ಪುಣ್ಯಕೋಟಿ ದತ್ತು ಯೋಜನೆ: ಸರ್ಕಾರಿ ನೌಕರರಿಂದ 100 ಕೋಟಿ ರೂ. ದೇಣಿಗೆ
ಬೆಂಗಳೂರು, ಅಕ್ಟೋಬರ್ 14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 'ಪುಣ್ಯಕೋಟಿ ದತ್ತು ಯೋಜನೆ' ಒಟ್ಟು 80-100ಕೋಟಿ ರೂ. ದೇಣಿಗೆ ನೀಡಲು ಮುಂದಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿತು. ಈ ವೇಳೆ ರಾಜ್ಯ ಸರ್ಕಾರದ 'ಪುಣ್ಯಕೋಟಿ ದತ್ತು ಯೋಜನೆ'ಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಇತರ ಸಂಸ್ಥೆಗಳ ನೌಕರರು ದೇಣಿಗೆ ನೀಡಲು ಸಮ್ಮತಿಸಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಜತೆಗೆ ದೇಣಿಗೆ ನೀಡುವ ಕುರಿತು ಸಮ್ಮತಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ದೇಣಿಗೆ ಕುರಿತು ಮನವಿ ಮಾಡಿದ್ದರು. ಈ ಮನವಿಗೆ ಸದ್ಯ ಸ್ಪಂದಿಸಿದ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರು ಮತ್ತು ಸರ್ಕಾರದ ಇತರ ಸಂಸ್ಥೆಗಳ ನೌಕರರು ಸ್ವ-ಇಚ್ಛೆಯಿಂದ ದೇಣಿಗೆ ನೀಡಲು ಮುಂದಾಗಿದ್ದಾರೆ.

80ರಿಂದ 100 ಕೋಟಿ ವೇತನ ದೇಣಿಗೆ
ಸಂಘದ ವ್ಯಾಪ್ತಿ ಸರ್ಕಾರ ನೌಕರರ ಗ್ರೂಪ್ -ಎ ಅಧಿಕಾರಿಗಳು 11,000 ರೂ., ಗ್ರೂಪ್- ಬಿ ಅಧಿಕಾರಿಗಳು 4,000 ರೂ. ಹಾಗೂ ಗ್ರೂಪ್ -ಸಿ ವೃಂದದ ನೌಕರರು 400 ರೂ. ದೇಣಿಗೆಯನ್ನು ಒಂದೇ ಬಾರಿಗೆ ಪಾವತಿಸಲು ಸಮ್ಮತಿಸಿದ್ದಾರೆ. ಈ ದೇನಿಗೆ ಹಣವನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ವೇತನದಲ್ಲಿ ಹಿಡಿದುಕೊಳ್ಳುವಂತೆ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಕೋರಿದ್ದಾರೆ. ವೇತನದಲ್ಲಿ ಕಡಿತಗೊಳ್ಳಲಿರುವ ನೌಕರರ ಈ ಒಟ್ಟು ಮೊತ್ತವು ಸುಮಾರು 80 ರಿಂದ 100 ಕೋಟಿ ರೂ.ಗಳಾಗಲಿದೆ ಎಂದು ಅಂದಾಜಿಸಲಾಗಿದೆ.
ನೌಕರರ ಸಂಘದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯ ಸರ್ಕಾರದ ಗೋಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುದಿ ಗೋವುಗಳು ಆಶ್ರಯ ಪಡೆದಿವೆ. ಇವುಗಳ ಸಮರ್ಪಕ ಪಾಲನೆ ಪೋಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಈ ಪುಣ್ಯದ ಕೆಲಸದಲ್ಲಿ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಲು ಮುಂದಾಗಿರುವುದು ಅಭಿನಂದನಾರ್ಹ ಎಂದು ಶ್ಲಾಘಿಸಿದರು.

ಅಕ್ಟೋಬರ್‌ನಲ್ಲೇ ವೇತನ ಆಯೋಗ ರಚನೆ
ರಾಜ್ಯದಲ್ಲಿ ಬರಗಾಲ, ಪ್ರವಾಹ, ಕೋವಿಡ್ 19 ಮುಂತಾದ ಸಂಕಷ್ಟದ ಸಂದರ್ಭಗಳಲ್ಲಿ ಸರ್ಕಾರಿ ನೌಕರರು ಅತ್ಯಂತ ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೆ ಭರವಸೆ ನೀಡಿದಂತೆ, ಈ ತಿಂಗಳಲ್ಲಿಯೇ ವೇತನ ಆಯೋಗ ರಚಿಸಲಾಗುವುದು. ನೌಕರರಿಗೆ ವೇತನ, ಭತ್ಯೆಗಳೊಂದಿಗೆ, ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹಕಗಳನ್ನು ನೀಡುವುದು, ಸರ್ಕಾರಿ ನೌಕರರ ಕಾರ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮೊದಲಾದ ಅಂಶಗಳ ಕುರಿತು ಪರಿಶೀಲಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಈ ಸಂದರ್ಭದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಂ ಮತ್ತು ಸರ್ಕಾರ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications