ವಿದೇಶಿಯರಿಗೆ ಕರ್ನಾಟಕ ನೆಚ್ಚಿನ ವಿದ್ಯಾಕ್ಷೇತ್ರ
ಬೆಂಗಳೂರು, ನ.12: ಭಾರತದ ಮಾಹಿತಿ ಮತ್ತು ತಂತ್ರಜ್ಞಾನದ ತವರೂರಾಗಿರುವ ಕರ್ನಾಟಕ ರಾಜ್ಯದ ಕೀರ್ತಿ ವಿದೇಶಯರನ್ನು ಆಕರ್ಷಿಸುವಲ್ಲಿ ಮತ್ತೊಮ್ಮೆ ಸಫಲವಾಗಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ವಿದೇಶಿ ವಿದ್ಯಾರ್ಥಿಗಳು ಕರ್ನಾಟಕವೇ ವ್ಯಾಸಂಗಕ್ಕೆ ಯೋಗ್ಯ ತಾಣ ಎಂದಿದ್ದಾರೆ.
ಉನ್ನತ ವ್ಯಾಸಂಗ ಬಯಸುವ ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕ ನೆಚ್ಚಿನ ತಾಣವಾಗಿದೆ ಎಂದು ಜಂಟಿ ಸಮೀಕ್ಷೆಯೊಂದು ಹೇಳಿದೆ. ಉನ್ನತ ವ್ಯಾಸಂಗದ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಕಾನ್ಪೆಡೆರೇಷನ್ ಆಫ್ ಇಂಡಿಯನ್ ಎಕಾನಾಮಿ(ಸಿಐಐ) ನೀಡಿರುವ ಜಂಟಿ ಸಮೀಕ್ಷಾ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ವರದಿ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸುಸಜ್ಜಿತ ವ್ಯವಸ್ಥೆಯುಳ್ಳ ಕಾಲೇಜುಗಳಿದ್ದು, ವಿದ್ಯಾರ್ಥಿ-ಶಿಕ್ಷಕ ಅನುಪಾತ ಉತ್ತಮ ಮಟ್ಟದಲ್ಲಿದ್ದು ಬೇರೆ ರಾಜ್ಯದಲ್ಲಿ ಈ ಕೊರತೆ ಎದ್ದು ಕಾಣುತ್ತದೆ.
ಪ್ರತಿ ವರ್ಷ 27,531 ವಿದೇಶಿ ಮೂಲದ ವಿದ್ಯಾರ್ಥಿಗಳು ಭಾರತದಲ್ಲಿ ಉನ್ನತ ವ್ಯಾಸಂಗ ಮುಂದುವರೆಸಲು ಬಯಸುತ್ತಾರೆ. ಈ ಪೈಕಿ 10,000 ಕ್ಕೂ ಅಧಿಕ ವಿದ್ಯಾರ್ಥಿಗಳು ಕರ್ನಾಟಕದ ಕಾಲೇಜುಗಳಲ್ಲೇ ಓದಲು ಬಯಸುವುದು ಕಂಡು ಬಂದಿದೆ.

ಉಳಿದಂತೆ, ಇತರೆ ರಾಜ್ಯಗಳ ಪೈಕಿ ಆಂಧ್ರಪ್ರದೇಶ 4,698 ವಿದ್ಯಾರ್ಥಿಗಳು ಹಾಗೂ ಮಹಾರಾಷ್ಟ್ರದಲ್ಲಿ 4,369 ವಿದ್ಯಾರ್ಥಿಗಳಿದ್ದು ಕರ್ನಾಟಕದ ನಂತರದ ಸ್ಥಾನಗಳನ್ನು ಈ ರಾಜ್ಯಗಳು ಪಡೆದಿವೆ.
ತಮಿಳುನಾಡು 2383 ಹಾಗೂ ದೆಹಲಿ 1529 ವಿದ್ಯಾರ್ಥಿಗಳನ್ನು ಹೊಂದಿದ್ದು ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ. ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ 3,098 ಕಾಲೇಜು(ದೇಶದ ಶೇ 9.4)ಗಳಿದ್ದು ಬಹುತೇಕ ಉತ್ತಮ ಸ್ಥಿತಿಯನ್ನು ನಿರಂತರವಾಗಿ ಕಾಯ್ದುಕೊಂಡಿವೆ.
