Karnataka Major Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ?-ಮಾಹಿತಿ ತಿಳಿಯಿರಿ
ಕರ್ನಾಟಕ, ಜನವರಿ, 15: ರಾಜ್ಯದಲ್ಲಿ ಕಳೆದ ವರ್ಷ ಮಳೆಯಿಲ್ಲದೆ ಅನ್ನದಾತರು ಕಂಗೆಟ್ಟಿದ್ದಾರೆ. ಅಲ್ಲದೆ ಇದೀಗ ರಾಜ್ಯದ ಪ್ರಮುಖ ಜಲಾಶಯಗಳು ಕೂಡ ಬರಿದಾಗುವ ಹಂತವನ್ನು ತಲುಪುತ್ತಿವೆ. ಇದು ಕಳೆದ 125 ವರ್ಷಗಳಲ್ಲೇ ಅತ್ಯಂತ ಭೀಕರ ಬರಗಾಲ ಆಗಿದೆ. ಇನ್ನು ಬೇಸಿಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿಯಿದ್ದು, ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜನರ ಜೀವನಾಡಿ ಕೆಆರ್‌ಎಸ್ ಕೂಡ ಬತ್ತಿಹೋಗುವ ಹಂತವನ್ನು ತಲುಪಿದೆ. ಹಾಗಾದರೆ ಈ ಜಲಾಶಯ ಸೇರಿದಂತೆ ಇನ್ನಿತರ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಪ್ರಸ್ತುತ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮುಂಬರುವ ಬೇಸಿಗೆಯ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಕರ್ನಾಟ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಒದಗಿಸಿದ ಮಾಹಿತಿಯ ಪ್ರಕಾರ, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳ 11 ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಶೇಕಡಾ 40ಕ್ಕಿಂತ ಕಡಿಮೆ ನೀರು ಸಂಗ್ರಹ ಆಗಿದೆ.
ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುವ ಹಾರಂಗಿ, ಹೇಮಾವತಿ, ಕಬಿನಿ ಮತ್ತು ಕೃಷ್ಣರಾಜ ಸಾಗರ (KRS)ನಂತಹ ಪ್ರಮುಖ ಜಲಾಶಯಗಳಲ್ಲಿ 51 ಟಿಎಂಸಿ ಮಾತ್ರ ನೀರು ಇದೆ. ಇವುಗಳ ಒಟ್ಟು ಸಾಮರ್ಥ್ಯದ ಸಂಗ್ರಹ 115 ಟಿಎಂಸಿ ಆಗಿದೆ.
ಇನ್ನು ಕೃಷ್ಣಾ ಜಲಾನಯನ ಪ್ರದೇಶದ ಭದ್ರಾ, ವಾಣಿ ವಿಲಾಸ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮತ್ತು ನಾರಾಯಣಪುರ ಸೇರಿದಂತೆ ಏಳು ಜಲಾಶಯಗಳಲ್ಲೂ ನೀರು ದಿನದಿಂದ ದಿನಕ್ಕೆ ಕುಸಿಯುತ್ತಲೆ ಇದೆ. ಇವುಗಳ ಒಟ್ಟು ಸಾಮರ್ಥ್ಯ 422 ಟಿಎಂಸಿ ಇದ್ದು, ಇದೀಗ ಕೇವಲ 173 ಟಿಎಂಸಿ ನೀರಿದೆ.
ಕಳೆದ ವರ್ಷ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳಲ್ಲಿ ಕ್ರಮವಾಗಿ 81 ಟಿಎಂಸಿ ನೀರಿತ್ತು. ಇನ್ನು ಭದ್ರಾ, ವಾಣಿ ವಿಲಾಸ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ 331 ಟಿಎಂಸಿ ಅಡಿ ನೀರು ಸಂಗ್ರಹ ಆಗಿತ್ತು.
ಕೆಎಸ್ಎನ್ಡಿಎಮ್ಎನ್ಸಿ ಅಧಿಕಾರಿಗಳ ಪ್ರಕಾರ, ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ನೀರಿನ ಮಟ್ಟದಲ್ಲಿ ಮತ್ತಷ್ಟು ಕುಸಿತ ಆಗುವ ಸಾಧ್ಯತೆಯಿದೆ. ಆವಿ ಆಗುವುದರಿಂದ ಜಲಾಶಯಗಳಲ್ಲಿ ನೀರು ಕಡಿಮೆ ಆಗುತ್ತದೆ. ಬೇಸಿಗೆಯಲ್ಲಿ ಸರಾಸರಿ ಒಂದು ಟಿಎಂಸಿ ನೀರು ಎರಡೂ (ಕಾವೇರಿ ಮತ್ತು ಕೃಷ್ಣ) ಜಲಾನಯನ ಪ್ರದೇಶಗಳಿಂದ ಆವಿ ಆಗುತ್ತದೆ ಎಂದು ಹೇಳಿದರು.
ಬೇಸರದ ಸಂಗತಿಯೆಂದರೆ ಕೆಆರ್‌ಎಸ್ ಜಲಾಶಯವು ಬೆಂಗಳೂರಿನ ಕುಡಿಯುವ ನೀರಿನ ಮೂಲವಾಗಿದ್ದು, ಪ್ರಸ್ತುತ 19.5 ಟಿಎಂಸಿ ಅಡಿ ನೀರು ಮಾತ್ರ ಇದೆ. ಇದು ಮುಂಬರುವ ಕುಡಿಯುವ ನೀರಿನ ಬಿಕ್ಕಟ್ಟಿನ ಬಗ್ಗೆ ಆತಂಕವನ್ನು ಉಂಟುಮಾಡುತ್ತದೆ. ಆದರೆ ಈಗಿರುವ ನೀರಿನ ಸಂಗ್ರಹವು ನಗರದ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಇಂಜಿನಿಯರ್ ಸುರೇಶ್ ಬಿ ಮಾತನಾಡಿ, ಜೂನ್ ಅಂತ್ಯದವರೆಗೆ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ನಮಗೆ ಸುಮಾರು 12 ಟಿಎಂಸಿ ಅಡಿ ನೀರು ಬೇಕು. ಆದ್ದರಿಂದ ಈಗಿರುವ ಸಂಗ್ರಹದಿಂದ ನಾವು ಬೇಸಿಗೆಯನ್ನು ಸುಲಭವಾಗಿ ಎದುರಿಸಬಲ್ಲೆವು ಎಂದು ಹೇಳಿದ್ದಾರೆ ಅಂತಾ ವರದಿಯಾಗಿದೆ.
ಕೆಎಸ್‌ಎನ್‌ಎಂಡಿಸಿಯ ಸಲಹೆಗಾರ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಮುಂದಿನ ಮಾನ್ಸೂನ್ ಆಗಮನದವರೆಗೆ ಎಲ್ಲಾ ಪ್ರಾದೇಶಿಕ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿರುವ ಜಲಾಶಯಗಳಲ್ಲಿ ನೀರಿನ ಸಂಗ್ರಹವನ್ನು ಮೇಲ್ವಿಚಾರಣೆ ಮಾಡಲು ಮತ್ತು ಕುಡಿಯುವ ಉದ್ದೇಶಕ್ಕೆ ಪ್ರತ್ಯೇಕವಾಗಿ ನೀರನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications