು ಹೆಚ್ಚಿರುವ ಸಂಪುಟ ರಚನೆ ಮಾಡಬೇಕು ಎನ್ನುವ ಆಸೆ ಇದೆ. ಕೆಲವೇ ಹಿರಿಯ ಸಚಿವರನ್ನು ಹೊರತುಪಡಿಸಿ ಉಳಿದ ಸಚಿವರಿಗೆ ಕೊಕ್ ಕೊಡಬೇಕು ಎಂಬ ಇಂಗಿತವನ್ನು ಅವರು ಈಚೆಗೆ ನಡೆದ ದೆಹಲಿ ಸಭೆಯಲ್ಲಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹೊಸ ಸಚಿವ ಸಂಪುಟ ಸೇರಲು ಮುಸ್ಲಿಂ ನಾಯಕರಲ್ಲಿ ಪೈಪೋಟಿ
ಹೊಸ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಜೋರಾಗಿದೆ. ಇದರೊಂದಿಗೆ ಹೊಸ ಸಚಿವ ಸಂಪುಟ ಸೇರಲು ಮುಸ್ಲಿಂ ನಾಯಕರಲ್ಲಿ ಲಾಬಿ ಜೋರಾಗಿದೆ. ಈಗ ಇರುವ ಸಚಿವ ಸಂಪುಟದಲ್ಲಿ ಜಮೀರ್ ಅಹಮದ್ ಖಾನ್ ಹಾಗೂ ರಹೀಂ ಖಾನ್ ಅವರು ಇದ್ದಾರೆ. ಸ್ಪೀಕರ್ ಆಗಿ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಅವರು ಇದ್ದಾರೆ.
ಹೊಸ ಸಚಿವ ಸಂಪುಟದಲ್ಲಿ ಮೂವರು ಮುಸ್ಲಿಮರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮುೂರು ಸ್ಥಾನಕ್ಕೆ ಹಲವು ಶಾಸಕರು ಈಗಲಿಂದಲೇ ತೀವ್ರ ಪೈಪೋಟಿ ಆರಂಭಿಸಿದ್ದಾರೆ. ಶಾಸಕ ಯು.ಟಿ.ಖಾದರ್ ಅವರು ಸ್ಪೀಕರ್ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಅವರಿಗೆ ಸಚಿವ ಸ್ಥಾನ ಕೊಡುವ ಸಾಧ್ಯತೆ ಇದೆ. ಜಮೀರ್ ಅಹಮದ್ ಅವರನ್ನು ಸಚಿವರಾಗಿ ಮುಂದುವರಿಸಬೇಕು ಎನ್ನುವುದು ಸಿದ್ದರಾಮಯ್ಯ ಅವರ ಬಣದ ಒತ್ತಾಯವಾಗಿದೆ. ಆದರೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಆಪ್ತ ಬಣದ ಎನ್.ಎ.ಹ್ಯಾರಿಸ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ಮೈಸೂರಿನ ನರಸಿಂಹರಾಜ ಕ್ಷೇತ್ರದ ಹಿರಿಯ ಶಾಸಕ ತನ್ವೀರ್ ಸೇಠ್ ಸಹ ತೀವ್ರ ಪೈಪೋಟಿ ಕೊಡುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕ ಭಾಗದ ಪ್ರಾತಿನಿಧ್ಯದಡಿ ಹಾಲಿ ಸಚಿವ ರಹೀಂ ಖಾನ್ ಅವರನ್ನು ಸಂಪುಟದಿಂದ ಕೈಬಿಟ್ಟರೆ, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಅವರು ಸಚಿವರಾಗುವ ಸಾಧ್ಯತೆ ಇದೆ. ಇನ್ನು ಕಲಬುರಗಿ ಉತ್ತರ ಶಾಸಕಿ ಖನೀಜ್ ಫಾತಿಮಾ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
20ಕ್ಕೂ ಹೆಚ್ಚು ಸಚಿವರಿಗೆ ಕೊಕ್ ಕೊಡುವ ಸಾಧ್ಯತೆ
ಹೊಸ ಸಚಿವ ಸಂಪುಟದಲ್ಲಿ 20ಕ್ಕೂ ಹೆಚ್ಚು ಸಚಿವರಿಗೆ ಕೊಕ್ ಕೊಡುವ ಸಾಧ್ಯತೆ ಇದೆ. ಕೇವಲ 5ರಿಂದ 6 ಜನರನ್ನು ಮಾತ್ರ ಹೊಸ ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷರ ಸ್ಥಾನವೂ ಬದಲಾವಣೆ ಆಗಲಿದೆ.














Click it and Unblock the Notifications