ಬ್ರೇಕಿಂಗ್ ನ್ಯೂಸ್: ಕರ್ನಾಟಕ ಸರ್ಕಾರದ ಮಾರ್ಗಸೂಚಿಯಲ್ಲಿ ಏನೇನಿದೆ?
ಬೆಂಗಳೂರು, ಮೇ.18: ಕರ್ನಾಟಕದಲ್ಲಿ ಲಾಕ್ ಡೌನ್ 4.0 ಮಾರ್ಗಸೂಚಿಯನ್ನು ಹೊರಡಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಕೆಂಪು ವಲಯ ಮತ್ತು ಕಂಟೇನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಎಲ್ಲ ಭಾಗಗಳಲ್ಲಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಮೇ.19ರಿಂದಲೇ ರಾಜ್ಯದಲ್ಲಿ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತದೆ. ಕೆಂಪು ವಲಯ ಮತ್ತು ಕಂಟೇನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಕೆಎಸ್ಆರ್ ಟಿಸಿಯ ಎಲ್ಲ ನಾಲ್ಕು ವಿಭಾಗಗಳ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಭಾರತ ಲಾಕ್ ಡೌನ್ 4.O ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ!
ಬಿಎಂಟಿಸಿ, ಕೆಎಸ್ ಆರ್ ಟಿ, ನೈರುತ್ಯ, ಈಶಾನ್ಯ ಸಾರಿಗೆಗೆ ಮಂಗಳವಾರ ಚಾಲನೆ ನೀಡಲಾಗುತ್ತದೆ. ಸರ್ಕಾರಿ ಬಸ್ ಗಳ ಜೊತೆಗೆ ಖಾಸಗಿ ಬಸ್ ಗಳ ಓಡಾಟಕ್ಕೂ ಅನುಮತಿ ನೀಡಲಾಗಿದೆ. ಆದರೆ ಒಂದು ಬಸ್ ನಲ್ಲಿ ಕೇವಲ 30 ಜನ ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಇದರಿಂದ ನಷ್ಟವಾಗುತ್ತೆ ಎಂಬುದು ತಿಳಿದಿದ್ದು, ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡುವುದಿಲ್ಲ. ಬದಲಿಗೆ ಸರ್ಕಾರವೇ ಆ ವೆಚ್ಚವನ್ನು ಭರಿಸಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ
ಬಸ್ ಸಂಚಾರಕ್ಕೆ ಅನುಮತಿ ನೀಡಿದಾಕ್ಷಣ ಅನಗತ್ಯವಾಗಿ ಓಡಾಡುವಂತಿಲ್ಲ. ಪ್ರಯಾಣಿಕರು ಬಸ್ ಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ನಿಯಮವನ್ನು ಪಾಲನೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇನ್ನು, ಅಂತರ ರಾಜ್ಯದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಬೇಕು. ಆದರೆ ಮಹಾರಾಷ್ಟ್ರ, ಕೇರಳ, ತಮಿಳುನಾಡು ಹಾಗೂ ಗುಜರಾತ್ ಬಸ್ ಗಳಿಗೆ ರಾಜ್ಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ. ಬೆಳಗ್ಗೆ 7 ರಿಂದ ಸಂಜೆ ರಾತ್ರಿ 7 ಗಂಟೆವರೆಗೂ ಮಾತ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. 7 ಗಂಟೆ ಬಳಿಕ ಸಂಚಾರ ನಡೆಸಿದರೆ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ.

ಕೆಂಪು ವಲಯ, ಕಂಟೇನ್ಮೆಂಟ್ ಝೋನ್ ಗಳಲ್ಲಿ ಬಿಗಿ ಭದ್ರತೆ
ರಾಜ್ಯದಲ್ಲಿ ಇರುವ ಕೆಂಪು ವಲಯ ಹಾಗೂ ಕಂಟೇನ್ಮೆಂಟ್ ಝೋನ್ ಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಬೇರೆ ಕಾರಣಕ್ಕೆ ಜನರು ಹೊರಗೆ ಬರುವುದಕ್ಕೆ ಅವಕಾಶವಿಲ್ಲ. ಜೊತೆಗೆ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಮಾತ್ರ ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ.

ರೈಲ್ವೆ, ಟ್ಯಾಕ್ಸಿ, ಆಟೋ ಸಂಚಾರಕ್ಕೆ ಹಸಿರು ನಿಶಾನೆ
ರಾಜ್ಯದೊಳಗೆ ರೈಲು ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಇದರ ಜೊತೆಗೆ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಟೋ ಸಂಚಾರಕ್ಕೆ ಸರ್ಕಾರವು ಹಸಿರು ನಿಶಾನೆ ತೋರಿದೆ. ಆದರೆ ಆಟೋಗಳಲ್ಲಿ ಚಾಲಕರನ್ನು ಹೊರತುಪಡಿಸಿ ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು, ಮ್ಯಾಕ್ಸಿ ಕ್ಯಾಬ್ ನಲ್ಲಿ ಚಾಲಕ ಬಿಟ್ಟು ಮೂವರು ಪ್ರಯಾಣಿಸಲು ಅನುಮತಿ ನೀಡಿದೆ.

ಸಿನಿಮಾ ಥಿಯೇಟರ್, ಮಾಲ್ ಗಳು ಬಂದ್
ರಾಜ್ಯದಲ್ಲಿ ಮಾಲ್ ಗಳು ಹಾಗೂ ಸಿನಿಮಾ ಥಿಯೇಟರ್ ಹಾಗೂ ಹೋಟೆಲ್ ಗಳು ಎಂದಿನಂತೆ ಬಂದ್ ಆಗಿರಲಿವೆ. ಉಳಿದಂತೆ ಬಟ್ಟೆ, ಚಿನ್ನ-ಬೆಳ್ಳಿ ಅಂಗಡಿ, ಸೆಲೂನ್ ಶಾಪ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದರ ಜೊತೆಗೆ ಪಾರ್ಕ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಬೆಳಗ್ಗೆ 7 ರಿಂದ 9ರವೆರಗೂ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಕಂಟೇನ್ಮೆಂಟ್ ಝೋನ್ ಗಳಲ್ಲಿ ಪಾರ್ಕ್ ಗಳನ್ನು ತೆರೆಯಲು ಯಾವುದೇ ಅನುಮತಿ ನೀಡಿಲ್ಲ.

ಭಾನುವಾರ ರಾಜ್ಯದ ಎಲ್ಲ ಅಂಗಡಿ-ಮುಂಗಟ್ಟು ಬಂದ್
ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಭಾನುವಾರ ಕಂಪ್ಲೀಟ್ ಬಂದ್ ಮಾಡಬೇಕು. ಎಂಎಸ್ಐಎಲ್, ವೈನ್ ಶಾಪ್ ಸೇರಿದಂತೆ ಎಲ್ಲ ಅಂಗಡಿಗಳನ್ನು ಮುಚ್ಚಬೇಕು ಎಂದು ಸಿಎಂ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ. ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಅಂಥವರ ವಿರುದ್ಧ ಶಿಸ್ತುಕ್ರಮ ತೆಗದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.