ಹುಕ್ಕಾ ಬಾರ್ ನಿಷೇಧ, ಸಿಗರೇಟು ಖರೀದಿಸುವವರ ವಯಸ್ಸು ಹೆಚ್ಚಿಸಿದ ಕರ್ನಾಟಕ ಸರ್ಕಾರ, ವಿವರ
ಬೆಂಗಳೂರು, ಸೆಪ್ಟೆಂಬರ್ 20: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೊಂದಿಗೆ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಹುಕ್ಕಾ ಬಾರ್‌ಗಳನ್ನು ನಿಷೇಧಿಸಲು ನಿರ್ಧರಿಸಿದೆ. ತಂಬಾಕು ಉತ್ಪನ್ನಗಳನ್ನು ಖರೀದಿಸಲು ಇರುವ ಕನಿಷ್ಠ ವಯೋಮಿತಿಯನ್ನು ಹೆಚ್ಚಿಸಲು ಮುಂದಾಗಿದೆ.
ತಂಬಾಕು ಉತ್ಪನ್ನಗಳನ್ನು ಖರೀದಿಸಲು ಇರುವ ಕನಿಷ್ಠವಯಸ್ಸು ಈಗಿರುವ 18 ವರ್ಷದಿಂದ 21ಕ್ಕೆ ಹೆಚ್ಚಿಸಲು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆಗೆ (COPTA) ತಿದ್ದುಪಡಿ ತರುತ್ತಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಯುವ ಸಬಲೀಕರಣ ಸಚಿವ ಬಿ ನಾಗೇಂದ್ರ ಅವರು ಅಧಿಕಾರಿಗಳು ಮತ್ತು ತಜ್ಞರನ್ನು ಭೇಟಿ ಮಾಡಿ ಎರಡು ಮಹತ್ವದ ನಿರ್ಧಾರಗಳನ್ನು ಜಾರಿಗೆ ತರಲು ಚರ್ಚಿಸಿದ್ದಾರೆ.

ಹುಕ್ಕಾ ಬಾರ್‌ಗಳ ಪರಿಣಾಮವನ್ನು ಅಧ್ಯಯನ ಮಾಡಿದ ಆರೋಗ್ಯ ತಜ್ಞರು ನಿಷೇಧಕ್ಕೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಖ್ಯಾತ ಆಂಕೊಲಾಜಿಸ್ಟ್ ಡಾ.ವಿಶಾಲ್ ರಾವ್ ಯುಎಸ್ ಅವರು ಈ ಹಿಂದೆ ಹುಕ್ಕಾ ಬಾರ್‌ಗಳ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ದಿನೇಶ್ ಗುಂಡೂರಾವ್ ಸುದ್ದಿಗಾರರಿಗೆ ತಿಳಿಸಿದರು.
"ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಿಂದಿನ ಸರ್ಕಾರಗಳು ಕ್ರಮಗಳನ್ನು ಕೈಗೊಂಡು ಕಾಲಕಾಲಕ್ಕೆ ಬದಲಾವಣೆಗಳನ್ನು ತರಲು ಪ್ರಯತ್ನಿಸಿದವು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲೂ ಹುಕ್ಕಾ ನಿಷೇಧ ಮತ್ತು ನಗರ ಪ್ರದೇಶಗಳಲ್ಲಿ ಧೂಮಪಾನ ನಿಷೇಧ ವಲಯಗಳನ್ನು ರಚಿಸುವ ಪ್ರಯತ್ನಗಳು ನಡೆದಿದ್ದವು. ಈ ಉಪಕ್ರಮಕ್ಕಾಗಿ ನಾವು ವಿಶ್ವಸಂಸ್ಥೆಯಿಂದ ಪ್ರಶಸ್ತಿಯನ್ನು ಸಹ ಪಡೆದಿದ್ದೇವೆ. ಇಂತಹ ಉತ್ಪನ್ನಗಳನ್ನು ನಿಷೇಧಿಸುವಲ್ಲಿ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಹುಕ್ಕಾ ಬಾರ್‌ಗಳು ಜನರ ಮೇಲೆ ವಿಶೇಷವಾಗಿ ಯುವಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. 13 ವರ್ಷದಿಂದ 28-29 ರವರೆಗಿನ ಯುವಕರು ತಂಬಾಕು ಬಳಸುವ ಹುಕ್ಕಾಗೆ ಬಲಿಯಾಗುತ್ತಿದ್ದಾರೆ. ಈಗಿರುವ COPTA ಕ್ಕೆ ನಾವು ಕೆಲವು ತಿದ್ದುಪಡಿಗಳನ್ನು ಮಾಡಿದ್ದೇವೆ ಮತ್ತು ಸಾರ್ವಜನಿಕವಾಗಿ ಸಿಗರೇಟ್ ಮಾತ್ರವಲ್ಲದೆ ಇತರ ಎಲ್ಲಾ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಷೇಧಿಸಿದ್ದೇವೆ. ದಂಡದ ಮೊತ್ತ ಹೆಚ್ಚಿಸಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು.
