Karnataka Recruitment: ಎಸ್‌ಸಿ, ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಬಗ್ಗೆ ಪರಮೇಶ್ವರ್ ಬಿಗ್ ಅಪ್ಡೇಟ್
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬ್ಯಾಕ್‌ಲಾಗ್ (ಹಿಂಬಾಕಿ) ಹುದ್ದೆಗಳ ನೇಮಕಾತಿಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಬೇಕು. ಅದರಲ್ಲಿಯೂ ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಜತೆಗೆ ವಿಲೀನ ಮಾಡದೇ ಪ್ರತ್ಯೇಕವಾಗಿ ಇಡೀ ರಾಜ್ಯಕ್ಕೆ ಒಂದು ಬಾರಿ ಅಧಿಸೂಚನೆ ಹೊರಡಿಸಬೇಕೆಂಬ ನಿರ್ಧಾರಕ್ಕೆ ಸಂಪುಟ ಉಪಸಮಿತಿ ನಿರ್ಧಾರಕ್ಕೆ ಬಂದಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಇಂದು ಗುರುವಾರ ಎಸ್‌ಸಿ/ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಪರಾಮರ್ಶಿಸಲು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂಪುಟ ಉಪಸಮಿತಿ ಸಭೆಯೂ ವಿಕಾಸಸೌಧದಲ್ಲಿ ನಡೆಯಿತು.

ಈ ಸಭೆಯಲ್ಲಿ ಮಾತನಾಡಿದ ಡಿಸಿಎಂ, ರಾಜ್ಯ ಸರ್ಕಾರಿ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಎಸ್‌ಸಿ/ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆಗಳ ಮಾಹಿತಿ ಪಡೆದ ಸಮಿತಿ, ಕೂಡಲೆ ನೇಮಕಾತಿ ಆರಂಭಿಸಬೇಕು ಎಂದು ಸೂಚಿಸಿದರು.
ರಾಜ್ಯಕ್ಕೆ ಒಂದು ಅಧಿಸೂಚನೆ, ಹುದ್ದೆ ಹಂಚಿಕೆ
ಸದ್ಯ ನಡೆಯುತ್ತಿರುವ ನೇಮಕಾತಿ ಜತೆಗೆ ಸೇರಿಸದೆ ಪ್ರತ್ಯೇಕವಾಗಿ ಇಡೀ ರಾಜ್ಯಕ್ಕೆ ಒಂದು ಅಧಿಸೂಚನೆ ಹೊರಡಿಸಿ ಆನಂತರ ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳನ್ನು ಹಂಚಬೇಕು ಎಂಬುದನ್ನು ನಿರ್ಧಾರ ಮಾಡಿಕೊಳ್ಳಬೇಕು. ಜಿಲ್ಲೆಗೊಂದು ನೋಟಿಫಿಕೇಷನ್ ಹೊರಡಿಸುವ ಅಗತ್ಯ ಇಲ್ಲವೆಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಾಗಿ ಪರಮೇಶ್ವರ್ ಅವರ ನಿರ್ದೇಶನ ನೀಡಿದರು.
ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಡಿಸಿಎಂ
ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಎಸ್‌ಸಿ/ಎಸ್‌ಟಿ ನೇಮಕಾತಿ ಹಿಂಬಾಕಿ ಹೆಚ್ಚು ಪ್ರಮಾಣದಲ್ಲಿ ಉಳಿದಿರುವುದು ಗಮನಿಸಿದ ಉಪಸಮಿತಿ ಸದಸ್ಯರು, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಹಿಂಬಾಕಿ ಉಳಿದಿರುವ ನೇಮಕಾತಿ ಮಾಡಿಕೊಳ್ಳಬೇಕು. ಯಾವ ಶಿಕ್ಷಣ ಸಂಸ್ಥೆಗಳು ನಿರ್ಲಕ್ಷ್ಯ ವಹಿಸುತ್ತಾರೋ ಅಂತವರಿಗೆ ಸರ್ಕಾರದಿಂದ ಕೊಡಲಾಗುತ್ತಿರುವ ಅನುದಾನವನ್ನು ಸ್ಥಗಿತ ಮಾಡುವಂತೆ ಸಮಿತಿ ಸದಸ್ಯರು ಸೂಚನೆ ನೀಡಿದರು.
ಇಲಾಖೆಯಿಂದ ಎಸ್‌ಸಿ/ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆಗಳ ಮಾಹಿತಿ ಪಡೆದು ವಿಶೇಷ ಕಾರ್ಯಾಚರಣೆ ನಡೆಸಬೇಕೆಂದು ಸಭೆಯಲ್ಲಿ ನೀರ್ಣಯಿಸಲಾಗಿದೆ. ಈ ಮೂಲಕ ಒಂದೂವರೆ ವರ್ಷದಲ್ಲಿ ಎಲ್ಲ ಹಿಂಬಾಕಿ ಹುದ್ದೆಗಳ ಭರ್ತಿ ಮಾಡಬೇಕು. ನೇಮಕಾತಿ ವೇಳೆ ಕೇವಲ ಅಂಕ ಮತ್ತು ವಯಸ್ಸು ಮಾತ್ರ ಪರಿಗಣಿಸಬೇಕು. ಇವು ಹಿಂಬಾಕಿ ಉಳಿದ ಹುದ್ದೆಗಳು ಆಗಿರುವ ಕಾರಣಕ್ಕೆ ಹಣಕಾಸು ಇಲಾಖೆಯಿಂದ ಮತ್ತೆ ಒಪ್ಪಿಗೆ ಪಡೆಯುವ ಅಗತ್ಯ ಇಲ್ಲ. ನೇರವಾಗಿ ನೇಮಕಾತಿ ನಡೆಸಬಹುದೆಂದು ಚರ್ಚಿಸಲಾಗಿದೆ ಎಂದು ವಿವರಿಸಿದರು.
ಬಾಕಿ ನೇಮಕಾತಿ: ಅಧಿಕಾರಿಗಳಿಗೆ ನೋಟಿಸ್ ಜಾರಿ
ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಹಿಂಬಾಕಿ ಉಳಿದಿರುವ ಹುದ್ದೆಗಳ ನೇಮಕಾತಿಗೆ ಆಡಳಿತ ಮಂಡಳಿ ಆಸಕ್ತಿ ವಹಿಸಿದರೂ ಸರ್ಕಾರದ ಅಧಿಕಾರಿಗಳು ಒಪ್ಪಿಗೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಒಪ್ಪಿಗೆ ಕೊಡಲು ನೀವು ಯಾಕೇ ಅಡ್ಡಿ ಮಾಡುತ್ತೀರ ಎಂದು ಸಚಿವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಗೈರು ಆಗಿರುವ ವಿಚಾರಕ್ಕೆ ಸದನ ಸಮಿತಿ ಅಸಮಧಾನ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡುವಂತೆ ತಿಳಿಸಿದರು.
ಈ ಸಭೆಯಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಟಿ.ರಘುಮೂರ್ತಿ, ಕೆ.ಎಸ್. ಬಸವಂತಪ್ಪ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನೋಡಲ್ ಏಜೆನ್ಸಿ ಸಲಹೆಗಾರ ಡಾ. ಇ.ವೆಂಕಟಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.


Click it and Unblock the Notifications
