ನಾಳೆಯಿಂದಲೇ ದ್ವಿತೀಯ PUC ಪರೀಕ್ಷೆ-2 ಆರಂಭ: ಒಟ್ಟು 1.72 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ನಡೆಸುತ್ತಿರುವ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2 ನಾಳೆಯಿಂದ (ಏಪ್ರಿಲ್ 30) ಆರಂಭವಾಗಲಿದೆ. ಈ ವರ್ಷ ಶೈಕ್ಷಣಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತಂದಿರುವ ಶಿಕ್ಷಣ ಇಲಾಖೆಯು, ನೂತನ ಪರೀಕ್ಷಾ ಮಾದರಿಯ ಅಡಿ ವಾರ್ಷಿಕವಾಗಿ ಒಟ್ಟು ಮೂರು ಪರೀಕ್ಷೆಗಳನ್ನು ನಡೆಸಲು ಅವಕಾಶ ಕಲ್ಪಿಸಿದೆ. ಈಗಾಗಲೇ ಮೊದಲ ಪರೀಕ್ಷೆ ಅಂದರೆ ಪರೀಕ್ಷೆ-1 ರ ಫಲಿತಾಂಶ ಪ್ರಕಟವಾಗಿದ್ದು, ಇದೀಗ ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ತಾವು ಪಡೆದ ಅಂಕಗಳಿಂದ ತೃಪ್ತರಾಗದ, ಅಂಕ ಸುಧಾರಣೆ ಮಾಡಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ನಾಳೆಯಿಂದ ಎರಡನೇ ಹಂತದ ಪರೀಕ್ಷೆ ನಡೆಯಲಿದೆ.
ಏಪ್ರಿಲ್ 29, 2026 ರವರೆಗಿನ ನೋಂದಣಿ ಸ್ಥಿತಿಗತಿಯ ಅಧಿಕೃತ ಮಾಹಿತಿಯ ಪ್ರಕಾರ , ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯಲು ರಾಜ್ಯಾದ್ಯಂತ ಒಟ್ಟು 1,72,151 ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಪರೀಕ್ಷೆ ಬರೆಯುತ್ತಿರುವವರಲ್ಲಿ ಬಾಲಕಿಯರಿಗಿಂತ ಬಾಲಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಒಟ್ಟು ನೋಂದಣಿಯಾದವರಲ್ಲಿ 92,554 ಬಾಲಕರು ಹಾಗೂ 79,597 ಬಾಲಕಿಯರು ಪರೀಕ್ಷಾ ಕೊಠಡಿ ಪ್ರವೇಶಿಸಲಿದ್ದಾರೆ.

ನೋಂದಾಯಿತ ವಿದ್ಯಾರ್ಥಿಗಳ ಸಂಪೂರ್ಣ ವಿವರ
ಈ ಪರೀಕ್ಷೆಯನ್ನು ಕೇವಲ ಫೇಲಾದ ವಿದ್ಯಾರ್ಥಿಗಳು ಮಾತ್ರವಲ್ಲದೆ, ವಿವಿಧ ವಿಭಾಗದ, ವಿವಿಧ ಉದ್ದೇಶಗಳನ್ನು ಹೊಂದಿರುವ ವಿದ್ಯಾರ್ಥಿಗಳು ಬರೆಯುತ್ತಿದ್ದಾರೆ. ಮಂಡಳಿಯ ಅಂಕಿ-ಅಂಶಗಳ ಪ್ರಕಾರ ವಿದ್ಯಾರ್ಥಿಗಳ ವರ್ಗೀಕರಣ ಈ ಕೆಳಗಿನಂತಿದೆ:
1. 2026ರ ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾಗಿರುವ ಒಟ್ಟು 82,746 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಇವರಿಗೆ ಇದು ಅತ್ಯಂತ ನಿರ್ಣಾಯಕ ಅವಕಾಶವಾಗಿದೆ.
2. ಖಾಸಗಿ ಅಭ್ಯರ್ಥಿಗಳ ಕೋಟಾದಡಿ ಒಟ್ಟು 794 ಮಂದಿ ನೋಂದಾಯಿಸಿಕೊಂಡು ಪರೀಕ್ಷೆ ಎದುರಿಸಲಿದ್ದಾರೆ.
3. ಅದೇ ರೀತಿ, ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾಗಿ, ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮರುಪರೀಕ್ಷಾ ಅಭ್ಯರ್ಥಿಗಳು ಅಥವಾ ರಿಪೀಟರ್ಸ್ ಸಂಖ್ಯೆ 39,099 ರಷ್ಟಿದ್ದು, ಇವರು ಸಹ ಈ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಅಂಕ ಸುಧಾರಣೆಗೆ ಒಲವು ತೋರಿದ 49 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು
ಈ ಬಾರಿಯ ಪರೀಕ್ಷೆ-2 ರ ಬಹುದೊಡ್ಡ ವಿಶೇಷತೆ ಎಂದರೆ, ಅಂಕ ಸುಧಾರಣೆಗಾಗಿ ಹೆಚ್ಚಿನ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವುದು. 2026ರ ಪರೀಕ್ಷೆ-1 ರಲ್ಲಿ ಈಗಾಗಲೇ ಉತ್ತೀರ್ಣರಾಗಿದ್ದರೂ, ತಮ್ಮ ಅಂಕಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಒಟ್ಟು 49,512 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದು ಸಿಇಟಿ, ನೀಟ್ ಸೇರಿದಂತೆ ಉನ್ನತ ಶಿಕ್ಷಣದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಅಂಕಗಳನ್ನು ಹೊಂದುವ ದೃಷ್ಟಿಯಿಂದ ವಿದ್ಯಾರ್ಥಿಗಳು ತೋರುತ್ತಿರುವ ಆಸಕ್ತಿಯನ್ನು ಬಿಂಬಿಸುತ್ತದೆ.
ನಾಳೆಯಿಂದ ಆರಂಭವಾಗಲಿರುವ ಪರೀಕ್ಷೆಗಳಿಗೆ ಶಾಲಾ ಶಿಕ್ಷಣ ಇಲಾಖೆಯು ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಅನಗತ್ಯ ಆತಂಕವಿಲ್ಲದೆ, ಸಂಪೂರ್ಣ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಶಿಕ್ಷಣ ಸಚಿವರು ಹಾಗೂ ಇಲಾಖಾಧಿಕಾರಿಗಳು ಕಿವಿಮಾತು ಹೇಳಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯಕ್ಕಿಂತ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ತಲುಪುವುದು ಮತ್ತು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರುವುದು ಅತ್ಯಗತ್ಯವಾಗಿದೆ.














Click it and Unblock the Notifications