ಕನ್ನಡ ಶಾಲೆಗೆ ನಾಲ್ಕು ಕೊಠಡಿ ಕೇಳಿದ ಶಿಕ್ಷಕನ ಸಸ್ಪೆಂಡ್‌ ಮಾಡಿದ ಸರ್ಕಾರ!

ಕನ್ನಡ ವಿಚಾರ ಕಾವು ಪಡೆದುಕೊಂಡಿರುವ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಶಾಲೆಗಾಗಿ ನಾಲ್ಕು ಕೊಠಡಿಗಳನ್ನು ಕೊಡಿ ಎಂದು ಮನವಿ ಮಾಡಿರುವ ಮುಖ್ಯ ಶಿಕ್ಷಕರನ್ನೇ ಸರ್ಕಾರ ಸಸ್ಪೆಂಡ್‌ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ನಿಡಗುಂದಿ ಗ್ರಾಮದ ಅಂಬೇಡ್ಕರ್‌ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳನ್ನು ನೀಡುವಂತೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ವೀರಣ್ಣ ಮಡಿವಾಳರ ಅವರು ಮನವಿ ಮಾಡಿದ್ದರು. ಕನ್ನಡ ಮಕ್ಕಳ ಶಾಲೆಗಾಗಿ ಉಪವಾಸ ಹಾಗೂ ಮೌನ ಕಾಲ್ನಡಿಗೆ ಜಾಥಾ ಅಭಿಯಾನವನ್ನು ಅವರು ನಡೆಸಿದ್ದರು. ಆದರೆ, ಈ ಅಭಿಯಾನದಿಂದ ಅವರು ಸಂಕಷ್ಟಕ್ಕೆ ಗುರಿಯಾಗಿದ್ದು. ಕನ್ನಡಿಗರು ಸರ್ಕಾರದ ನಿರ್ಧಾರಕ್ಕೆ ಗರಂ ಆಗಿದ್ದಾರೆ.

ಸರ್ಕಾರಿ ಶಾಲೆಗೆ ಕೊಠಡಿಗಳನ್ನು ಕೇಳಿ ಪ್ರತಿಭಟನೆ ಮಾಡಿದ್ದಕ್ಕೆ ಈ ರೀತಿ ಸಸ್ಪಂಡೆ ಮಾಡುವುದು ರಾಜ್ಯ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದು ಕನ್ನಡಿಗರು ಸೋಷಿಯಲ್‌ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಈ ಘಟನೆಯನ್ನು ಖಂಡಿಸಿ ಹಲವು ಕನ್ನಡಿಗರು ಪೋಸ್ಟ್‌ ಮಾಡಿದ್ದಾರೆ.

Karnataka government suspends teacher who asked for four rooms for Kannada gove school

ಸರ್ಕಾರದ ಕ್ರಮವನ್ನು ಖಂಡಿಸಿ ಪೋಸ್ಟ್‌ ಮಾಡಿರುವ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಗಮನಕ್ಕೆ ತರಲು ಬಯಸುವುದೇನೆಂದರೆ ನಾನು ಕಳೆದ ಒಂಭತ್ತು ವರ್ಷಗಳಿಂದ ನಿಡಗುಂದಿಯ ಅಂಬೇಡ್ಕರ ನಗರ ಶಾಲೆಯ ಅಭಿವೃದ್ಧಿಗಾಗಿ ಅಲ್ಲಿನ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ತನುಮನಧನದಿಂದ ಸಮಯದ ರಜೆಯ ಹಂಗಿಲ್ಲದೆ ನಿರಂತರ ಶ್ರಮಿಸುತ್ತಿದ್ದೇನೆ. ದಾನಿಗಳ ಶಿಕ್ಷಣ ಪ್ರೇಮಿಗಳ ಮತ್ತು ಕರ್ನಾಟಕ ಘನಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯದೊಂದಿಗೆ ಅನೇಕ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ ಬಂದಿದ್ದೇವೆ. ಇದಕ್ಕೆ ಸಾಕ್ಷಿ ಎಂಬಂತೆ ೨೦೨೪-೨೫ ನೇ ಸಾಲಿನ ಅತ್ಯುತ್ತಮ ಎಸ್ ಡಿ ಎಂ ಸಿ ಶಾಲೆ ಪ್ರಶಸ್ತಿ ಮತ್ತು ಒಂದು ಲಕ್ಷ ನಗದು ಬಹುಮಾನವೂ ಬಂದಿರುವುದು ತಮ್ಮ ಗಮನಕ್ಕಿದೆ. ಇವು ಇಲಾಖೆಗೆ ಮತ್ತು ಸರಕಾರಕ್ಕೆ ಘನತೆ ತರುವ ಕೆಲಸಗಳೆಂದು ತಮಗೆ ತಿಳಿಸಿ ಹೇಳಬೇಕಾಗಿಲ್ಲ.

ಈ ನಾಡಿನ ಪ್ರಸಿದ್ಧ ಚಿಂತಕರಾದ ಟಿ.ಪಿ.ಅಶೋಕ ರವರು ನಮ್ಮ ಶಾಲೆಯನ್ನು "ಈ ಶಾಲೆ ಈ ದೇಶದ ಅತ್ಯುತ್ತಮ ಸರಕಾರಿ ಸಂಸ್ಥೆಗಳಲ್ಲಿ ಒಂದು ಮತ್ತು ಈ ಶಾಲೆಗೆ ಬಂದಾಗ ರಾಷ್ಟ್ರಕವಿ, ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನದಲ್ಲಿ ಕಾಲಿಟ್ಟ ಅನುಭವವಾಯಿತು" ಎಂದು ಹೊಗಳಿರುವುದು ನಮ್ಮ ಸರಕಾರಿ ಶಾಲೆಯನ್ನೇ. ಇದು ಇಲಾಖೆಗೆ ತಮಗೆ ಮುಜುಗರವುಂಟು ಮಾಡುವಂಥದೇ, ಇದರ ಹಿಂದೆ ಶ್ರಮಿಸಿದ ನನ್ನ ವರ್ತನೆಗಳು 'ಅನಾಗರಿಕ'ವೇ?

ನಮ್ಮ ಶಾಲೆಯ ಕೆಲಸಗಳನ್ನು ಮೆಚ್ಚಿ ಈ ದೇಶದ ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆಯಾದ 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ಒಂದು ತಂಡವನ್ನು ನಮ್ಮ ಶಾಲೆಯರೆಗೂ ಕಳುಹಿಸಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಒಂದು ಸಾಕ್ಷö್ಯಚಿತ್ರ ನಿರ್ಮಿಸಿದೆ. ಇದರಿಂದ ಇಲಾಖೆಗೆ ಸರಕಾರಕ್ಕೆ ಘನತೆ ಮರ್ಯಾದೆ ಹೆಚ್ಚಿತೋ ಅಥವಾ ಕುಂದಿತೋ? ತಾವೇ ಕಾಳಜಿ ಮತ್ತು ಕರುಣೆಯ ಕಣ್ಣಿನಿಂದ ಯೋಚಿಸಿ.

