ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ದೇವಾಲಯಗಳ ಪ್ರಸಾದ ಮನೆ ಬಾಗಿಲಿಗೆ!
ದೇವಲಾಯಗಳಿಗೆ ಹೋಗಿ ದೇವರ ದರ್ಶನ ಪಡೆದ ಬಳಿಕ ಪ್ರಸಾದ ತೆಗೆದುಕೊಳ್ಳುವುದು ಮೊದಲಿನಿಂದಲೂ ರೂಢಿಯಲ್ಲಿರುವ ಪದ್ಧತಿ. ಆದರೆ ಇತ್ತೀಚೆಗೆ ದೇವಸ್ಥಾನಗಳಲ್ಲಿ ದೇವರ ದರ್ಶನ ಸುಲಭವಾದರೂ ಪ್ರಸಾದ ಪಡೆಯುವುದು ಕಷ್ಟವಾಗಿದೆ. ಹೀಗಾಗಿ ದೇವಾಲಯಗಳಿಗೆ ತೆರಳಿ ಪ್ರಸಾದ ಪಡೆಯಲು ಕಷ್ಟವಾಗುವ ಭಕ್ತರ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ಮನೆ ಬಾಗಿಲಿಗೆ ಪ್ರಸಾದ ತಲುಪಿಸಲು ಮುಂದಾಗಿದೆ.
ಹೌದು.. ರಾಜ್ಯದಲ್ಲಿರುವ ಪ್ರತೀ ದೇವಸ್ಥಾನದ ಪ್ರಸಾದವನ್ನು ಹೊಸ ತಂತ್ರಜ್ಞಾನದ ಮೂಲಕ ಭಕ್ತರ ಮನೆ ಬಾಗಿಲಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಆನ್‌ಲೈನ್ ಮೂಲಕ ದರ್ಶನದ ಟಿಕೆಟ್ ಬುಕ್ಕಿಂಗ್ ಸೇವೆ ಲಭ್ಯವಿದೆ. ಇದಲ್ಲದೆ ಪ್ರಸಾದವನ್ನೂ ಮನೆಗೆ ತಲುಪಿಸಲು ನಿರ್ಧರಿಸಲಾಗಿದೆ.

ಸಾಮಾನ್ಯವಾಗಿ ದೇವರ ದರ್ಶನಕ್ಕೆ ಟಿಕೆಟ್ ಅನ್ನು ಆನ್‌ಲೈನ್ ಬುಕ್ಕಿಂಗ್ ಮೂಲಕ ಕಾಯ್ದಿರಿಸುವಂತೆ ಪ್ರಸಾದವನ್ನೂ ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದು. ಹೀಗೆ ಪ್ರಸಾದ ಬುಕ್ ಮಾಡಿದರೆ ಆಯಾ ದೇವಸ್ಥಾನದ ಪ್ರಸಾದವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ.
ಪ್ರಸಾದ ತಲುಪಿಸಲು ಅಂಚೆ ಇಲಾಖೆ ಜೊತೆಗೆ ಮಾತುಕತೆ ಮಾಡಲಾಗಿದೆ. ಅಲ್ಲದೆ ಖಾಸಗಿ ಕಂಪನಿಗಳೊಂದಿಗೂ ಮಾತುಕತೆ ನಡೆಯುತ್ತಿದೆ. ಆಹಾರದಂತೆ ಪ್ರಸಾದ ಡೆಲಿವರಿಗಾಗಿ ಡೆಲಿವರಿ ಚಾರ್ಜ್ ಜೊತೆಗೆ ಪ್ರಸಾದಕ್ಕೆ ವಿತರಿಸಲು ತಗಲುವ ವೆಚ್ಚವನ್ನು ಭಕ್ತರು ಭರಿಸಬೇಕಾಗುತ್ತದೆ. ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿ ಪೂರ್ಣಗೊಂಡರೆ ಅಧಿಕಾರಿಗಳು ಸಚಿವರ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಮನೆಗೆ ಪ್ರಸಾದ ತಲುಪಿಸುವ ಸೇವೆ ಆರಂಭಿಸಲಿದ್ದಾರೆ.
ಯಾರಿಗೆಲ್ಲಾ ಉಪಯೋಗ?
