ಕರುನಾಡಿನ ರಾಜಕೀಯ: ಹತ್ತು ವರ್ಷದ ಹಿಂದೆ!
ಲೋಕಸಭೆಗೆ ಮತದಾನವಾಗಿ, ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಅಡಗಿ ಕುಳಿತಿದೆ. ಅಭ್ಯರ್ಥಿಗಳು ಕೂಡ ಅವರಿಗೆ ಸೂಕ್ತವಾದ ಅಡಗುತಾಣಗಳಲ್ಲಿ ಕೂತಿದ್ದಾರೆ. ಆದರೆ ಈ ಅಭ್ಯರ್ಥಿಗಳು ಹತ್ತು ವರ್ಷಗಳ ಹಿಂದೆ ಏನು ಮಾಡುತ್ತಿದ್ದರು ಅನ್ನುವದನ್ನ ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದೆ ಪತ್ರಿಕೆ.
ಚಾಮರಾಜನಗರದಲ್ಲಿ ಈ ಬಾರಿ ರಾಚಯ್ಯನವರ ಸುಪುತ್ರ ಎ.ಆರ್. ಕೃಷ್ಣಮೂರ್ತಿಗೂ, ಉತ್ತಮ ಸಂಸದ ಎಂದು ಪ್ರಶಸ್ತಿ ಪಡೆದ ಧೃವನಾರಾಯಣರಿಗೂ ಭರ್ಜರಿ ಫೈಟು. ಜೆಡಿಎಸ್ ಶಿವಣ್ಣ ಅಲ್ಲಿ ಬೋರ್ಡಿಗೆ ಇಲ್ಲದಂತಾಗಿ, ಕಣ್ಣೀರಧಾರೆ ಸುರಿಸತೊಡಗಿದ್ದಾರೆ. ಹತ್ತು ವರ್ಷದ ಹಿಂದೆ, ಅಲ್ಲಿ ಗೆದ್ದೋರೆ ಶಿವಣ್ಣ. ಆಗಿನ್ನೂ ಕೃಷ್ಣಮೂರ್ತಿ ಮತ್ತು ಧೃವನಾರಾಯಣ ಲೋಕಸಭೆಯ ಮಟ್ಟಕ್ಕೇ ಇರಲಿಲ್ಲ. ಅವರಿಬ್ಬರೂ ಟಕ್ಕರ್ ತೆಗೆದುಕೊಂಡಿದ್ದು, ಸಂತೇಮರಹಳ್ಳಿಯ ವಿಧಾನಸಭೆ ಕ್ಷೇತ್ರಕ್ಕೆ. ಜಿದ್ದಾಜಿದ್ದಿನ ರಾಜಕೀಯದಲ್ಲಿ ಧೃವ ಕೇವಲ ಒಂದು ವೋಟಿನಿಂದ ಗೆದ್ದು ಬಂದರು. ನಲವತ್ತು ಸಾವಿರದ ಏಳುನೂರ ಐವತ್ತೆರಡು ವೋಟು ಪಡೆದಿದ್ದ ಧ್ರುವ ಕೇವಲ ಒಂದು ವೋಟಿನಲ್ಲಿ ಗೆದ್ದರೆ, ಆಗ ಜೆಡಿಎಸ್ ನಿಂದ ಸೋತಿದ್ದ ಕೃಷ್ಣಮೂರ್ತಿ ನಂತರ ಬಿಜೆಪಿಗೆ ವಲಸೆ ಬಂದು ಈ ಬಾರಿ ಧೃವನಿಗೆ ಚಾಲೆಂಜ್ ಕೊಟ್ಟಿದ್ದಾರೆ. ಆಗ ಜೆಡಿಎಸ್ ನಿಂದ ಗೆದ್ದ ಶಿವಣ್ಣ ಈ ಬಾರಿ ಚುನಾವಣೆಯಲ್ಲಿ ಬೋರ್ಡಿಗೇ ಇಲ್ಲ.
ಬೀದರ್ ಹತ್ತು ವರ್ಷದ ಹಿಂದೆ, ಬಿಜೆಪಿಯ ಭಧ್ರ ಕೋಟೆ. ಸತತ ಐದು ಬಾರಿ ಬಿಜೆಪಿಯಿಂದ ಗೆದ್ದ ರಾಮಚಂದ್ರ ವೀರಪ್ಪನವರಿಗೆ ಸೋಲಿನ ರುಚಿ ಸಿಕ್ಕಿದ್ದು ಎಪ್ಪತ್ತೇಳರ ಚುನಾವಣೆಯಲ್ಲಿ ಮಾತ್ರ. ಆಗ ಅವರು ಬಿ.ಎಲ್.ಡಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಆದರೀಗ ಹಂಡೆಯ ಮ್ಯಾಲೆ ಚೆಂಬು ಇಟ್ಟಿರುವ ಕಾರ್ಟೂನಿನಂತಿರುವ ಧರ್ಮಸಿಂಗ್ ಗೆ ಅಗ್ನಿಪರೀಕ್ಷೆ. ಕಳೆದಬಾರಿ ಸೋತಿದ್ದ ನಾಗಮಾರಪಲ್ಲಿ ಮಗನಿಗೆ ಟಿಕೆಟ್ ಕೊಡಿಸಲಾಗದೇ ಯಡಿಯೂರಪ್ಪನ ಜನ್ಮ ಜಾಲಾಡತೊಡಗಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ , ಚಿಕ್ಕೋಡಿ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಪರಿಸ್ಥಿತಿ ಹೇಗಿತ್ತು ಮುಂದೆ ಓದಿ