ಈಗಿರುವ ಕಾಯ್ದೆಯಲ್ಲಿ ಶಾಲಾ-ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿರ್ಬಂಧವಿದೆ. ನಾವು ಅದನ್ನು ಆಸ್ಪತ್ರೆಗಳು, ಆರೋಗ್ಯ ಸಂಬಂಧಿತ ಕೇಂದ್ರಗಳು, ಆರೋಗ್ಯ ಕೇಂದ್ರಗಳು, ದೇವಸ್ಥಾನಗಳು, ಮಸೀದಿಗಳು, ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಿಗೆ ವಿಸ್ತರಿಸುತ್ತಿದ್ದೇವೆ, ಅಲ್ಲಿ ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳನ್ನು 100 ಮೀಟರ್ ವ್ಯಾಪ್ತಿಯ ಹೊರಗೆ ಮಾತ್ರ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಹಲವಾರು ತಂಬಾಕು ಉತ್ಪನ್ನಗಳನ್ನು ಹುಕ್ಕಾದಲ್ಲಿ ಬಳಸಲಾಗುತ್ತದೆ ಮತ್ತು ಅದನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು. ಬೆಂಗಳೂರಿನಲ್ಲಿ ಅನೇಕ ಹುಕ್ಕಾ ಬಾರ್‌ಗಳಿವೆ. COPTA ಗೆ ತಿದ್ದುಪಡಿ ಮಾಡುವ ಮೂಲಕ ಹುಕ್ಕಾವನ್ನು ನಿಷೇಧಿಸಲು ನಾವು ಪ್ರಸ್ತಾಪಿಸುತ್ತೇವೆ. ಅಲ್ಲದೆ, ಕೆಲವು ಕಡೆ ತಂಬಾಕು ಮಾರಾಟಗಾರರಿಗೆ ಪರವಾನಗಿ ನೀಡುವುದನ್ನು ನಿರ್ಬಂಧಿಸುವಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರಿ ಆದೇಶವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ತಂಬಾಕು ಸೇವನೆಯು ವಿಶೇಷವಾಗಿ ಯುವಕರಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ರಾಜ್ಯದಲ್ಲಿ ಇಂತಹ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಬಳಕೆ ತಡೆಗಟ್ಟಲು ಜಾಗೃತಿ ಮೂಡಿಸುವ ಮತ್ತು ಕಾನೂನುಗಳನ್ನು ಬಲಪಡಿಸುವ ಅಗತ್ಯವಿದೆ ಎಂದರು. ತಂಬಾಕು ಸೇವನೆ ತಡೆ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಿ ಸಲಹೆ ನೀಡುವುದಾಗಿ ಸಚಿವ ನಾಗೇಂದ್ರ ಹೇಳಿದರು.












Click it and Unblock the Notifications