ಎಟಿಎಂ: ಸಿದ್ದು ಸರಕಾರವನ್ನು ಜಾಲಾಡಿದ ರಾಜ್ಯಪಾಲರು
ಬೆಂಗಳೂರು, ನ 26: ಸಿದ್ದರಾಮಯ್ಯ ಸರಕಾರದ ವಿರುದ್ದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಮಗುದೊಮ್ಮೆ ಗುಡುಗಿದ್ದಾರೆ. ಯಾವುದೇ ಸರಕಾರವಿರಲಿ ಆಡಳಿತ ಯಂತ್ರ ಸರಿಯಾದ ದಿಕ್ಕಿನಲ್ಲಿ ಸಾಗದಿದ್ದರೆ ತನ್ನದೇ ಆದ ಶೈಲಿಯಲ್ಲಿ ಸರಕಾರವನ್ನು ತರಾಟೆಗೆ ತೆಗೆದು ಕೊಳ್ಳುವ ಮೂಲಕ ರಾಜಕೀಯ ಪಕ್ಷಗಳಿಗೆ ಭಾರದ್ವಾಜ್ ಮತ್ತೊಮ್ಮೆ ಬಿಸಿ ಮುಟ್ಟಿಸಿದ್ದಾರೆ.
ರಾಜ್ಯ ಸರಕಾರ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ರಾಜಧಾನಿಯ ಎಟಿಎಂನಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ ನಡೆದ ಪ್ರಕರಣ ನನಗೆ ವೈಯಕ್ತಿಕವಾಗಿ ಭಾರೀ ನೋವನ್ನು ತಂದಿದೆ. ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡಿಲ್ಲ ಎನ್ನುವುದು ನನ್ನ ಭಾವನೆ ಎಂದು ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದ್ದಾರೆ. (ಕ್ರೈಂ: ಬ್ಯಾಂಕ್ ಉದ್ಯೋಗಿ ಜ್ಯೋತಿ ಮೇಲೆ ಹಲ್ಲೆ)
ಇಡೀ ದೇಶ ಬೆಂಗಳೂರಿನಲ್ಲಿ ನಡೆದ ಈ ಎಟಿಎಂ ಪ್ರಕರಣದ ಬಗ್ಗೆ ಚರ್ಚೆ ನಡೆಸುತ್ತಿವೆ. ರಾಜ್ಯದ ಪ್ರಥಮ ಪ್ರಜೆಯಾಗಿ ತಲೆ ತಗ್ಗಿಸುವಂತಾಗಿದೆ. ಪೊಲೀಸರು ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸ ಬೇಕಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
IISM ಆಯೋಜಿಸಿದ್ದ ಅಂತರಾಷ್ಟೀಯ ಭದ್ರತಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಭಾರದ್ವಾಜ್, ಎಟಿಎಂನಲ್ಲಿ ಮಹಿಳೆಯ ಮೇಲಿನ ಹಲ್ಲೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಗೃಹ ಸಚಿವರನ್ನು ಕರೆಸಿ ಮಾಹಿತಿ ಪಡೆದು ಕೊಂಡಿದ್ದೇನೆ.
ಆರೋಪಿಗಳನ್ನು ಸೆರೆ ಹಿಡಿಯಲು ನೀವೇ ಖುದ್ದು ಮುತುವರ್ಜಿ ವಹಿಸಿ ಕೊಳ್ಳಬೇಕೆಂದು ಅವರಿಗೆ ಹೇಳಿದ್ದೇನೆ. ಆದರೆ ಅವರು ನಡೆದು ಕೊಂಡ ರೀತಿಯ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಭಾರದ್ವಾಜ್ ಸಮಾವೇಶದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.
ನಾಗರಿಕರ ರಕ್ಷಣೆ ಮಾಡಬೇಕಾಗಿರುವ ಪೊಲೀಸರನ್ನು ರಾಜಕಾರಣಿಗಳು ತಮ್ಮ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಆಕ್ರಮಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರಕಾರ ವಿಫಲವಾಗಿದೆ ಎಂದು ರಾಜ್ಯಪಾಲರು ಸಿದ್ದು ಸರಕಾರದ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ.
ರಾಜ್ಯಪಾಲರು ಸರಕಾರವನ್ನು ತರಾಟೆಗೆ ತೆಗೆದು ಕೊಳ್ಳುವುದು ಇದೇನು ಮೊದಲಲ್ಲ. ಮುಂದೆ ಓದಿ..