ಚಿಕ್ಕೋಡಿ ನೆನಪಿಗೆ ಬರೋದು ಚಿಂದೋಡಿ ಲೀಲಾ
ಚಿಕ್ಕೋಡಿ ಎಂದಾಕ್ಷಣ ನೆನಪಿಗೆ ಬರೋದು ಚಿಂದೋಡಿ ಲೀಲಾ! ಮೀಸಲು ಕ್ಷೇತ್ರವಾಗಿದ್ದ ಇಲ್ಲಿ ಶಂಕರಾನಂದರಿಗೆ ಸೋಲು ಅನ್ನೋ ಪದವೇ ಗೊತ್ತಿರಲಿಲ್ಲ. ತೊಂಬತ್ತಾರರಲ್ಲಿ ರತ್ನಮಾಲಾ ಕೈಲಿ ಸೋಲುಂಡ ಶಂಕರಾನಂದರಿಗೆ, ತೊಂಬತ್ತೆಂಟರಲ್ಲಿ ಮೇಲೇಳದಂತೆ ಏಟು ಕೋಟ್ಟೋರು ಜಿಗಜಿಣಗಿ!. ಹತ್ತು ವರ್ಷದ ಹಿಂದೆ ಎಸ್ ಬಿ ಘಾಟಗೆಯನ್ನ ಸೋಲಿಸಿ ಹ್ಯಾಟ್ರಿಕ್ ಸಾಧಿಸಿದ್ದ ಜಿಗಜಿಣಗಿ ಮೀಸಲು ಕ್ಷೇತ್ರ ಬಿಜಾಪುರಕ್ಕೆ ಶಿಫ್ಟ್ ಆಗಿದ್ದಾರೆ ಕಳೆದಬಾರಿಯ ಚುನಾವಣೆಯಿಂದ. ಬಿಜಾಪುರದಲ್ಲಿ ಹತ್ತು ವರ್ಷದ ಹಿಂದೆ ಪಾಳೆಗಾರಿಕೆ ಮಾಡಿಕೊಂಡಿದ್ದ ಯತ್ನಾಳ್ ಸಾಹೇಬನಿಗೆ ಈಗ ಅಲ್ಲಿ ವನವಾಸ. ಯಾಕಂದ್ರೆ ಬಿಜಾಪುರ ಈಗ ಮೀಸಲು ಕ್ಷೇತ್ರ!

