ವಿಶ್ವಕಪ್ ಗೆದ್ದ ಕರ್ನಾಟಕದ ಖೋಖೋ ಆಟಗಾರರಿಗೆ ರಾಜ್ಯ ಸರ್ಕಾರದಿಂದ ಅವಮಾನ?
ಚೊಚ್ಚಲ ಖೋಖೋ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಖೋಖೋ ಆಟಗಾರರಿಗೆ ರಾಜ್ಯ ಸರ್ಕಾರವು ಅವಮಾನ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ. ಕನ್ನಡಿಗರಾದ ಬಿ.ಚೈತ್ರಾ ಹಾಗೂ ಎಂ.ಕೆ ಗೌತಮ್ ಅವರ ಅಮೋಘ ಸಾಧನೆಗೆ ಸರ್ಕಾರದಿಂದ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಜೆಡಿಎಸ್ ದೂರಿದೆ.
ಪುಡಿಗಾಸು 5 ಲಕ್ಷ ರೂಪಾಯಿ ಘೋಷಿಸಿ ಚೊಚ್ಚಲ ಖೋಖೋ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಖೋಖೋ ಆಟಗಾರರಿಗೆ ರಾಜ್ಯ ಕರ್ನಾಟಕ ಸರ್ಕಾರ ಅವಮಾನಿಸಿರುವುದು ಸರಿಯಲ್ಲ. ಪಕ್ಕದ ಕೇರಳ ರಾಜ್ಯಕ್ಕೆ ಸದಾ ಮಿಡಿಯುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕನ್ನಡಿಗರಾದ ಬಿ. ಚೈತ್ರಾ ಹಾಗೂ ಎಂ.ಕೆ.ಗೌತಮ್ ಅವರ ಅಮೋಘ ಸಾಧನೆಗೆ ಮಿಡಿಯದಿರುವುದು ವಿಪರ್ಯಾಸ ಎಂದು ವಾಗ್ದಾಳಿ ನಡೆಸಿದೆ.

ಮಹಾರಾಷ್ಟ್ರ ಆಟಗಾರರಿಗೆ ಅಲ್ಲಿನ ಸರ್ಕಾರ 2.5 ಕೋಟಿ ರೂಪಾಯಿ ಪ್ರೋತ್ಸಾಹಧನ ಮತ್ತು ಎ ಕೆಟಗರಿ ಉದ್ಯೋಗವನ್ನು ಘೋಷಿಸಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಜಮ್ಮು ಕಾಶ್ಮೀರ ಸರ್ಕಾರಗಳೂ ತಮ್ಮ ರಾಜ್ಯದ ಆಟಗಾರರಿಗೆ ಸೂಕ್ತ ಗೌರವ ನೀಡಿವೆ ಎಂದು ಹೇಳಿದೆ.
ಆದರೆ, ಸಿದ್ದರಾಮಯ್ಯ ಸರ್ಕಾರ ಕಾಟಾಚಾರಕ್ಕೆ ತಲಾ 5 ಲಕ್ಷ ರೂಪಾಯಿ ನೀಡಿ ಗಮನಾರ್ಹ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ವಿಶ್ವಕಪ್ ವಿಜೇತ ತಂಡದ ಕನ್ನಡಿಗರ ಐತಿಹಾಸಿಕ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಸೂಕ್ತ ಪ್ರೋತ್ಸಾಹಧನ ತಕ್ಷಣ ಪ್ರಕಟಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಖೋಖೋ ವಿಶ್ವಕಪ್‍ನಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಪುರುಷ ಹಾಗೂ ಮಹಿಳಾ ತಂಡಗಳಲ್ಲಿದ್ದ ಕರ್ನಾಟಕದ ಗೌತಮ್ ಹಾಗೂ ಚೈತ್ರಾ ಅವರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ಇದನ್ನು ಆಟಗಾರರು ನೇರವಾಗಿ ತಿರಸ್ಕರಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಗೌತಮ್ ಮತ್ತು ಚೈತ್ರಾ ಅವರಿಗೆ ರಾಜ್ಯ ಸರ್ಕಾರ ಅಭಿನಂದನಾ ಸಮಾರಂಭ ಏರ್ಪಡಿಸಿ, ಇಬ್ಬರಿಗೂ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ ಬೇರೆ ರಾಜ್ಯಗಳಲ್ಲಿ ಇದೇ ತಂಡದ ಆಟಗಾರಿಗೆ ತಲಾ 2.5 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಅಲ್ಲದೆ, ಆಟಗಾರರಿಗೆ ಉನ್ನತ ಹುದ್ದೆಗಳನ್ನು ನೀಡಿ ಗೌರವಿಸಿದೆ ಎಂದು ಖೋಖೋ ಸಂಘದ ರಾಜ್ಯಾಧ್ಯಕ್ಷ ಲೋಕೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಕ್ರಿಕೆಟ್ ಆಟಗಾರರಿಗೆ ಸಿಗುವ ಗೌರವ ಬೇರೆ ಆಟಗಾರರಿಗೆ ಸಿಗುತ್ತಿಲ್ಲ. ದೇಶಕ್ಕೆ ಹೆಮ್ಮೆಯ ಕೆಲಸ ಮಾಡಿದರೂ ರಾಜ್ಯದ ಆಟಗಾರರಿಗೆ ಮನ್ನಣೆ ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ನೀಡಿರುವ ಪುರಸ್ಕಾರವನ್ನು ತಿರಸ್ಕರಿಸುತ್ತಿದ್ದೇವೆ. ಕರ್ನಾಟಕ ಒಲಂಪಿಕ್ ಸಂಘದ ಅಧ್ಯಕ್ಷ ಗೋವಿಂದರಾಜು ಅವರು ಯಾವುದೇ ಮಾಹಿತಿ ನೀಡದೆ, ಬೇರೆ ರಾಜ್ಯಗಳಲ್ಲಿ ಬಹುಮಾನ ಘೋಷಿಸಿರುವ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೆ ತಿಳಿಸದೆ, ತರಾತುರಿಯಲ್ಲಿ ಬಹುಮಾನ ಘೋಷಿಸಿದ್ದಾರೆ ಎಂದೂ ದೂರಿದ್ದಾರೆ.
ಬೇರೆ ರಾಜ್ಯಗಳಲ್ಲಿ ಘೋಷಿಸಿರುವಂತೆ ಕರ್ನಾಟಕದ ಆಟಗಾರರಿಗೂ ಬಹುಮಾನ ಘೋಷಿಸಬೇಕು. ಕ್ರೀಡಾಪಟುಗಳ ಪ್ರತಿಭೆಗೆ ತಕ್ಕ ಗೌರವ ಕೊಡಬೇಕು. ಸರ್ಕಾರ ಈ ಕೆಲಸ ಮಾಡದಿದ್ದರೆ ಎಲ್ಲ ಖೋಖೋ ಆಟಗಾರರು ಸೇರಿ ಪ್ರತಿಭಟನೆ ಮಾಡುತ್ತೇವೆ. ಕೊನೆಗೆ ಜನರಿಂದ ದೇಣಿಗೆ ಸಂಗ್ರಹಿಸಿ ಆಟಗಾರನ್ನು ಬೆಳೆಸುತ್ತೇವೆ ಎಂದು ಖೋಖೋ ಸಂಘ ಎಚ್ಚರಿಸಿದೆ.












Click it and Unblock the Notifications