ಪೊಲೀಸ್ ಸಿಬ್ಬಂದಿಗಳು
ಪೊಲೀಸ್ ಸಿಬ್ಬಂದಿಗಳು ಈಗ ಎರಡು ಪಾಳಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಸ್ವಾಭಾವಿಕವಾಗಿ ಒತ್ತಡ ಹೆಚ್ಚಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಎಂದು ರಾಜ್ಯಪಾಲ ಭಾರಧ್ವಾಜ್ ಸರಕಾರಕ್ಕೆ ಸೂಚನೆ ನೀಡಿದ್ದಾರೆ.

ನ್ಯಾ. ಬನ್ನೂರುಮಠ
ಈ ಹಿಂದೆ ಲೋಕಾಯುಕ್ತ ಪೀಠಕ್ಕೆ ನ್ಯಾ ಬನ್ನೂರುಮಠ ಅವರ ಹೆಸರನ್ನು ಸೂಚಿಸಿ ಆಗಿನ ಬಿಜೆಪಿ ಸರಕಾರ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಆದರೆ ಭಾರದ್ವಾಜ್ ಬನ್ನೂರಮಠ ನೇಮಕಕ್ಕೇ ಅಸ್ತು ಅನ್ನದಿರಲು ನಿರ್ಧರಿಸಿದ್ದರು. ಜೊತೆಗೆ ಬಿಜೆಪಿ ಸರಕಾರವನ್ನು ಸರಿಯಾಗಿ ತರಾಟೆಗೆ ತೆಗೆದು ಕೊಂಡಿದ್ದರು.

ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ ಈ ಹಿಂದೆ ರಾಜ್ಯಪಾಲರನ್ನು ಭೇಟಿಯಾಗಲು ರಾಜಭವನಕ್ಕೆ ತೆರಳಿದ್ದಾಗಭಾರದ್ವಾಜ್ ಭೇಟಿಗೆ ಅವಕಾಶ ನೀಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದಿದ್ದ ಬೇಳೂರು ಸದನದಲ್ಲೇ ಧಿಕ್ಕಾರ ಎನ್ನುವ ನಾಮಫಲಕ ಪ್ರದರ್ಶಿಸಿದ್ದರು. ಆ ಸಮಯದಲ್ಲೂ ರಾಜ್ಯಪಾಲರು ಸರಕಾರದ ಕಿವಿ ಹಿಂಡಿದ್ದರು.

ಸಿದ್ದು ಕಿವಿ ಹಿಂಡಿದ ರಾಜ್ಯಪಾಲ
ಸರ್ಕಾರದ ಎರಡು ತಿಂಗಳ ಆಡಳಿತ ತೃಪಿ ತಂದಿಲ್ಲ. ಜನರು ನಿಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಿ ಎಂದು ಭಾರದ್ವಾಜ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ರಾಜಭವನಕ್ಕೆ ಕರೆಸಿ ಬುದ್ದಿ ಹೇಳಿ ಕಳುಹಿಸಿದ್ದರು.

ಯಡಿಯೂರಪ್ಪ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸದಾ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ರಾಜ್ಯಪಾಲರು, ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಆಡಳಿತವೇ ವಾಸಿ, 'ನಾನೇ ಇದನ್ನು ಹೇಳಿದ್ದೇನೆ ಎಂದು ಸೀದಾ ನಿಮ್ಮ ಮುಖ್ಯಮಂತ್ರಿ ಬಳಿ ಹೋಗಿ ಹೇಳಿ' ಎಂದು ಹಾಲಿ ಸಿಎಂ ಸಿದ್ದರಾಮಯ್ಯ ಸಂಪುಟದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂ ಮೂಲಕ ಅವರಿಗೆ ಹೇಳಿ ಕಳುಹಿಸಿದ್ದರು.












Click it and Unblock the Notifications