ಆರು ಕ್ಷೇತ್ರ ದೊಡ್ಡ ಬದಲಾವಣೆಯನ್ನೇನೂ ಕಂಡಿಲ್ಲ
ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ ಉತ್ತರ, ಹಾಸನ ಮತ್ತು ದಾವಣಗೆರೆಯೆಂಬ ಆರು ಕ್ಷೇತ್ರಗಳಲ್ಲಿ ಭರ್ಜರಿ ಕ್ರಿಕೆಟ್ಟು. ಇಲ್ಲಿನ ಚುನಾವಣೆಯ ಕಥೆ ಹತ್ತು ವರ್ಷದಿಂದಲೂ ದೊಡ್ಡ ಬದಲಾವಣೆಯನ್ನೇನೂ ಕಂಡಿಲ್ಲ. ಈ ಕ್ಷೇತ್ರಗಳಲ್ಲಿ ಈಗ ಹ್ಯಾಟ್ರಿಕ್ ಬಾಲು. ಎರಡೆರಡು ಬಾರಿ ಗೆದ್ದಿರೋ ಅಲ್ಲಿನ ಸಂಸದರಿಗೆ ಈಗ ಮೂರನೇ ಬಾರಿ ಗೆದ್ದು ಬರೋ ಆಸೆ. ಹಾಸನದಲ್ಲಿ ಗೌಡರ ಗದ್ದಲ ಬಿಟ್ಟರೆ, ಉಳಿದ ಐದು ಕ್ಷೇತ್ರಗಳಲ್ಲೂ ಕಮಲದ್ದೇ ಕಲರವ. ಬೆಳಗಾವಿಯಲ್ಲಿ ಸುರೇಶ ಅಂಗಡಿ ಹತ್ತು ವರ್ಷದಿಂದ ಗೆದ್ದು ಬೀಗುತ್ತಿದ್ದರೆ, ಬಾಗಲಕೋಟೆಯಲ್ಲಿ, ಪಿ.ಸಿ ಗದ್ದಿಗೌಡರ್ ಸಲೀಸಾಗಿ ಗೆಲ್ಲುತ್ತಿದ್ದಾರೆ ಕಳೆದ ಹತ್ತು ವರ್ಷಗಳಿಂದ!

ಪ್ರಹ್ಲಾದ್ ಜೋಷಿ ವಿರುದ್ಧ ಡೈರಿ ಗಿರಾಕಿ ಫೈಟು
ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗಡೆಗೆ ಮ್ಯಾಗಿ ಮೇಡಮ್ಮು ಬದಲು ಪ್ರಫುಲ್ ಪಟೇಲ್ ಅಳಿಯ, ದೇಶಪಾಂಡೆ ಕುಲಪುತ್ರ ಎದುರಾಳಿ. ಧಾರವಾಡ ಪೇಡಾಕ್ಕಾಗಿ, ಪ್ರಹ್ಲಾದ್ ಜೋಷಿ ಮೂರನೇ ಬಾರಿ ಸೆಣೆಸುತ್ತಿರುವದು ಹಾಲಿನ ಡೈರಿ ಗಿರಾಕಿ ವಿನಯ ದೇಶಪಾಂಡೆಯೊಂದಿಗೆ. ದಾವಣಗೆರೆಯಲ್ಲಿ, ಅಡಿಕೆ ಮಂಡಿ ಧಣಿ, ಜಿ.ಎಮ್. ಸಿದ್ಧೇಶ್ವರ ಮೂರನೇ ಬಾರಿಗೂ ಶಾಮನೂರು ಮಲ್ಲಿಯ ವಿರುದ್ಧವೇ ತೊಡೆ ತಟ್ಟಬೇಕಾಗಿದೆ. ಹಾಸನದಲ್ಲಿ ಅರಕಲುಗೂಡು ಮಂಜು ಎದುರಿಗೆ ಹ್ಯಾಟ್ರಿಕ್ ಗೆಲುವಿಗಾಗಿ ಗೌಡರ ಗದ್ದಲ ಇದೆಯಾದರೂ ಹತ್ತು ವರ್ಷದ ಹಿಂದೆ, ತಮ್ಮ ಸಾಂಪ್ರದಾಯಿಕ ಎದುರಾಳಿ ಅಣ್ಣಯ್ಯನ ಜೊತೆ ಗುದ್ದಾಡಿದ್ದರು.

