Suspend: ನಟಿ ರನ್ಯಾ ರಾವ್ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅಮಾನತು: ಸರ್ಕಾರ ಆದೇಶ
ಬೆಂಗಳೂರು: ಕರ್ತವ್ಯದಲ್ಲಿರುವಾಗಲೇ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರ ಜೊತೆಗೆ ಸರಸವಾಡಿದ ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರ ಖಾಸಗಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರ ಕಾನೂನು ಕ್ರಮ ಜರುಗಿಸಿದೆ. ರಾವ್ ಅವರನ್ನು ಕೆಲಸದಿಂದ ಅಮಾನತು ಮಾಡಿ ಮಂಗಳವಾರ (ಜ.20) ಸರ್ಕಾರ ಆದೇಶಿಸಿದೆ.
ರಾಮಚಂದ್ರ ರಾವ್ ಅವರ ಖಾಸಗಿ ವಿಡಿಯೋ ಹೊರ ಬರುತ್ತಿದ್ದಂತೆ ಪೊಲೀಸ್ ಇಲಾಖೆ ಮಾನ ರಾಜ್ಯದಲ್ಲಿ ಹರಾಜಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆಯಿಂದ ವರದಿ ಕೇಳಿದ್ದರು. ಮೂಲಗಳ ಪ್ರಕಾರ, ವರದಿ ನೀಡುತ್ತಿದ್ದಂತೆ ರಾವ್ ಅವರನ್ನು ಅಮಾನತು ಮಾಡಲಾಗಿದೆ. ತಮ್ಮ ಮೇಲೆ ಆಗದವರು ಈ ರೀತಿ ಮಾಡಿದ್ದಾರೆ. ಇದೆಲ್ಲ ಸುಳ್ಳು, ಬೇಕು ಅಂತಲೇ ಹೀಗೆ ಮಾಡಿದ್ದಾರೆ ಎಂದು ವಿಡಿಯೋ ಬಗ್ಗೆ ರಾಮಚಂದ್ರ ರಾವ್ ಅವರು ಪ್ರತಿಕ್ರಿಯಿಸಿದ್ದರು.

ಬೃಹತ್ ಚಿನ್ನ ಸಾಗಾಣೆ ಪ್ರಕರಣದಲ್ಲಿ ಬಂಧನವಾಗಿ ಜೈಲಲ್ಲಿರುವ ನಟಿ ರನ್ಯಾ ರಾವ್ ಮಲತಂದೆ ಈ ರಾಮಚಂದ್ರ ರಾವ್. ಅವರು ಈ ಹಿಂದೆ ರನ್ಯಾ ರಾವ್ ಪ್ರಕರಣದಲ್ಲಿ ಬೆಂಬಲ ನೀಡಿದ್ದಾರೆಂದು ಅಮಾನತು ಆಗಿದ್ದರು. ಆಗ ಪ್ರಕರಣದಲ್ಲಿ ಕ್ಲೀನ್ ಚೀಟ್ ಸಿಕ್ಕ ಬಳಿಕ ಅಮಾನತು ಆದೇಶವನ್ನು ಸರ್ಕಾರ ವಾಪಾಸ್ ಪಡೆದಿತ್ತು. ಇದೀಗ ಕಚೇರಿಯಲ್ಲಿ ಮಹಿಳೆಯರ ಜತೆಗಿನ ರಾಸಲೀಲೆ ವಿಡಿಯೋ ವೈರಲ್ ಬಳಿಕ ಸರ್ಕಾರ ಅವರ ವಿರುದ್ಧ ಅಮಾನತು ಕ್ರಮ ಕೈಗೊಂಡಿದೆ.
ಕಾನೂನಿಗಿಂತ ಯಾರು ದೊಡ್ಡವರಲ್ಲ: ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ರಾಮಚಂದ್ರ ರಾವ್ ಅವರ ವಿಡಿಯೋ ಇಂದು ಬೆಳಗ್ಗೆ ಗೊತ್ತಾಗಿದೆ. ಈ ಸಂಬಂಧ ಸರ್ಕಾರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ. ವಿಡಿಯೋ ಕುರಿತು ಸಂಪೂರ್ಣ ಮಾಹಿತಿ ಪಡೆದು, ತನಿಖೆ ನಡೆಸಿ ಇವತ್ತೆ ಕ್ರಮ ಜರುಗಿಸುತ್ತೇವೆ. ಕಾನೂನಿಗಿಂತ ಯಾರು ದೊಡ್ಡವರಲ್ಲ' ಎಂದು ಅವರು ತಿಳಿಸಿದ್ದರು. ಅದರಂತೆ ಸಿಎಂ ಗೃಹ ಸಚಿವ ಜಿ.ಪರಮೇಶ್ವರ ಅವರೊಂದಿಗೆ ಒಂದಷ್ಟು ವಿಷಯಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ಬಳಿಕ ಸರ್ಕಾರ ಅಮಾನತುಗೊಳಿಸಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಭೇಟಿಗೆ ರಾಮಚಂದ್ರ ರಾವ್ ಅವರು ತೆರಳಿದ್ದರು. ಆದರೆ ಭೇಟಿಗೆ ಸಚಿವರು ಒಪ್ಪಲಿಲ್ಲ. ಹಿರಿಯ ಐಪಿಎಸ್ ಅಧಿಕಾರಿ ಇಂಥದ್ದೊಂದು ಕೆಲಸ ಮಾಡಿದ್ದಕ್ಕೆ ಸಚಿವರು ಅಸಮಾಧಾನ, ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಭೇಟಿಗೆ ಅವಕಾಶ ನೀಡಿಲ್ಲ. ಸಚಿವರು ಮನೆ ಮುಂದೆ ಇದ್ದ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿ, ತನ್ನದೇನು ತಪ್ಪಿಲ್ಲ. ಇದು ಷಡ್ಯಂತ್ರ, ಯಾರೋ ಆಗದವರು ಈ ರೀತಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ವಿಡಿಯೋ ಆರೋಪ ರಾಮಚಂದ್ರ ರಾವ್ ನಿರಾಕರಿಸಿದ್ದಾರೆ.












Click it and Unblock the Notifications