Property: ಕರ್ನಾಟಕದಲ್ಲಿ ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಹೆಚ್ಚಳ! ಜನರಿಗೆ ಆರ್ಥಿಕ ಬರೆ...
ಬೆಂಗಳೂರು, ಆಗಸ್ಟ್ 30: ಕರ್ನಾಟಕದಲ್ಲಿ ನೀರು, ಹಾಲು, ಪೆಟ್ರೋಲ್, ಡಿಸೇಲ್, ವಿದ್ಯುತ್, ಬಸ್ ಮತ್ತು ಮೆಟ್ರೋ ಟಿಕೆಟ್ ದರ, ಆಸ್ತಿ ತೆರಿಗೆ, ಜನನ ಮರಣ ಪ್ರಮಾಣ ಪತ್ರದ ಶುಲ್ಕ ಸೇರಿ ಎಲ್ಲಾ ವಸ್ತು/ಸೇವೆಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಇದೀಗ ರಾಜ್ಯ ಸರ್ಕಾರದ ಕಣ್ಣು ಆಸ್ತಿ ನೋಂದಣಿ ಶುಲ್ಕದ ಮೇಲೆ ಬಿದ್ದಿದೆ. ಆಗಸ್ಟ್ 31ರಿಂದ ಆಸ್ತಿ ನೋಂದಣಿ ಶುಲ್ಕ ಡಬಲ್ ಆಗಲಿದೆ.
ಹೌದು, ರಾಜ್ಯ ಕಂದಾಯ ಇಲಾಖೆ ಆಸ್ತಿ ಗಳ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಿ ಇತ್ತೀಚೆಗೆ ಆದೇಶ ಹೊರಡಿಸಿದೆ. ಇದು ಆಗಸ್ಟ್ 31ರ ಭಾನುವಾರದಿಂದ ರಾಜ್ಯದ ಜನತೆಗೆ ಅನ್ವಯವಾಗಲಿದೆ. ಆಸ್ತಿ ನೋಂದಣಿ ಶುಲ್ಕ ಶೇಕಡಾ 1 ರಿಂದ ಶೇಕಡಾ 2ಕ್ಕೆ ಹೆಚ್ಚಳ ಆಗಲಿದೆ. ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತುತ್ತಾಗಿದ್ದ ಜನರಿಗೆ ಮತ್ತೊಂದು ಆರ್ಥಿಕ ಹೊರೆ ಆಗಲಿದೆ. ಸರ್ಕಾರದ ಈ ನಡೆ ವಿರುದ್ಧ ವಿಪಕ್ಷಗಳು ಕೆಂಡ ಕಾರುತ್ತಿವೆ.

ಸ್ಥಿರಾಸ್ತಿ ಶುದ್ದ ಕ್ರಯ ಪತ್ರ, ಸ್ವಾಧೀನ ಭೋಗ್ಯ ಪತ್ರ, ಕ್ರಯ ಉದ್ದೇಶದ ಜಿಪಿಎ ಸೇರಿ ವಿವಿಧ ಆಸ್ತಿ ಖರೀದಿ ನೋಂದಣಿ ಶುಲ್ಕ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಸದ್ಯದವರೆಗೆ ನಿವೇಶನ, ಭೂಮಿ, ಫ್ಲ್ಯಾಟ್, ಮನೆ ಸೇರಿ ಯಾವುದೇ ಸ್ಥಿರಾಸ್ತಿ ಖರೀದಿ ವೇಳೆ ಶೇಕಡಾ 1 ರಷ್ಟು ನೋಂದಣಿ ಶುಲ್ಕ ಹಾಗೂ ಶೇಕಡಾ 5.6 ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6 ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಇದೀಗ ನೋಂದಣಿ ಶುಲ್ಕ 3.2 ರಷ್ಟಾಗಿರುವುದರಿಂದ ಆಸ್ತಿಯ ಮಾರುಕಟ್ಟೆ ಬೆಲೆಯ ಶೇ.7.6 ರಷ್ಟನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಭರಿಸಬೇಕಾಗುತ್ತದೆ. ಇದು ಜನರಿಗೆ ಮತ್ತೊಂದು ಆರ್ಥಿಕ ಹೊರೆ ಆಗಿ ಪರಿಣಮಿಸಲಿದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿರಿ ಕಾರಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಕ್ರ ದೃಷ್ಟಿ ಈಗ ಆಸ್ತಿ ನೋಂದಣಿ ಶುಲ್ಕದ ಮೇಲೆ ಬಿದ್ದಿದೆ.
ವಿದ್ಯುತ್, ನೀರು, ಹಾಲು, ಬಸ್ಸು ಹಾಗೂ ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಏರಿಕೆ ಬೆನ್ನಲ್ಲೆ ಇದೀಗ ಆಸ್ತಿ ಗಳ ನೋಂದಣಿ ಶುಲ್ಕವನ್ನೂ ದುಪ್ಪಟ್ಟು ಮಾಡಿದೆ.
ಆಸ್ತಿ ನೋಂದಣಿ ಶುಲ್ಕವನ್ನು ಏಕಾಏಕಿ ಶೇಕಡಾ 100 ರಷ್ಟು ಏರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಜನವಿರೋಧಿ ನೀತಿಯನ್ನು ನಿರ್ಲಜ್ಜವಾಗಿ ಪ್ರದರ್ಶಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ನಿಮ್ಮ ಅಸಲಿ ಗ್ಯಾರೆಂಟಿ ಆಗಿದೆಯಾ?. ಜೀವನವೆಲ್ಲ ಕಷ್ಟಪಟ್ಟು ಸಾಲ ಸೋಲ ಮಾಡಿ ಕುಟುಂಬಕ್ಕೆ ಒಂದು ಸ್ವಂತ ಗೂಡು ಮಾಡಿಕೊಳ್ಳಲು ಚಿಕ್ಕ ನಿವೇಶವವನ್ನೋ, ಫ್ಲಾಟ್ ಅನ್ನೋ ಖರೀದಿ ಮಾಡಲು ಹೊರಟರೆ ಅದಕ್ಕೆ ಶೇಕಡಾ 7.6ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಭರಿಸಬೇಕು. ಹೀಗಾದರೆ ಬಡವರು, ಮಧ್ಯಮ ವರ್ಗದ ಜನ ಸ್ವಂತ ಸೂರು ಮಾಡಿಕೊಳ್ಳುವಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ, ಕರ್ನಾಟಕ್ಕೆ ಉಳಿಗಾಲವಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಕಂದಾಯ ಇಲಾಖೆಯ ಶುಲ್ಕ ಹೆಚ್ಚಳ ಆದೇಶವನ್ನು ಖಂಡಿಸಿದ್ದಾರೆ.












Click it and Unblock the Notifications