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗೋ ಕನಸು
ಗುರುಮಿಠಕಲ್ ನ ಗುರು ಮಲ್ಲಿಕಾರ್ಜುನ ಖರ್ಗೆಯವರಿಗೆ ಹತ್ತು ವರ್ಷದ ಹಿಂದೆ, ಮುಖ್ಯಮಂತ್ರಿಯಾಗೋ ಕನಸು ದಕ್ಕಲೇ ಇಲ್ಲ. ಗುರುಮಿಠಕಲ್ ನಲ್ಲಿ ಮೂವತ್ತೇಳು ಸಾವಿರದ ಆರು ವೋಟು ಪಡೆದು ಉಪಮುಖ್ಯಮಂತ್ರಿಯಾಗಿದ್ದ ಖರ್ಗೆ ಈ ಬಾರಿ ಗುಲ್ಬರ್ಗದಿಂದ ಹುರಿಯಾಳು. ಐದು ವರ್ಷದ ಹಿಂದೆ ಗೆದ್ದು ಕೇಂದ್ರದಲ್ಲಿ ಮಂತ್ರಿಯಾದ ಖರ್ಗೆ ಈ ಬಾರಿ ಹೇಗೋ? ಅಲ್ಲಿ ಹತ್ತು ವರ್ಷದ ಹಿಂದೆ ಗೆದ್ದಿದ್ದ ಇಕ್ಬಾಲ್ ಅಹ್ಮದ್ ಸರಡಗಿ ಈಗ ಸುದ್ದಿಯಲ್ಲೂ ಇಲ್ಲ. ಕಾರಣ, ಗುಲ್ವರ್ಗ ಈಗ ಮೀಸಲು ಕ್ಷೇತ್ರ!

ರಾಯಚೂರಿನಲ್ಲಿ ಮಾವ-ಅಳಿಯರ ನಡುವೆ ಕದನ
ರಾಯಚೂರಿನಲ್ಲಿ ಈಗ ಮಾವ-ಅಳಿಯರ ನಡುವೆ ಕದನ. ಆದರೆ ಹತ್ತು ವರ್ಷದ ಹಿಂದೆ, ವೆಂಕಟೇಶ ನಾಯಕ್ ಅಲ್ಲಿ ಹ್ಯಾಟ್ರಿಕ್ಕು ಸಾಧಿಸಿ ಬೀಗಿದ್ದರು. ಕೊಪ್ಪಳದಲ್ಲಿ ಹುರಿಯಾಳಾಗಿರುವ ಕರಡಿ ಸಂಗಣ್ಣ ಹತ್ತು ವರ್ಷದ ಹಿಂದೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಐದುಸಾವಿರದ ಮೂರುನೂರ ನಲವತ್ತೆಂಟು ವೋಟುಗಳಿಂದ ಸೋತು ಹೋಗಿದ್ದರು.

ಬಳ್ಳಾರಿ ಶ್ರೀರಾಮುಲು, ಚಿತ್ರದುರ್ಗದ ಹುಲಿ
ಬಳ್ಳಾರಿಯಲ್ಲಿ ಹತ್ತು ವರ್ಷದ ಹಿಂದೆ ವಿಧಾನಸಭೆಗೆ ಗೆದ್ದಿದ್ದ ಶ್ರೀರಾಮುಲು ಈ ಬಾರಿ ವಿಧಾನಸಭೆಗೆ ರಾಜೀನಾಮೆ ಒಗಾಯಿಸಿ, ಲೋಕಸಭೆಗೆ ಕಾದಾಡುತ್ತಿದ್ದಾರೆ. ಹತ್ತು ವರ್ಷದ ಹಿಂದೆ ಮೊದಲಬಾರಿಗೆ ಕಾಂಗೈನ ತೆಕ್ಕೆಯಿಂದ ಬಿಜೆಪಿ ಕಿತ್ತುಕೊಂಡಿತ್ತು ಈ ಕ್ಶೇತ್ರವನ್ನು. ಕರುಣಾಕರ್ ರೆಡ್ಡಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು. 2009 ರಲ್ಲಿ ಕ್ಷೇತ್ರ ಮೀಸಲು ಆದ ಕಾರಣದಿಂದ, ಶ್ರೀರಾಮುಲು ಸೋದರಿ ಜೆ. ಶಾಂತಾ ಹನುಮಂತಪ್ಪನವರ ವಿರುದ್ಧ ಗೆದ್ದು ಬಂದರು.
ಈ ಹನುಮಂತಪ್ಪನವರು ಚಿತ್ರದುರ್ಗದಿಂದ ಹತ್ತು ವರ್ಷದ ಹಿಂದೆ ಗೆದ್ದು ಬಂದಿದ್ದವರು. ಆದರೀಗ ಚಿತ್ರದುರ್ಗದಲ್ಲಿ ಒಬಾಮಾನನ್ನು ಸುಲಭವಾಗಿ ಮಾತಾಡಿಸಬಲ್ಲ ಆದರೆ, ಓಬವ್ವನ ಜೊತೆಗೆ ಮಾತನಾಡಿಸಲು ಕಷ್ಟ ಪಡುವ ಸಾಫ್ಟವೇರ್ ಗಿರಾಕಿ ಜನಾರ್ಧನ ಸ್ವಾಮಿಗೆ ಈ ಬಾರಿ ಗೂಳಿಹಟ್ಟಿ ಮತ್ತು ಚಂದ್ರಪ್ಪನ ವಿರುದ್ದ ಹೋರಾಟ.

