IBC: EV ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪನೆ: ಸರ್ಕಾರ ಜತೆ ಐಬಿಸಿ 8000 ಕೋಟಿ ಹೂಡಿಕೆ ಒಪ್ಪಂದ
ಬೆಂಗಳೂರು, ಆಗಸ್ಟ್ 02: ಮರುಬಳಕೆ ಮಾಡಬಹುದಾದ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ತಯಾರಿಸುವ ಅಮೆರಿಕಾದ ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ (IBC) ಕರ್ನಾಟಕದಲ್ಲಿ ಬೃಹತ್ ಹೂಡಿಕೆಗೆ ಮುಂದಾಗಿದೆ. ಈ ಸಂಬಂಧ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ನೇತೃತ್ವದಲ್ಲಿ ಮಂಗಳವಾರ ಕಂಪನಿ ಹಾಗೂ ರಾಜ್ಯ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದವು.
ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ (ಐಬಿಸಿ) ಕಂಪನಿಯು ರಾಜ್ಯದಲ್ಲಿ 8,000 ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ. ಅವರಿಗೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಎಂಬಿ ಪಾಟೀಲ್ ತಿಳಿಸಿದರು.

ಈ ಕಂಪನಿಯು ಮರುಬಳಕೆಗೆ ಮಾಡಬಹುದಾದಂತಹ ಲಿಥಿಯಾನ್ ಬ್ಯಾಟರಿಗಳ ಉತ್ಪಾದನೆಯನ್ನು ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಆರಂಭಿಸಲು ನಿರ್ಧರಿಸಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಒಪ್ಪಂದಂತೆ ಉತ್ಪಾದನಾ ಘಟಕ ಸ್ಥಾಪನೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 100 ಎಕರೆ ಜಮೀನನ್ನು ಕೊಡಲಿದೆ.
ದಕ್ಷಿಣ ಕೋರಿಯಾದಲ್ಲೂ ಘಟಕ ಹೊಂದಿರುವ ಐಬಿಸಿ
ಈ IBC ಕಂಪನಿಯು ಮರುಬಳಕೆ ಮಾಡುವಂತಹ ಬ್ಯಾಟರಿಗಳನ್ನು ದಕ್ಷಿಣ ಕೊರಿಯಾದಲ್ಲಿ ಪರೀಕ್ಷಾರ್ಥವಾಗಿ ತಯಾರಿಸುವ ಘಟಕವನ್ನು ಹೊಂದಿದೆ. ಅದು ಸಹ ಹೊಸದಾಗಿ ಆರಂಭವಾಗಿದ್ದು, ಸದ್ಯದಲ್ಲೇ ಕಾರ್ಯಾರಂಭಗೊಳ್ಳಲಿದೆ. ಅತ್ಯುತ್ತಮ ಬ್ಯಾಟರಿಗಳ ಉತ್ಪಾದನೆಗೆ ಡ್ರೈರೂಮ್ ಮತ್ತು ಕ್ಲೀನ್ ರೂಮ್‌ಗಳನ್ನು ಕಂಪನಿ ಸ್ಥಾಪಿಸಲಿದೆ.

ಇದು ರಾಜ್ಯದಲ್ಲಿ ಇಂತಹ ಎರಡನೇ ಘಟಕವಾಗಿದ್ದು, ಈ ಕ್ಷೇತ್ರದಲ್ಲಿ ರಾಜ್ಯವು ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ ಎಂದು ಸಚಿವ ಎಂಬಿ ಪಾಟೀಲರು ವಿವರಿಸಿದರು. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಕಂಪನಿಯೊಂದಿಗೆ ಮೂರು ಸುತ್ತು ಮಾತುಕತೆ ನಡೆಸಿ, ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಮನದಟ್ಟು ಮಾಡಿಕೊಡಲಾಗಿತ್ತು ಅವರು ತಿಳಿಸಿದರು.
ಎಂಬಿ ಪಾಟೀಲ್ ಅವರು ಕೈಗಾರಿಕೆ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಫಾಕ್ಸ್‌ಕಾನ್ ಐಫೋಟನ್ ತಯಾರಿಕಾ ಘಟಕ, ಐಫೋನ್ ಬಿಡಿ ಭಾಗ ತಯಾರಿಕಾ ಘಟಕ, ಇವಿ, ಬ್ಯಾಟರಿ, ಕೈಗಾರಿಕಾ ಪಾರ್ಕ್ ನಿರ್ಮಾಣ ವಿಚಾರವಾಗಿ ಭಾರಿ ಬಂಡವಾಳ ಹರಿದು ಬರುತ್ತಿರುವುದು ಕರ್ನಾಟಕದ ಪಾಲಿಗೆ ಮೈಲುಗಲ್ಲಾಗಿದೆ.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಐಬಿಸಿ ಸಂಸ್ಥಾಪಕ ಮತ್ತು ಸಿಇಒ ಡಾ.ಪ್ರಿಯದರ್ಶಿ ಪಾಂಡಾ, ಕಂಪನಿಯ ಸಿಒಒ ಶಶಿ ಕುಪ್ಪಣ್ಣಗಾರಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಐಬಿಸಿ ಇಂಡಿಯಾ ಪರವಾಗಿ ಅದರ ಭಾರತದ ವ್ಯವಹಾರಗಳ ಮುಖ್ಯಸ್ಥ ವೆಂಕಟೇಶ ವಲ್ಲೂರಿ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications