ಕೆರೆ ವಿಧೇಯಕ ತಿದ್ದುಪಡಿಗೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು, ಮೇ. 7 : ನಿರುಪಯುಕ್ತ ಮತ್ತು ಒತ್ತುವರಿಯಾಗಿರುವ ಕೆರೆಗಳನ್ನು ಸಮರ್ಪಕ ಉದ್ದೇಶಕ್ಕೆ ಬಳಸಿಕೊಳ್ಳುವ 'ಕೆರೆ ವಿಧೇಯಕ 2014' ಕ್ಕೆ ತಿದ್ದುಪಡಿ ತರಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ಕಾಯ್ದೆ ತಿದ್ದುಪಡಿ ತರುವುದು ಅಗತ್ಯವಾಗಿದ್ದು ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಜತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.[ವಾಸದ ಮನೆ ಒತ್ತುವರಿ ತೆರವಿಲ್ಲ]

ಉಪಯೋಗವಿಲ್ಲದೇ ಪಾಳು ಬಿದ್ದಿರುವ ಕೆರೆಗಳನ್ನು, ಹೂಳು ತುಂಬಿರುವ ಕೆರೆಗಳನ್ನು, ಒತ್ತುವರಿಯಾದ ಕೆರೆಯನ್ನು ಬಳಕೆಗೆ ತೆಗೆದುಕೊಳ್ಳಬೇಕಿದೆ. ಹಾಗಾಗಿ ಬಿಲ್ ನಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ವಿವಿಧೆಡೆ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಹೈ ಕೋರ್ಟ್ ಆದೇಶದ ಅನ್ವಯ ನಡೆಯುತ್ತಿದೆ. ಇಲ್ಲಿ ಒತ್ತಡಕ್ಕೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.[ಸಾರಕ್ಕಿ ಕೆರೆ ತೆರವು ವೇಳೆ ಏನೇನಾಯಿತು?]
ಜೆಡಿಎಸ್ ಮತ್ತು ಬಿಜೆಪಿ ಕೆರೆ ಒತ್ತುವರಿಯನ್ನು ತೀವ್ರವಾಗಿ ವಿರೋಧಿಸಲು ಆರಂಭಿಸಿವೆ. ಬಿಡಿಎನೇ ನಿವೇಶನ ಮಾಡಿ ನೀಡಿದ್ದು ಈಗ ಹೇಗೆ ಅಕ್ರಮವಾಗುತ್ತದೆ ಎಂಬ ಪ್ರಶ್ನೆ ಎದುರಾಗಿದ್ದು ನಾಗರೀಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಸೂಕ್ತ ಪರಿಹಾರ ನೀಡದೇ ಇಂಥ ಕಾರ್ಯಕ್ಕೆ ಮುಂದಾಗಬಾರದಿತ್ತು ಎಂಬುದು ವಿರೋಧ ಪಕ್ಷಗಳ ವಾದ.
ಇಟ್ಟಮಡು, ಸಾರಕ್ಕಿ ಕರೆ ಒತ್ತುವರಿ ತೆರವು ಮಾಡಿರುವ ಆಡಳಿತ ಬಾಣಸವಾಡಿ ಕೆರೆ ಒತ್ತುವರಿ ಜಾಗವನ್ನು ವಶಕ್ಕೆ ಪಡೆಯುತ್ತಿದೆ. ಅಲ್ಲದೇ ಕಾಡಿಗೋಡಿ ಬಳಿಯ ಅರಣ್ಯ ಭೂಮಿಯನ್ನು ತೆಕ್ಕೆಗೆ ತೆಗೆದುಕೊಂಡಿದೆ. ಸದ್ಯ ವಾಣಿಜ್ಯ ಕಟ್ಟಡಗಳನ್ನು ಧ್ವಂಸ ಮಾಡಲಾಗಿದ್ದು ವಾಸದ ಮನೆಗಳಿಗೆ ಹಾನಿಮಾಡಿಲ್ಲ.












Click it and Unblock the Notifications