ಧಾರವಾಡದಿಂದ ವಿಭಜನೆಯಾದ ಹಾವೇರಿ
ಹತ್ತು ವರ್ಷದ ಹಿಂದೆ, ಹಾವೇರಿ ಕ್ಷೇತ್ರವನ್ನ ಧಾರವಾಡ ದಕ್ಷಿಣ ಕ್ಷೇತ್ರ ಎನ್ನಲಾಗುತ್ತಿತ್ತು. ಐ ಜಿ ಸನದಿ ಮತ್ತು ಬಿ.ಎಮ್ ಮೆಣಸಿನಕಾಯಿ ಅವರ ಜುಗಲಬಂದಿಯಲ್ಲೇ ಸೊರಗಿದ್ದ ಈ ಕ್ಷೇತ್ರದಲ್ಲಿ ಮಂಜುನಾಥ ಕುನ್ನೂರು ಹತ್ತು ವರ್ಷದ ಹಿಂದೆ ಸನದಿ ಸಾಹೇಬರನ್ನ ಮನೆಗೆ ಕಳಿಸಿದ್ದರು. ಈ ಬಾರಿ ಉದಾಸಿಯ ಮಗ ಶಿವಕುಮಾರನಿಗೂ ಕಾಂಗ್ರೆಸ್ಸಿನ ಸಲೀಂ ಅಹ್ಮದ್ ಗೂ ರಿಪೀಟು ಫೈಟು!.

ಯಡಿಯೂರಪ್ಪ ಬಂಗಾರಪ್ಪ ಆಯನೂರು
ಶಿವಮೊಗ್ಗದಲ್ಲಿ ಹತ್ತು ವರ್ಷದ ಹಿಂದೆ ಯಡಿಯೂರಪ್ಪನವರೇ ಖುದ್ದು ನಿಂತು ಬಿ.ಜೆ.ಪಿ. ಯಿಂದ ಸಾರೆಕೊಪ್ಪದ ಬಂಗಾರಪ್ಪನವರನ್ನ ಗೆಲುವಿನ ದಡ ಹತ್ತಿಸಿದ್ದರು. ಆದರೀಗ ಬಂಗಾರಪ್ಪನ ಮಗಳು, ರಾಜಣ್ಣನ ಹಿರಿ ಸೊಸೆ ಎದುರಿಗೆ ಹೋರಾಡುತ್ತಿದ್ದಾರೆ. ಅಂದು ಬಂಗಾರಪ್ಪನವರಿಗೆ ಟಕ್ಕರ್ ಕೊಟ್ಟಿದ್ದ ಆಯನೂರು ಮಂಜುನಾಥ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದು ಯಡಿಯೂರಪ್ಪನ ಲೆಫ್ಟಿನೆಂಟ್ ರೀತಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ. ತಮ್ಮನ ವಿರುದ್ಧ ಸೊರಬದಲ್ಲಿ ಕಾಂಗೆಸ್ಸಿನಿಂದ ಗೆದ್ದಿದ್ದ ಕುಮಾರ್ ಬಂಗಾರಪ್ಪ ಟಿಕೆಟ್ ಸಿಗಲಿಲ್ಲವಲ್ಲೋ ಅಂದು ಅರಚುತ್ತಿದ್ದರೆ, ಸೋತ ಮಧು ಶಿವಮೊಗ್ಗದ ಮಟ್ಟಿಗೆ ಜೆಡಿಎಸ್ ನ ಪಾಳೇಗಾರನಂತೆ ಮಿಂಚುತ್ತಿದ್ದಾನೆ. ಇಲ್ಲಿಂದಲೇ ವಿಧಾನಸಭೆಗೆ ಗೆದ್ದಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪರೀಗ ಅಲ್ಲಿ ಅಪ್ರಸ್ತುತ.

