ಮಳೆ ಕೊರತೆ: ಸರ್ಕಾರ ರೈತರು-ಜನರ ಕೈ ಹಿಡಿಯಲಿದೆ: ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್ 15: ಕರ್ನಾಟಕ ಕಾಂಗ್ರೆಸ್ ಸರ್ಕಾರ ಕಲೆ ಸಾಹಿತ್ಯಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಲಿದೆ. ಕನ್ನಡ ಸಾಂಸ್ಕೃತಿಕ ಹಿರಿಮೆ ವಿಶ್ವ ಖ್ಯಾತಿಯಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ವಿಶ್ವ ವಿಖ್ಯಾತ ದಸರಾ 2023 ಪ್ರಯುಕ್ತ ಮೈಸೂರಿನಲ್ಲಿ ಭಾನವಾರ 'ದಸರಾ ಸಾಂಸ್ಕೃತಿಕ' ಕಾರ್ಯಕ್ರಮಗಳನ್ನು ಉದ್ಘಾಟಿಸಿ ಡಾ.ಪದ್ಮಾಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಸನ್ಮಾನಿಸಿ ಅವರು ಮಾತಾಡಿದರು.

ಇನ್ನೂ ಕರ್ನಾಟಕದಲ್ಲಿ ಈ ಬಾರಿ ಮಳೆ ಕೈ ಕೊಟ್ಟಿದ್ದು, ಕೊರತೆ ಎದುರಾಗಿದೆ. ಬೆಳೆ ನಷ್ಟವಾಗಿದೆ. ಬರಗಾಲದ ಸ್ಥಿತಿ ಇಡಿ ರಾಜ್ಯವನ್ನು ಆವರಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸರ್ಕಾರ ನಾಡಿನ ರೈತರ, ನಾಡಿನ ಜನತೆಯ ಕೈ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಸಂಗೀತ, ಸಾಹಿತ್ಯಕ್ಕೆ ಕನ್ನಡ ನಾಡು ನಿರಂತರವಾಗಿ ಪ್ರೋತ್ಸಾಹದಾಯಕ ವಾಗಿದೆ. ನಾವೂ ಈ ಪರಂಪರೆಯನ್ನು ಮುಂದುವರೆಸುತ್ತಿದ್ದೇವೆ ಎಂದು ತಿಳಿಸಿದರು.
ಡಾ.ಪದ್ಮಾಮೂರ್ತಿ ಶ್ಲಾಘಿಸಿದ ಸಿಎಂ
ಸನ್ಮಾನಿತ ಡಾ.ಪದ್ಮಾಮೂರ್ತಿ ಅವರ ಕಲಾಸೇವೆ ಅಪೂರ್ವವಾದದ್ದು. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಇವರು ದೀರ್ಘಕಾಲ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರನ್ನು ಸರ್ಕಾರ ಗುರುತಿಸಿ ದಸರಾ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿರುವುದು ಶ್ಲಾಘನೀಯ. 91ರ ವಯಸ್ಸಲ್ಲೂ ಅತ್ಯಂತ ಸ್ಪಷ್ಟ ಧ್ವನಿ ಹೊಂದಿದ್ದಾರೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಅಧ್ಯಕ್ಷತೆ ವಹಿಸಿದ್ದರು. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ದೀಪಾಲಂಕಾರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಮಹಾಪೌರರಾದ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ತನ್ವೀರ್ ಸೇಠ್ ಸೇರಿ ಹಲವು ಶಾಸಕರು ಉಪಸ್ಥಿತರಿದ್ದರು.
ಬರಗಾಲ ಮಧ್ಯೆ ನಾಡಹಬ್ಬಕ್ಕೆ ಹಂಸಲೇಖ ಚಾಲನೆ
ಕರ್ನಾಟಕದಲ್ಲಿ ಬರಗಾಲ ಆವರಿಸಿದೆ, ಮತ್ತೊಂದೆಡೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಹೋರಾಟಗಳು ನಡೆಯುತ್ತಿವೆ. ಈ ಮಧ್ಯೆ ನಾಡಹಬ್ಬ ಮೈಸೂರು ದಸರಾಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಾಲನೆ ನೀಡಿದರು. ಮುಂಗಾರು ಕಳೆದು ಹಿಂಗಾರು ಮಳೆ ಉತ್ತಮವಾಗಲಿ. ರೈತರಿಗೆ ಉತ್ತಮ ಬೆಲೆ ಕೈಗೆ ಬರಲಿದೆ ಎಂದು ಉದ್ಘಾಟನೆ ಬಳಿಕ ಹಂಸಲೇಖಾ ಅವರು ಆಶೀಸಿದರು.












Click it and Unblock the Notifications