ಹಲವಾರು ವರ್ಷಗಳ ಕಾಲ ಕಾದು, ನಮ್ಮ ಶಾಲೆಯಲ್ಲಿ ತರಗತಿ ಮತ್ತು ಮಕ್ಕಳ ಸಂಖ್ಯೆಗನುಗುಣವಾಗಿ ತರಗತಿ ಕೊಠಡಿಗಳಿಲ್ಲವೆಂದು ಮನಗಂಡು ಹಲವಾರು ತಾಲ್ಲೂಕು ಹಂತದ ಜಿಲ್ಲಾ ಹಂತದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಏನೂ ಸ್ಪಂದನೆ ಸಿಗದೇ ಇದ್ದಾಗ ಅನಿವಾರ್ಯವಾಗಿ ನಾನು ನಮ್ಮ ಶಾಲೆಯಿಂದ ಬಿಇಒ ಕಛೇರಿವರೆಗೆ ಡಾ.ಬಾಬಾಸಾಹೇಬ ಅಂಬೇಡ್ಕರರವರ ಫೋಟೋ ಹಿಡಿದುಕೊಂಡು ಒಂದು ಭಿತ್ತಿಪತ್ರವನ್ನು ಹಿಡಿದುಕೊಂಡು ಗಾಂಧಿ ಟೋಪಿ ಧರಿಸಿ ಸುಮಾರು ಹದಿನೈದು ಕಿ.ಮೀ ಮೌನ ಕಾಲ್ನಡಿಗೆ ಜಾಥಾದೊಂದಿಗೆ ಬಿಇಒ ಕಛೇರಿವರೆಗೂ ಬಂದು ಬಿಇಒ ಕಛೇರಿಯ ಬಾಗಿಲಲ್ಲಿ ಕೂತು ಉಪವಾಸ ಸತ್ಯಾಗ್ರಹ ಮಾಡಿರುತ್ತೇನೆ. ನಮ್ಮ ಶಾಲಾ ಮಕ್ಕಳು "ನಮ್ಮನ್ನ ಎಲ್ಲಿ ಕೂರಿಸಿ ಪಾಠ ಮಾಡ್ತೀರಿ ಸರ್? ನಾವು ಮಳ್ಯಾಗ ಬಿಸಿಲಾಗ ಛಳಿಯಾಗ ಹೊರಗ ಕುಂದರಬೇಕೇನ್ರಿ?" ಎಂದೆಲ್ಲ ಪ್ರಶ್ನಿಸಿದಾಗ ನನ್ನ ಕರುಳು ಹಿಂಡಿದಂತಾಗಿ ನೊಂದು ಅಸಹಾಯಕನಾಗಿ ನಾನು ಈ ನಿರ್ಧಾರ ಕೈಗೊಂಡಿರುತ್ತೇನೆ.

ಹೀಗೆ ಉಪವಾಸ ಕುಳಿತ ನನ್ನನ್ನ ತಾವು ಶತ್ರುವಿನ ರೀತಿ ನಡೆಸಿಕೊಂಡಿರಿ. ಏಕವಚನದಲ್ಲಿ ಸಂಬೋಧಿಸಿ ನನ್ನ ಮೇಲೆ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದಿರಿ. ನನ್ನನ್ನ ನಿಮ್ಮ ಅಧಿಕಾರ ಬಲದ ಮುಂದೆ ಯರ್ಕಶ್ಚಿತ್ ಎನ್ನುವ ರೀತಿಯಲ್ಲಿ ನಡೆಸಿಕೊಂಡಿರಿ. ತಾವು ನನ್ನನ್ನ ಏಕವಚನದಲ್ಲಿ ಸಂಬೋಧಿಸುವಾಗ ನನ್ನ ಎಂ.ಎ ಇಂಗ್ಲಿಷ್ ಪದವಿ ಮತ್ತು ಕೆಸೆಟ್ ಪ್ರಮಾಣಪತ್ರ ಮತ್ತು ಎಂ.ಎ ಕನ್ನಡ ಪದವಿ ಮತ್ತು ಕೆಸೆಟ್ ಪ್ರಮಾಣ ಪತ್ರಗಳು ನೆನಪಾಗಿ ಆಳದಲ್ಲಿ ನೊಂದೆ.