ಬ್ರಹ್ಮಾವರದಿಂದ ಮಧ್ವರಾಜ ಮಗ ಪ್ರಮೋದ
ಹತ್ತು ವರ್ಷದ ಹಿಂದೆ ವಿಧಾನಸಭೆಗಾಗಿ ಬ್ರಹ್ಮಾವರದಿಂದ ಮಧ್ವರಾಜ ಮಗ ಪ್ರಮೋದನನ್ನ ಭರ್ಜರಿಯಾಗಿ ಸೋಲಿಸಿದ್ದ ಸಜ್ಜನ ಜಯಪ್ರಕಾಶ ಹೆಗಡೆಗೆ ಈಗ ಶೋಭಾ ಕರಂದ್ಲಾಜೆಯ ವಿರುದ್ಧ ಉಡುಪಿ-ಚಿಕ್ಕಮಗಳೂರಿನಲ್ಲಿ ಹೋರಾಟ. ಹತ್ತು ವರ್ಷದ ಹಿಂದೆ ಶೋಭಾ ಎಲ್ಲಿದ್ದರೋ ಯಾರಿಗ್ಗೊತ್ತು? ಉಡುಪಿಯಲ್ಲಿ ಮನೋರಮಾ ಮಧ್ವರಾಜ ಗೆದ್ದಿದ್ದರೆ, ಚಿಕ್ಕಮಗಳೂರಿನಲ್ಲಿ ಡಿ.ಸಿ ಶ್ರೀಕಂಠಪ್ಪ ಗೆದ್ದು ಬೀಗಿದ್ದರು. ಈಗ ಎರಡೂ ಕ್ಷೇತ್ರ ಕೂಡಿಕೊಂಡ ಮೇಲೆ, ಉಡುಪಿಯ ರಾಜಕಾರಣಿಗಳದ್ದೇ ಅಲ್ಲಿ ಮೆಲುಗೈ.

ದಕ್ಷಿಣ ಕನ್ನಡದ ಕೊಲ್ಗೇಟ್ ಸದಾನಂದಗೌಡರು
ದಕ್ಷಿಣ ಕನ್ನಡ ಕ್ಷೇತ್ರದಿಂದ ಹತ್ತು ವರ್ಷದ ಹಿಂದೆ ಗೆದ್ದಿದ್ದ ಕೊಲ್ಗೇಟ್ ಸದಾನಂದಗೌಡರು, ತದನಂತರ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲೂ ಗೆದ್ದು, ನಂತರ ಮುಖ್ಯಮಂತ್ರಿಯೂ ಆಗಿ ಈಗ ಬೆಂಗಳೂರು ಉತ್ತರದಲ್ಲಿ ಅದೃಷ್ಟ ಹುಡುಕುತ್ತಿದ್ದಾರೆ. ಅಲ್ಲಿ ನಾಲ್ಕು ಬಾರಿ ಗೆದ್ದು, ನಾಲ್ಕು ಬಾರಿ ಸೋತಿರುವ ಸಾಲಮೇಳದ ಜನಾರ್ಧನ ಪೂಜಾರಿಯವರಿಗೆ ಬಹುಶಃ ಇದು ಕೊನೇ ಪೂಜೆ. ಪೂಜಾರಿ ಇಲ್ಲಿ ಗೆದ್ದಿದ್ದು ಯಾವಾಗಲೂ ಲಕ್ಷಗಳ ಲೀಡಿನಲ್ಲಿ ಆದರೆ ಸೋತಿದ್ದು ಮಾತ್ರ ಸಾವಿರಗಳ ಲೆಕ್ಕಾಚಾರದಲ್ಲಿ.

