Foxconn: ಕರ್ನಾಟಕದಲ್ಲಿ ಇನ್ನಷ್ಟು ಬಂಡವಾಳ ಹೂಡಲು ಫಾಕ್ಸ್‌ಕಾನ್ ಆಹ್ವಾನಿಸಿದ ಸರ್ಕಾರ
ಚೆನ್ನೈ, ಆಗಸ್ಟ್ 01: ಈಗಾಗಲೇ ಬೆಂಗಳೂರಿನಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಬಂಡವಾಳ ಹೂಡಿರುವ ಫಾಕ್ಸ್‌ಕಾನ್ ಕಂಪನಿ ಜೊತೆಗೆ ಕರ್ನಾಟಕ ಸರ್ಕಾರವು ಮತ್ತೊಂದು ಹಂತದ ಫಲಪ್ರದ ಮಾತುಕತೆ ನಡೆಸಿದೆ. ರಾಜ್ಯದಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆಗೆ ಆಹ್ವಾನಿಸಿದೆ
ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು ಅವರೊಂದಿಗೆ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಚರ್ಚಿಸಿದರು.ಫಾಕ್ಸ್‌ಕಾನ್ ಕಂಪನಿಯು ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದಾದರೆ ಎಲ್ಲ ರೀತಿಯ ಬೆಂಬಲ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಮಾತುಕತೆ ನಂತರ ಸಚಿವ ಎಂಬಿ. ಪಾಟೀಲ್ ಮಾತನಾಡಿ, ಫಾಕ್ಸ್ ಕಾನ್ ಕಂಪನಿ ಜತೆಗಿನ ಒಪ್ಪಂದಗಳು, ಮಾತುಕತೆ ನಿರೀಕ್ಷಿತ ಗತಿಯಲ್ಲಿ ಸಾಗುತ್ತಿವೆ. ಈಗಾಗಲೇ ಬೆಂಗಳೂರಿನ ಐಫೋನ್ ತಯಾರಿಕಾ ಘಟಕ, ಬಿಡಿಭಾಗಗಳ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಚರ್ಚೆ ಆಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಶೀಘ್ರವೇ 300 ಎಕರೆ ಜಾಗ ನೀಡಲಿದ್ದೇವೆ ಎಂದರು.
2024ರಲ್ಲಿ ಬೆಂಗಳೂರಿನಲ್ಲಿ ಘಟಕ ಆರಂಭ
ಎಲ್ಲವು ಅಂದುಕೊಂಡಂತಾದರೆ ಫಾಕ್ಸ್‌ಕಾನ್ ಕಂಪನಿಯು ಮುಂದಿನ ವರ್ಷ 2024ರ ಏಪ್ರಿಲ್ 1ರ ಹೊತ್ತಿಗೆ ಬೆಂಗಳೂರಿನ ದೇವನಹಳ್ಳಿ ಘಟಕದಲ್ಲಿ ಉತ್ಪಾದನೆ ಪ್ರಾರಂಭಿಸಲಿದೆ. ಒಟ್ಟಾರೆ ಫಾಕ್ಸ್‌ಕಾನ್ ಬಂಡವಾಳ ಹೂಡಿಕೆಯಿಂದಾಗಿ 50,000 ಜನರಿಗೆ ಉದ್ಯೋಗ ಒದಗಿಸುವ 13,600 ಕೋಟಿ ರೂಪಾಯಿ ಮೊತ್ತದ ಯೋಜನೆ ಅನುಷ್ಠಾನಕ್ಕೆ ವೇಗ ನೀಡಲು ಸರ್ಕಾರ ಸಿದ್ಧವಾಗಿದೆ.
ಬೆಂಗಳೂರಿನ ಬೆನ್ನಲ್ಲೆ ತುಮಕೂರಿನಲ್ಲೂ ಸಹ ಫಾಕ್ಸ್‌ಕಾನ್ ಹೂಡಿಕೆಗೆ ಮುಂದಾಗಿದೆ. ಇಲ್ಲಿ ಐಫೋನ್ ಬಿಡಿಭಾಗಗಳ ತಯಾರಿಕಾ ಘಟಕ ನಿರ್ಮಾಣಕ್ಕೆ ಒಲವು ತೋರಿದೆ. ಈ ಸಂಬಂಧ ಈಗಾಗಲೇ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. ಸಿಎಂ ಸಿದ್ದರಾಮಯ್ಯನವರನ್ನು ಬೇಟಿ ಮಾಡಿ ತಮ್ಮ ಯೋಜನೆ ಕುರಿತು ವಿವರಿಸಿದರು. ಇಲ್ಲಿ ಒಟ್ಟು 8,800 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದ್ದು, ಇದರಿಂದ 14000 ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕೆಲ್ಲ ಸರ್ಕಾರ ಅಗತ್ಯ ಸಹಕಾರ ಕೊಡುವುದಾಗಿ ಹೇಳಿದೆ.

ಚೆನ್ನೈ ಸಭೆಯಲ್ಲಿ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಾದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇವಿ ರಮಣ ರೆಡ್ಡಿ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸಭೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications