Karnataka Rains: ವಾಯುಭಾರ ಕುಸಿತ: ಉಡುಪಿ ಜಿಲ್ಲೆಗೆ ರೆಡ್ 'ಅಲರ್ಟ್, ಬೇರೆ ಜಿಲ್ಲೆಗಳಿಗೆ ಏನಿದೆ ಮುನ್ಸೂಚನೆ?
ಬೆಂಗಳೂರು, ಆಗಸ್ಟ್ 29: ಹವಾಮಾನದಲ್ಲಿ ಕೆಲವು ತಿಂಗಳುಗಳಿಂದ ಉಂಟಾಗುತ್ತಿರುವ ವೈಪರಿತ್ಯಗಳ ಪ್ರಭಾವ ಹಾಗೂ ಹೆಚ್ಚುತ್ತಿರುವ ಅವುಗಳ ತೀವ್ರತೆಯಿಂದ ನಿರಂತರವಾಗಿ ಮಳೆ ಆಗುತ್ತಿದೆ. ಕಳೆದ ಒಂದು ವಾರದಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ವಿಪರೀತ ಪ್ರಮಾಣದಲ್ಲಿ ಮಳೆ ಆಗುತ್ತಿದೆ. ಇದೀಗ ಮತ್ತೆ ಮೂರು ದಿನ ಭಾರೀ ಮಳೆ ಆರ್ಭಟ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಳೆಯಿಂದ 03 ದಿನ ಅತ್ಯಧಿಕ ಮಳೆ ಬರಲಿದೆ. ಈ ಪೈಕಿ ನಾಡಿದ್ದು ಶನಿವಾರ (ಆಗಸ್ಟ್ 31) ಒಂದು ದಿನ ಉಡುಪಿ ಜಿಲ್ಲೆಗೆ 200 ಮಿಲಿ ಮೀಟರ್‌ಗಿಂತಲೂ ಹೆಚ್ಚು ಮಳೆ ಬರುವ ಕಾರಣಕ್ಕೆ ಈ ಜಿಲ್ಲೆಗೆ 'ರೆಡ್ ಅಲರ್ಟ್' ನೀಡಲಾಗಿದೆ.

ಉಳಿದ ಎರಡು ಜಿಲ್ಲೆಗಳಲ್ಲಿ 200 ಮಿಲಿ ಮೀಟರ್‌ಗಿಂತಲೂ ಕಡಿಮೆ ಮಳೆ ಬರುವ ಕಾರಣಕ್ಕೆ ಅವುಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ಇಲಾಖೆ ಗುರುವಾರದ ಮಳೆ ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ.
ಸೆಪ್ಟಂಬರ್ 1ರಿಂದ 3ರವರೆಗೆ ಭಾರೀ ಮಳೆ
ನಂತರ ಸೆಪ್ಟಂಬರ್ 1ರಿಂದ 3ರವರೆಗೆ ಇದೇ ಕರಾವಳಿ ಭಾಗದಲ್ಲಿ ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ಕರಾವಳಿಯ ಇದೇ ಮೂರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಗಿದೆ.
ಇದೇ ರೀತಿ ಮುಂದಿನ ಮೂರು ದಿನಗಳ ಕಾಲ ರಾಜ್ಯದ ವಿವಿಧೆಡೆ ಜೋರು ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಆಗಸ್ಟ್ 31ರವರೆಗೆ ಎರಡು ದಿನ ವ್ಯಾಪಕ ಮಳೆ ಹಿನ್ನೆಲೆಯಲ್ಲಿ 'ಆರೆಂಜ್ ಅಲರ್ಟ್' ನೀಡಲಾಗಿದೆ.

ಇನ್ನೂ ಸೆಪ್ಟಂಬರ್ 1ರಂದು ರಾಯಚೂರು ಮತ್ತು ಯಾದಗಿರಿ ಎರಡು ಜಿಲ್ಲೆಯಲ್ಲಿ ಸಹ ಭಾರೀ ಮಳೆ ಪ್ರಯುಕ್ತ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತುಸು ಕಡಿಮೆ ಇರುವ ಪ್ರಯುಕ್ತ ಕೆಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಬರಲಿದೆ ಎಂದು ಅಂದಾಜಿಸಲಾಗಿದೆ. ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಮುದ್ರ ಮೇಲ್ಮೈನ ಸ್ಟ್ರಫ್ ನ ತೀವ್ರತೆ ಮುಂದುವರಿದಿದೆ. ಪರಿಣಾಮ ರಾಜ್ಯದಲ್ಲಿ ದಿನ ಬಿಟ್ಟು ದಿನ ಜೋರು ಮಳೆಯ ದರ್ಶನವಾಗುತ್ತಿದೆ.
ಕೆಲವು ದಿನಗಳ ಹಿಂದೆ ಮುಂಗಾರು ಮಳೆ ಅಬ್ಬರ ಕಡಿಮೆ ಆಗಿತ್ತು. ಆದರೆ ಕಳೆದೊಂದು ವಾರದಿಂದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಕೆಲವು ಜಿಲ್ಲೆಗಳ ಜೋರು ಮಳೆ ಅಬ್ಬರಿಸಲು ಶುರುವಿಟ್ಟುಕೊಂಡಿದೆ. ಇದಕ್ಕೆ ಹವಾಮಾನದಲ್ಲಿ ದಿಢೀರ್ ಬದಲಾವಣೆಗಳು ಕಾರಣ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.












Click it and Unblock the Notifications