ತುಮಕೂರಿನಲ್ಲಿ ತ್ರಿಕೋನ ಸ್ಫರ್ಧೆ
ತುಮಕೂರಿನಲ್ಲಿ ಜಿ ಎಸ್ ಬಸವರಾಜು ಸೋಲು ಗೆಲುವಿನ ಜೋಕಾಲಿ ಜೀಕಿದವರೆ. ಆದರೆ ಹತ್ತು ವರ್ಷದ ಹಿಂದೆ ಇಲ್ಲಿ ಗೆದ್ದಿದ್ದು, ಕರುನಾಡಿನ ಧೀಮಂತ ರಾಜಕಾರಣಿ ದಿವಂಗತ ಎಸ್ ಮಲ್ಲಿಕಾರ್ಜುನಯ್ಯನವರು. 1984 ರಿಂದ ನಾಲ್ಕು ಬಾರಿ ಗೆದ್ದು ಒಮ್ಮೆ ಸೋತಿರುವ ಬಸವರಾಜು ಈ ಬಾರಿ ಇಲ್ಲಿ ತ್ರಿಕೋನ ಸ್ಫರ್ಧೆಯಲ್ಲಿದ್ದಾರೆ.

ಮಂಡ್ಯದಲ್ಲಿ ಈಗ ರಮ್ಯ ಚೈತ್ರ ಕಾಲ
ಮಂಡ್ಯದಲ್ಲಿ ಈಗ ರಮ್ಯ ಚೈತ್ರ ಕಾಲ. ಆದರೆ ಹತ್ತು ವರ್ಷದ ಹಿಂದೆ ಇಲ್ಲಿ ನೆಡೆದಿದ್ದು ಆಪರೇಷನ್ ಅಂತ! ಮಂಡ್ಯದ ಜನತೆ ಅಜಮಾಸು ಒಂದೂವರೆ ಲಕ್ಷ ವೋಟಿನ ಅಂತರದಲ್ಲೇ ಗೆಲ್ಲಿಸಿ ಕರೆತಂದಿದ್ದರು ಸತತ ಮೂರನೇ ಬಾರಿಗೆ ಅಂಬಿಯನ್ನ! ಆದರೀಗ ರಮ್ಯಳಿಗೆ ಪುಟ್ಟರಾಜುವಿನಷ್ಟೇ ಎದುರಾಳಿಯ ಅಂಬಿಯ ಅಭಿಮಾನಿ ಸೈನ್ಯ. ಮೈಸೂರಿನಲ್ಲಿ ಹತ್ತು ವರ್ಷದ ಹಿಂದೆ ಗೆದ್ದಿದ್ದ ಸಿ.ಹೆಚ್ ವಿಜಯಶಂಕರರಿಗೆ ಟಿಕೆಟ್ಟು ಕೂಡ ಸಿಗಲಿಲ್ಲ. ಪೆಚ್ಚು ಮೋರೆ ಹಾಕಿಕೊಂಡು ಹಾಸನಕ್ಕೆ ಹೋಗಿದ್ದಾರೆ ವಿಜಯಶಂಕರ್.

ಕನಕಪುರ ಈಗ ಬೆಂಗಳೂರು ಗ್ರಾಮಾಂತರ
ಕನಕಪುರ ಈಗ ಬೆಂಗಳೂರು ಗ್ರಾಮಾಂತರ. ಅಂದಕಾಲತ್ತಿಲ್ ಪತ್ರಕರ್ತೆ, ತೇಜಮ್ಮ ಗೌಡರಂಥಾ ಗೌಡರನ್ನೇ ಥರ್ಡ್ ಪ್ಲೇಸಿಗೆ ಕಳಿಸಿದ್ದು ಹತ್ತು ವರ್ಷದ ಹಿಂದೆ. ಆದರೀಗ ತೇಜಮ್ಮ ಸವಕಲಾದ ನಾಣ್ಯ ಈ ಕ್ಷೇತ್ರದಲ್ಲಿ. ಇಲ್ಲಿ ರಿಯಲ್ ಎಸ್ಟೇಟುಗಳ ಡಾನ್ ಗಳದ್ದೇ ಕಲರವ. ಇಲ್ಲಿಂದ ಎರಡು ಬಾರಿ ಗೆದ್ದಿದ್ದ ಕುಮಾರಸ್ವಾಮಿ ಕೂಡ ಯಾಕೋ ಚಿಕ್ಕಬುಳ್ಳಾಪುರಕ್ಕೆ ವಲಸೆ ಹೋಗಿಬಿಟ್ಟಿದ್ದಾರೆ. ಅಲ್ಲಿ ಅವರಿಗೆ ಬಚ್ಚೇಗೌಡ ಮತ್ತು ವೀರಪ್ಪ ಮೊಯ್ಲಿಯವರೊಡನೆ ಕಾದಾಡುವ ಹುಕಿ. ಹತ್ತು ವರ್ಷದ ಹಿಂದಿನವರೆಗೂ ಆರ್. ಎಲ್. ಜಾಲಪ್ಪನವರ ಜಹಗೀರಾಗಿದ್ದ ಚಿಕ್ಕಬುಳ್ಳಾಪುರ ಈರ್ವರು ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಮಂತ್ರಿಗಳೊಬ್ಬರ ನಡುವಿನ ಕಾದಾಟದ ಸ್ಟಾರ್ ಕ್ಷೇತ್ರ.

ಜನಾಬ್ ಜಾಫರ್ ಶರೀಫ್ ಗೆ ಹತ್ತು ವರ್ಷ
ಬೆಂಗಳೂರು ಉತ್ತರದಲ್ಲಿ ಎಪ್ಪತ್ತರ ದಶಕದಿಂದಲೂ ಗೆಲ್ಲುತ್ತಿದ್ದ ಜನಾಬ್ ಜಾಫರ್ ಶರೀಫ್ ಗೆ ಹತ್ತು ವರ್ಷದಿಂದೀಚೆ ಬರೀ ಸೋಲು. ಹತ್ತು ವರ್ಷದ ಹಿಂದೆ ಸಾಂಗ್ಲಿಯಾನ ಕೈಯಲ್ಲಿ ಸೋತ ಶರೀಫ್ ಸಾಹೇಬರಿಗೆ ಈ ಬಾರಿ ಟಿಕೆಟ್ ಕೂಡ ತುಟ್ಟಿಯಾಗಿಬಿಟ್ಟಿತು. ಬೆಂಗಳೂರು ಸೆಂಟ್ರಲ್ ಹತ್ತು ವರ್ಷದ ಹಿಂದೆ ಒಂದು ಕ್ಷೇತ್ರವೇ ಆಗಿರಲಿಲ್ಲ!

ಬೆಂಗಳೂರು ದಕ್ಷಿಣ ಮತ್ತು ಕೋಲಾರ
ಇನ್ನು ಬೆಂಗಳೂರು ದಕ್ಷಿಣ ಮತ್ತು ಕೋಲಾರ. ಬೆಂ.ದಕ್ಷಿಣದಲ್ಲಿ ಅನಂತೂವಿನ ಅವಾಂತರ ಆರನೇ ಬಾರಿಗೂ ಮುಂದುವರೆಯುತ್ತಾ? ಕಳೆದ ಹದಿನೆಂಟು ವರ್ಷಗಳಿಂದಲೂ ಅಲ್ಲಿ ಅನಂತಕುಮಾರರಿಗೇ ಸೋಲೇ ಇಲ್ಲ. ಇನ್ನು ಕೋಲಾರದಲ್ಲಿ ಮುನಿಯಪ್ಪನವರ ಬಗ್ಗೆ ಮತದಾರ ಮುನಿಯುತ್ತಲೇ ಇಲ್ಲ. ಇಪ್ಪತ್ಮೂರು ವರ್ಷದಿಂದಲೂ ಇಲ್ಲಿನ ಅನಭಿಷಕ್ತ ದೊರೆ ಮುನಿಯಪ್ಪ.












Click it and Unblock the Notifications