ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಬೆಂಬಲಿಗರದ್ದೇ ಮೇಲುಗೈ
ಬೆಂಗಳೂರು, ಮೇ 27: ಕಳೆದ ಮೂರು ದಿನಗಳಿಂದ ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಕುರಿತು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ನಡುವೆ ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ಕಾಂಗ್ರೆಸ್ ನಾಯಕರು 24 ಸಚಿವರ ಹೆಸರುಗಳನ್ನು ಪ್ರಕಟಿಸಿದ್ದರು. ಶುಕ್ರವಾರ ರಾತ್ರಿ 24 ಶಾಸಕರ ಹೆಸರನ್ನು ಅಂತಿಮಗೊಳಿಸಿದ್ದು, ಶನಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲೀಗ ಒಟ್ಟು 34 ಸಚಿವರು ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಕೇಂದ್ರದ ಉನ್ನತ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಹಲವು ಗಂಟೆಗಳ ಕಾಲ ಚರ್ಚೆಗಳು ನಡೆದಿದ್ದವು.

ಹಲವು ಸುತ್ತಿನ ಮಾತುಕತೆಗಳ ನಂತರ ಪಕ್ಷವು ಅಂತಿಮವಾಗಿ ನಿರ್ಧಾರ ತೆಗೆದುಕೊಂಡಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಪಟ್ಟಿಗೆ ತಮ್ಮ ಅನುಮೋದನೆಯನ್ನು ನೀಡಿದ್ದರು. ನೂತನ ಸಚಿವರ ಪಟ್ಟಿಯು ಜಾತಿ ಹಾಗೂ ಪ್ರಾದೇಶಿಕ ಸಮತೋಲನವನ್ನು ಹೊಂದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ತೀವ್ರ ಲಾಬಿ ನಡೆಸಿದ ಬಳಿಕ ಸಿದ್ದರಾಮಯ್ಯ ಪಾಳಯಕ್ಕೆ ಹೆಚ್ಚು ಸಚಿವ ಸ್ಥಾನ ನೀಡಲಾಗಿದೆ. ಸಿದ್ದರಾಮಯ್ಯ ಅವರು ಒಟ್ಟು 10 ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಳು ಬೆಂಬಲಿಗರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಉಳಿದ ಸಚಿವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಅವರಲ್ಲಿ ಹಿರಿಯ ಮುಖಂಡರಾದ ಎಚ್‌ಕೆ ಪಾಟೀಲ್ ಮತ್ತು ಈಶ್ವರ ಖಂಡ್ರೆ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಕೆಲ ಹೆಸರುಗಳ ವಿಚಾರದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಸುದೀರ್ಘ ಚರ್ಚೆಯ ಮೂಲಕ ಬಗೆಹರಿಸಲಾಗಿದೆ. ಅರ್ಹತೆ, ಸರ್ವಾಂಗೀಣ ಪ್ರಾತಿನಿಧ್ಯ ಮತ್ತು ಹಿರಿತನದ ಆಧಾರದ ಮೇಲೆ ಶಾಸಕರ ಹೆಸರನ್ನು ಆಯ್ಕೆ ಮಾಡಿರುವುದರಿಂದ ಯಾವುದೇ ಅಸಮಾಧಾನವಿಲ್ಲವೆಂದು ಪಕ್ಷ ಹೇಳಿಕೊಂಡಿದೆ.

ಕೃಷ್ಣ ಬೈರೇಗೌಡ, ಕೆ.ವೆಂಕಟೇಶ್, ದಿನೇಶ್ ಗುಂಡೂರಾವ್, ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಶಿವಾನಂದ ಪಾಟೀಲ್, ಆರ್ ಬಿ ತಿಮ್ಮಾಪುರ, ಎಚ್ ವೈ ಮೇಟಿ, ಬೈರತಿ ಸುರೇಶ್ ಮತ್ತು ರಹೀಮ್ ಖಾನ್ ಅವರು ಸಿದ್ದರಾಮಯ್ಯ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.
ಶಿವಕುಮಾರ್ ಪಾಳಯದಲ್ಲಿ ಮಧು ಬಂಗಾರಪ್ಪ, ಡಿ.ಸುಧಾಕರ್, ಚೆಲುವರಾಯಸ್ವಾಮಿ, ಮಂಕಾಳ್ ವೈದ್ಯ, ಎಂ.ಸಿ.ಸುಧಾಕರ್, ಎನ್.ಎಸ್.ಬೋಸರಾಜು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಗುರುತಿಸಿಕೊಂಡಿದ್ದಾರೆ.












Click it and Unblock the Notifications