ವಜೂಭಾಯಿ ವಾಲಾ ಹಿಂದಿ ಭಾಷಣದ ಮುಖ್ಯಾಂಶ
ಬೆಂಗಳೂರು, ಫೆ.2 : ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಧಾನಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಅಧಿವೇಶನ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದರು.
ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಸೋಮವಾರ ಆರಂಭವಾಗಿದ್ದು, ಮೊದಲ ದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಿಎಂ ಸಿದ್ದರಾಮಯ್ಯ ಉಭಯ ಸದನಗಳ ಸಭಾಪತಿಗಳು ಸ್ವಾಗತಿಸಿದರು. [ಹಿಂದಿವಾದಿ ವಜುಭಾಯಿ ವಿರುದ್ಧ ಕರವೇ ಪ್ರತಿಭಟನೆ]

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಹೇಳಿದ ರಾಜ್ಯಪಾಲ ವಜೂಭಾಯಿ ವಾಲಾ ಅವರು ಹಿಂದಿಯಲ್ಲಿ ಭಾಷಣ ಆರಂಭಿಸಿದರು. ಸಕಾಲ ಯೋಜನೆ ಒಂದು ಜನಸ್ನೇಹಿ ಯೋಜನೆ ಎಂದು ರಾಜ್ಯಪಾಲರು ಹೇಳಿದರು. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ ಎಂದರು.
ಹೊರಗೆ ಪ್ರತಿಭಟನೆ : ರಾಜ್ಯಪಾಲರ ಹಿಂದಿ ಭಾಷಣವನ್ನು ವಿರೋಧಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್, ರಾಜ್ಯಪಾಲರು ಕನ್ನಡ ವಿರೋಧಿಯಾಗಿದ್ದಾರೆ. ಇದುವರೆಗೂ ಬಂದ ರಾಜ್ಯಪಾಲರು ಯಾರೂ ಹಿಂದಿಯಲ್ಲಿ ಭಾಷಣ ಮಾಡಿರಲಿಲ್ಲ. ಆದರೆ, ಇವರು ಕನ್ನಡದಲ್ಲಿ ನಮಸ್ಕಾರ ಎಂದು ಆರಂಭಿಸಿ ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಭಾಷಣದ ಮುಖ್ಯಾಂಶಗಳು
* ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಬರಪೀಡಿತ ಪ್ರದೇಶಗಳಲ್ಲಿ ಸಣ್ಣ ಕರೆ ತುಂಬಿಸುವ ಯೋಜನೆಗೆ ಅನುನೋದನೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಸಣ್ಣ ಕೆರೆ ತುಂಬುವ ಕಾರ್ಯ
* 10 ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆ ಹಂತ 3ರ ಅಡಿ 1000 ಕೋಟಿ ರೂ.ಗಳ ಕಾಮಗಾರಿಗೆ ಮಂಜೂರಾತಿ. ಬೆಂಗಳೂರು ನಗರ ಅಭಿವೃದ್ಧಿಗೆ 1 ಸಾವಿರ ಕೋಟಿ ಅನುದಾನ. ನಮ್ಮ ಮೆಟ್ರೋ ಒಂದನೇ ಹಂತ ಈ ವರ್ಷ ಪೂರ್ಣ.
* ಮಹಿಳೆಯರ ಮೇಲೆ ದೌರ್ಜನ್ಯ ತಡೆಗೆ ಕ್ರಮ ಬೆಂಗಳೂರಿನಲ್ಲಿ ಹೆಚ್ಚುವರಿ ವಿಶೇಷ ನ್ಯಾಯಾಲಯ. ಎಲ್ಲಾ ಜಿಲ್ಲೆಗಳಲ್ಲಿ ಪ್ರಧಾನ ಮತ್ತು ಸತ್ರ ನ್ಯಾಯಾಲಯಗಳ ಸ್ಥಾಪನೆ.
* ತೋಟಗಾರಿಕೆ, ಹನಿ ನೀರಾವರಿಗೆ ಹೆಚ್ಚು ಒತ್ತು. ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಯಶಸ್ವಿ.
* ರೈತ ಕಲ್ಯಾಣಕ್ಕೆ ಸೂರ್ಯ ರೈತ ಯೋಜನೆ ಜಾರಿ . ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ. ಹೈದರಾಬಾದ್ -ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಹೆಚ್ಚು ಸೌಲಭ್ಯ, ರಿಯಾಯಿತಿ.
* 17 ಸಾವಿರ ಕೋಟಿ ಬಂಡವಾಳದ 23 ಉದ್ಯಮಗಳಿಗೆ ಅನುಮೋದನೆ. 24 ಸಾವಿರ ಹುದ್ದೆ ಸೃಷ್ಟಿ ಗಣಿ ಬಾದಿತ ಜಿಲ್ಲೆಗಳ ಬಳ್ಳಾರಿ, ಚಿತ್ರದುರ್ಗ, ತುಮಕೂರು ಅಭಿವೃದ್ಧಿಗೆ ಕ್ರಮ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮ.
* ಬೆಂಗಳೂರು ನಗರಕ್ಕೆ 2 ವಿಶೇಷ ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ. ಕಾಯ್ದೆಗೆ ತಿದ್ದುಪಡಿಗೆ ಸಮಗ್ರ ಭೂ ನೀತಿ ಸಿದ್ಧ
* ಕ್ಷೀರಭಾಗ್ಯ ಯೋಜನೆ ಸಫಲ. 64.45 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ. 1 ಸಾವಿರ ಗ್ರಾಮೀಣ ಶಾಲೆಗಳಲ್ಲಿ ಟೆಲಿ ಶಿಕ್ಷಣ ಹೈ-ಕರ್ನಾಟಕದ 4-5ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಆಂದೋಲನ.
* ರಾಜ್ಯ ಸರ್ಕಾರ ಕೋಮು ಸೌಹಾರ್ದತೆ ಕಾಪಾಡಿದೆ - ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆ ಇತ್ತೀಚೆಗೆ ನಡೆದಿಲ್ಲ . ಇತ್ತೀಚಿನ ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಮೇಲೆ ವಿಶ್ವಾಸ ಮೂಡಿಸಲು ತಜ್ಞರ ಸಮಿತಿ ರಚಿಸಲಾಗಿದೆ.












Click it and Unblock the Notifications