Karnataka MLC Elections: ಮತ್ತೆ ಚುನಾವಣೆ; ವಿಧಾನ ಪರಿಷತ್‌ನ 5 ಸ್ಥಾನಗಳಿಗೆ ಸದ್ಯದಲ್ಲೇ ಎಲೆಕ್ಷನ್!?
ಬೆಂಗಳೂರು, ಮೇ27: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದ್ದು, ಮೂರು ವರ್ಷಗಳ ಕಾಲ ಆಡಳಿತ ನಡೆಸಿದ್ದ ಬಿಜೆಪಿ ಸೋಲಿನ ಪರಾಮರ್ಶೆಯಲ್ಲಿ ತೊಡಗಿದೆ.
ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಏಳು ಸ್ಥಾನಗಳ ಚುನಾವಣೆ ಕುರಿತು ಚರ್ಚೆಗಳು ಶುರುವಾಗಿದ್ದು, ಖಾಲಿ ಇರುವ ನಾಮ ನಿರ್ದೇಶಿತ ಎರಡು ಸ್ಥಾನಗಳನ್ನು ಹೊರತುಪಡಿಸಿದರೆ ಉಳಿದ ಐದು ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ ಕಾಂಗ್ರೆಸ್ ಪಕ್ಷದ ನಾಮನಿರ್ದೇಶಿತ ಸದಸ್ಯರಾದ ಮೋಹನ್‌ಕುಮಾರ್ ಕೊಂಡಜ್ಜಿ ಹಾಗೂ ಪಿ.ಆರ್.ರಮೇಶ್ ಅವರ ಅವಧಿ ಮೇ 17ಕ್ಕೆ ಮುಗಿದಿದ್ದು, ಈ ಸ್ಥಾನಗಳಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ನಾಮನಿರ್ದೇಶನ ಮಾಡಬೇಕಿದೆ.
ಇತ್ತ ವಿಧಾನ ಸಭೆಯಿಂದ ಪರಿಷತ್ತಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಹಿರಿಯ ನಾಯಕ ಬಾಬುರಾವ್ ಚಿಂಚನಸೂರು, ಆರ್.ಶಂಕರ್ ಹಾಗೂ ಲಕ್ಷ್ಮಣ ಸವದಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಹಾಗೂ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಅವರ ಸದಸ್ಯತ್ವ ಮುಗಿಯುವ ಮುನ್ನವೇ ರಾಜೀನಾಮೆ ನೀಡಿರುವುದರಿಂದ ಈ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
ಈಗಾಗಲೇ ವಿಧಾನಸಭಾ ಚುನಾವಣೆ ಹಿನ್ನಲೆ ಹಲವು ಜನ ಪರಿಷತ್ ಸದಸ್ಯರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿ ವಿಧಾನಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರು ಹಾಗೂ ಆಯನೂರು ಮಂಜುನಾಥ್ ಅವರ ಸದಸ್ಯತ್ವ ಅವಧಿ ಮುಂದಿನ ವರ್ಷ ಜೂನ್ ಮೂರನೇ ವಾರದವರೆಗೆ ಇತ್ತು. ಅವರು ಅವಧಿ ಮುಗಿಯುವ ಮುನ್ನವೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನೂ ಆರ್.ಶಂಕರ್ ಹಾಗೂ ಪುಟ್ಟಣ್ಣ ಅವರ ಸದಸ್ಯತ್ವ ಅವಧಿ ಮೂರು ವರ್ಷ ಮತ್ತು ಲಕ್ಷ್ಮಣ ಸವದಿ ಅವರ ಸದಸ್ಯತ್ವ ಅವಧಿ ಐದು ವರ್ಷ ಬಾಕಿ ಇತ್ತು. ಆದರೆ ಈ ನಾಯಕರು ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಸ್ಥಾನಗಳು ಖಾಲಿ ಇರುವ ಬಗ್ಗೆ ಈಗಾಗಲೇ ವಿಧಾನ ಪರಿಷತ್ ಸಚಿವಾಲಯ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಆದಷ್ಟು ಬೇಗ ಖಾಲಿ ಇರುವ ಐದು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಸುವ ಬಗ್ಗೆ ಆಯೋಗ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.












Click it and Unblock the Notifications