ರಾಜ್ಯ ವಿಶ್ವವಿದ್ಯಾಲಯಗಳ ಪೈಕಿ ಎರಡನೇ ಸ್ಥಾನ ಹಾಗೂ ಡೀಮ್ಡ್ ವಿವಿಗಳ ಪೈಕಿ ಮೂರನೇ ಸ್ಥಾನವನ್ನು ಕರ್ನಾಟಕ ಹೊಂದಿದೆ. ದೇಶದ ವಿವಿಗಳ ಶೇ 6.9 ರಷ್ಟು ಕರ್ನಾಟಕ ಹೊಂದಿದೆ.
ಅತಿ ಹೆಚ್ಚು 6 ಮೆಡಿಕಲ್ ವಿಶ್ವವಿದ್ಯಾಲಯಗಳನ್ನು ರಾಜ್ಯ ಹೊಂದಿದೆ. ಕಾಲೇಜುಗಳ ದಟ್ಟಣೆಯ ಅಂಕಿ ಅಂಶದಲ್ಲಿ ಎರಡನೇ ಸ್ಥಾನದಲ್ಲಿದ್ದು ಪ್ರತಿ ಲಕ್ಷ ಜನಸಂಖ್ಯೆಗೆ 44 ಕಾಲೇಜುಗಳನ್ನು ಹೊಂದಿದೆ. ಅಖಿಲ ಭಾರತದಲ್ಲಿ ಈ ಸರಾಸರಿ 23 ಕಾಲೇಜಿನಷ್ಟಿದೆ ಎಂದು ವರದಿ ಹೇಳಿದೆ.
ಆದರೆ, ಕಾಲೇಜಿಗೆ ದಾಖಲಾತಿಯಲ್ಲಿ ರಾಜ್ಯ ಸ್ವಲ್ಪ ಹಿಂದೆ ಬಿದ್ದಿದೆ. ಪ್ರತಿ ಕಾಲೇಜಿಗೆ 700 ವಿದ್ಯಾರ್ಥಿಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ಸುಮಾರು 16 ಲಕ್ಷ ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳಿಗೆ ದಾಖಲಾತಿ ಬಯಸುತ್ತಾರೆ.
ರಾಜ್ಯದ ಶೇ 90 ರಷ್ಟು ಕಾಲೇಜುಗಳು ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆದಿವೆ. ಉಳಿದವು ವಿವಿ ಕಾಲೇಜು, ಸ್ವಾಯುತ್ತ ಕಾಲೇಜು, ಆಫ್ ಕ್ಯಾಂಪಸ್ ಮುಂತಾದ ವರ್ಗಕ್ಕೆ ಸೇರಿವೆ.
ರಾಜ್ಯದಲ್ಲಿ ಶೇ 66.3 ರಷ್ಟು ಖಾಸಗಿ ಅನುದಾನ ರಹಿತ ಕಾಲೇಜುಗಳಿವೆ. ಶೇ 20 ರಷ್ಟು ಸರ್ಕಾರಿ ಅನುದಾನಿತ ಕಾಲೇಜುಗಳಿದ್ದು, ಶೇ 13.5 ರಷ್ಟು ಖಾಸಗಿ ಅನುದಾನಿತ ಕಾಲೇಜುಗಳನ್ನು ಗುರುತಿಸಲಾಗಿದೆ.
CII-MHRD ವರದಿ ಪ್ರಕಾರ 1.32 ಬೋಧಕ ವರ್ಗ, 0.95 ಬೋಧಕೇತರ ವರ್ಗ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೋಧಕ ವರ್ಗದ ಅಂಕಿ ಅಂಶದಲ್ಲಿ ಭಾರತ ಮಟ್ಟದಲ್ಲಿ ರಾಜ್ಯ ಹಿಂದೆ ಬಿದ್ದಿದೆ ಆದರೆ, ಉಳಿದಂತೆ ರಾಜ್ಯ ವಿದೇಶಿಯರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.












Click it and Unblock the Notifications