Industry: ಕೈಗಾರಿಕೆ ಪ್ರದೇಶಗಳಲ್ಲಿ ಹೆಚ್ಚಾಯ್ತು ನೀರಿಗೆ ಹಾಹಾಕಾರ: ತ್ವರಿತ ಕ್ರಮಕ್ಕೆ ಸೂಚನೆ
ಬೆಂಗಳೂರು, ಫೆಬ್ರವರಿ 05: ಬೇಸಿಗೆ ಶುರುವಾಗಿದೆ. ನಗರವಾಸಿಗಳಂತೆಯೇ ದಿನವಿಡೀ ಕೈಗಾರಿಕೆ ಪ್ರದೇಶಗಳಲ್ಲಿ ಶ್ರಮಿಸುವವರಿಗೂ ನೀರಿನ ಸಂಕಷ್ಟ ಎದುರಾಗಿದೆ. ಹೌದು, ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.
ರಾಜ್ಯದ ನಾನಾ ಕೈಗಾರಿಕಾ ಪ್ರದೇಶಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸೋಮವಾರ ವಿವಿಧ ಇಲಾಖೆಗಳ ಜತೆ ಸಭೆ ನಡೆಸಿದರು.

ಕಾರ್ಯಸಾಧುವಾದ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದರು. ಕೈಗಾರಿಕೆ ಪ್ರದೇಶಗಳಲ್ಲಿನ ನೀರು ಪೂರೈಕೆಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು ಎನ್ನಲಾಗಿದೆ.
ಈ ಜಿಲ್ಲೆಗಳಲ್ಲಿ ಕೈಗಾರಿಕೆ ಪ್ರದೇಶಗಳಲ್ಲಿ ಹಾಹಾಕಾರ
ಈ ವೇಳೆ ಸಭೆಯಲ್ಲಿ ಮಾತನಾಡಿದ ಪಾಟೀಲ್, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ. ಇದಲ್ಲದೆ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಪ್ರತಿದಿನ 45 MLD (ಮಿಲಿಯನ್ ಲೀಟರ್ ಪರ್ ಡೇ) ಯಷ್ಟು ಕುಡಿಯುವ ನೀರು ಅಗತ್ಯವಿದೆ. ಇದನ್ನು ಹಿಡಕಲ್ ಜಲಾಶಯದಿಂದ ಪೂರೈಸಬಹುದು ಎಂದು ಸಲಹೆ ನೀಡಿದರು.
ವಿಜಯಪುರ ಕೈಗಾರಿಕಾ ಪ್ರದೇಶಕ್ಕೆ ಕೂಡ ಕೃಷ್ಣಾ ಜಲಾಶಯದಿಂದ ನಿತ್ಯವೂ ಇಷ್ಟೇ ಪ್ರಮಾಣದ ಕುಡಿಯುವ ನೀರು ಪೂರೈಸಬೇಕಾಗಿದೆ. ಕಲಬುರಗಿ ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ಮತ್ತು ಭೀಮಾ ನದಿಗಳಿಂದ ದಿನವೂ 7 ಎಂಎಲ್ ಡಿ, ಬಳ್ಳಾರಿ ಕೈಗಾರಿಕಾ ಪ್ರದೇಶಕ್ಕೆ ತುಂಗಭದ್ರಾ ಅಣೆಕಟ್ಟೆಯಿಂದ 13 ಎಂಎಲ್ ಡಿ, ರಾಯಚೂರು ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ನದಿಯಿಂದ 13 ಎಂಎಲ್ ಡಿಯಷ್ಟು ಕುಡಿಯುವ ನೀರು ಅಗತ್ಯವಿದೆ.

ಆತಂಕ ವ್ಯಕ್ತಪಡಿಸಿದ ಸಚಿವರು
ಒಟ್ಟಾರೆ ಪ್ರತಿನಿತ್ಯ 290 ಎಂ.ಎಲ್.ಡಿ ನೀರು ಈ ಜಿಲ್ಲೆಗಳಿಗೆ ಬೇಕಾಗಿದೆ. ಇದನ್ನು ಬಗೆಹರಿಸದೆ ಹಾಗೆಯೇ ಬಿಟ್ಟರೆ ರಾಜ್ಯದ ಕೈಗಾರಿಕಾ ಬೆಳವಣಿಗೆಯೇ ಹಿನ್ನಡೆ ಕಾಣಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇನ್ನೂ ಹಳೇ ಮೈಸೂರು ಭಾಗದಲ್ಲಿರುವ ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಈಗಾಗಲೇ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಅದನ್ನು ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ಆದರೆ, ಇಲ್ಲೆಲ್ಲ ಕುಡಿಯುವ ನೀರಿನ ವಿಪರೀತ ಅಭಾವವಿದೆ.
ಮುಂದಿನ ವಾರ ಮತ್ತೊಂದು ಸಭೆ
ಇದೇಲ್ಲ ಕಾರಣದಿಂದ ಎಲ್ಲೆಲ್ಲಿ ಎಷ್ಟು ನೀರಿನ ಲಭ್ಯತೆ ಇದೆ, ಇಲ್ಲಿಗೆಲ್ಲ ಯಾವ್ಯಾವ ಮೂಲಗಳಿಂದ ಕುಡಿಯುವ ನೀರನ್ನು ಪೂರೈಸಬಹುದು ಎಂದು ಕಂಡುಕೊಳ್ಳಬೇಕು. ಈ ಸಂಬಂಧವಾಗಿ ಇನ್ನೊಂದು ವಾರದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.
ಕೈಗಾರಿಕೆಗಳಿಗೆ ಕುಡಿಯುವ ನೀರು ಪೂರೈಕೆ ಪ್ರಾಥಮಿಕ ಜವಾಬ್ದಾರಿಯಾಗಿದೆ. ರಾಜ್ಯದ ಉದ್ಯಮಗಳ ಬೆಳವಣಿಗೆಯ ದೃಷ್ಟಿಯಿಂದ ಇದು ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಇದನ್ನು ವಿವಿಧ ಇಲಾಖೆಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಪಾಟೀಲ ತಿಳಿಸಿದರು.
ಸಭೆಯಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆ, ಬೆಂಗಳೂರು ಜಲ ಮಂಡಲಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.












Click it and Unblock the Notifications