*ಮುಖ್ಯವಾಗಿ ಬಹುತೇಕ ಜನರಿಗೆ ರಾಜ್ಯದ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುವ ಆಸೆ ಇರುತ್ತದೆ. ಆದರೆ ಅದು ವೃದ್ಧಾಪ್ಯದಲ್ಲಿ ಕೆಲವರಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಇಂತಹ ಭಕ್ತರು ಮನೆಯಲ್ಲೇ ಕುಳಿತು ತಮಗಿಷ್ಟವಾದ ದೇವಸ್ಥಾನದ ಪ್ರಸಾದವನ್ನು ತರಿಸಿಕೊಳ್ಳುಬಹುದು.
*ವೃದ್ಧರು ಮಾತ್ರವಲ್ಲದೆ ಕೆಲ ಅಂಗವಿಕಲರು, ನಡೆಯಲು ಸಾಧ್ಯವಾಗದೇ ಇರುವವರು, ಅಂದರು ಹೀಗೆ ಹಲವರಿಗೆ ಈ ಸೇವೆ ತುಂಬಾ ಉಪಯೋಗವಾಗಲಿದೆ. ದೇವರ ದರ್ಶನ ಪಡೆದು ಪ್ರಸಾದ ಪಡೆಯಲು ಸಾಧ್ಯವಾಗದೆ ತೆರಳುವ ಭಕ್ತರಿಗೂ ಇದು ಸಹಕಾರಿಯಾಗಿದೆ.
* ಕೆಲವೊಮ್ಮೆ ವಿಶೇಷ ದಿನಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವಾಗ ಅನೇಕ ಭಕ್ತರಿಗೆ ದೇವಸ್ಥಾನಕ್ಕೆ ಹೋದರು ಪ್ರಸಾದ ಸ್ವೀಕರಿಸುವುದು ಕಷ್ಟವಾಗುತ್ತದೆ. ಇದರಿಂದಾಗಿ ಅಂಥವರು ಕೂಡ ಆನ್‌ಲೈನ್ ಮೂಲಕ ಪ್ರಸಾದ ಬುಕ್ ಮಾಡಿಕೊಳ್ಳಬಹುದು. ಅಲ್ಲದೆ ಪುಟ್ಟ ಮಟ್ಟಳು ಇರುವ ಪೋಷಕರು, ಮನೆಯಿಂದ ಹೊರ ಬರಲು ಆಗದ ಗರ್ಭಿಣಿಯರಿಗೂ ಇದು ಸಹಕಾರಿಯಾದ ಸೇವೆಯಾಗಿದೆ.
*ಕೆಲವು ಕಠಿಣ ಸಂದರ್ಭದಲ್ಲಿ ದೇವಸ್ಥಾನಗಳಿಗೆ ತೆರಳು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲೂ ಜನ ಆನ್‌ಲೈನ್ ಮೂಲಕ ಪ್ರಸಾದ್ ತರಿಸಿಕೊಳ್ಳಬಹುದು. ಮನೆಯಲ್ಲೇ ಕುಳಿತು ದೇವರ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ.
ಆದರೆ ಈ ಯೋಜನೆ ಜಾರಿಗೆ ಬರುವುದಕ್ಕೆ ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಮಾನದಂಡಗಳೂ ಇರಲಿದೆ. ಇತ್ತೀಚೆಗೆ ದೇವಸ್ಥಾನಗಳಲ್ಲಿ ಹಳಪೆ ಮಟ್ಟದ ಪ್ರಸಾದ ವಿತರಣೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚು ಸುದ್ದಿಯಾಗಿದ್ದವು. ಈ ಎಲ್ಲದರ ಬಗ್ಗೆ ಜಾಗೃತವಹಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ. ಒಟ್ಟಿನಲ್ಲಿ ದೇವರ ಪ್ರಸಾದವನ್ನು ಆನ್‌ಲೈನ್ ನಲ್ಲಿ ಬುಕ್ ಮಾಡಿಕೊಳ್ಳಬಹುದು ಎನ್ನುವ ವಿಚಾರ ಮಾತ್ರ ಭಕ್ತರಿಗೆ ಖುಷಿ ತಂದಿದೆ.












Click it and Unblock the Notifications