ನಾನು ರಾಷ್ಟ್ರಪತಿಗಳೀಂದ ಪಡೆದ ಚಿನ್ನದ ಪದಕ ನನಗೆ ಒದಗಿರುವ ಪರಿಸ್ಥಿತಿ ನೋಡಿ ಅತ್ತಂಗಾಯಿತು, ನಾನು ಪಡೆದ ಕೇಂದ್ರ ಸರಕಾರ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಡಮಾಡುವ ಕನ್ನಡದ ಚೊಚ್ಚಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ಘನ ಸರಕಾರ ಕೊಡಮಾಡುವ ನನಗೆ ನೀಡಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ನಿರರ್ಥಕ ಎನ್ನಿಸಿದವು. ಅದೂ ಹೋಗಲಿ ಈ ನಾಡಿನ ಹತ್ತು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ನಾನು ಬರೆದಿರುವ ಪದ್ಯಗಳು ಪಠ್ಯವಾಗಿ ಆಯ್ಕೆಯಾಗಿವೆ. ನೀವು ನನ್ನನ್ನ ಅಂವ ಇಂವ ಎಂದು ಸಂಬೋಧಿಸುವಾಗ ಇವಕ್ಕೆಲ್ಲ ಎಲ್ಲಿ ಅರ್ಥ ಬಂತು ಸರ್? ಯಾವುದು 'ಅನಾಗರೀಕತೆ' ಎಂಬುದನ್ನ ತಾವೇ ದಯಮಾಡಿ ಪರಿಶೀಲಿಸಲು ವಿನಂತಿಸುತ್ತೇನೆ. ನಾನು ಹುದ್ದೆಯಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿರಬಹುದು ಆದರೆ ಪ್ರವೃತ್ತಿ ಮತ್ತು ವಿದ್ಯಾರ್ಹತೆಯಿಂದ ನಾನು ಕಡಿಮೆಯಲ್ಲ ಎಂದು ತಮ್ಮ ಗಮನಕ್ಕೆ ತರಬಯಸುತ್ತೇನೆ ಅಂತ ಹೇಳಿದ್ದಾರೆ.

ಮುಂದುವರಿದು ಕೇವಲ ನನ್ನ ಶಾಲೆ ಮಾತ್ರವಲ್ಲ ಇಡೀ ತಾಲ್ಲೂಕಿನ ಸಾವಿರಾರು ಮಕ್ಕಳಿಗೆ ಪ್ರವಾಹ ಸಂದರ್ಭದಲ್ಲಿ ಎಜುಕೇಶನ್ ಕಿಟ್ ಗಳನ್ನು ದಾನಿಗಳ ಸಹಾಯದಿಂದ ನೀಡಲು ನೆರವಾಗಿದ್ದೇನೆ. ದಿಗ್ಗೇವಾಡಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಮ್ಮ ಗೆಳೆಯರ ಸಹಾಯದಿಂದ ಒಂದು ಜೊತೆ ಸಮವಸ್ತ್ರ ನೀಡಲು ನೆರವಾಗಿದ್ದೇನೆ. ಪ್ರವಾಹ ಸಂದರ್ಭದಲ್ಲಿ ನೆರೆಯಿಂದ ಸಂತ್ರಸ್ತರಾಗಿದ್ದ ಅನೇಕ ಹಳ್ಳಿಗಳಿಗೆ ಲಕ್ಷಲಕ್ಷ ರೂಪಾಯಿಯ ಔಷಧ, ಬಟ್ಟೆ, ಹಾಸಿಗೆ ಮತ್ತು ಪಾತ್ರೆ ಪರಿಕರಗಳನ್ನ ದಾನಿಗಳ ಸಹಾಯದಿಂದ ನೀಡಿದ್ದು ತಮ್ಮ ಪ್ರಕಾರ 'ಅನಾಗರಿಕ' ವರ್ತನೆಯೇ ದಯಮಾಡಿ ನನ್ನ ವರ್ತನೆಗಳ ಕುರಿತು ನಿಮ್ಮ ಪೂರ್ವಾಗ್ರಹಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಕೋರುವೆ ಅಂತ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+