Karnataka Govt Employees Strike : ಮಾರ್ಚ್ 1ರಿಂದ ಸರ್ಕಾರಿ ನೌಕರರ ಮುಷ್ಕರ
ಕರ್ನಾಟಕದ ಸರ್ಕಾರಿ ನೌಕರರು ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲಿದ್ದಾರೆ.
ಬೆಂಗಳೂರು, ಫೆಬ್ರವರಿ 22; ಕರ್ನಾಟಕದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮಾರ್ಚ್ 1ರಿಂದ ಮುಷ್ಕರ ನಡೆಸಲಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳು) ಈ ಅನಿರ್ದಿಷ್ಟಾವಧಿ ಮುಷ್ಕರದ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 1/3/2023ರ ಬುಧವಾರದಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ.
ಬೇಡಿಕೆಗಳು; ಪ್ರಕಟಣೆಯಲ್ಲಿ ರಾಜ್ಯದ ಸಮಸ್ತ ಅಧಿಕಾರಿ/ ನೌಕರ ಬಾಂಧವರೇ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ-ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ 21/02/2023ರಂದು ನಡೆದ ರಾಜ್ಯ ಕಾರ್ಯಕಾರಿಣಿ ಮತ್ತು ವೃಂದ ಸಂಘಗಳ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದ ಸಮಸ್ತ ಸರ್ಕಾರಿ ಅಧಿಕಾರಿ ನೌಕರರು ದಿನಾಂಕ 01/03/2023ರ ಬುಧವಾರದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಯಶಸ್ವಿಗೊಳಿಸಲು ಸಂಘವು ಮನವಿ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
* ರಾಜ್ಯ ಸರ್ಕಾರಿ ನೌಕರರ ನ್ಯಾಯಯುತವಾದ ಬೇಡಿಕೆಯಾದ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು 7ನೇ ವೇತನ ಆಯೋಗದಿಂದ ಶೀಘ್ರವಾಗಿ ಪಡೆದು, ದಿನಾಂಕ 01/07/2022ರಿಂದ ಜಾರಿಗೆ ಬರುವಂತೆ ಶೇ. 40 ರಷ್ಟು ವೇತನ ಹೆಚ್ಚಳ ಸೌಲಭ್ಯವನ್ನು ಸರ್ಕಾರಿ ಆದೇಶ ಹೊರಡಿಸುವ ಮೂಲಕ ಅನುಷ್ಠಾನಗೊಳಿಸುವುದು.
* ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿಯಲ್ಲಿ ಎನ್‌ಪಿಎಸ್ ರದ್ದುಪಡಿಸಿ OPSಯೋಜನೆಯನ್ನು ಜಾರಿಗೊಳಿಸುವುದು.

7ನೇ ವೇತನ ಆಯೋಗ ರಚನೆ ಮಾಡಿ ಆದೇಶ
ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕ ಸರ್ಕಾರವು ಈಗಾಗಲೇ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡುವಂತೆ ಆದೇಶಿಸಲಾಗಿದೆ.
ದಿನಾಂಕ 19/11/2022 ರಂದು 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಆಯೋಗಕ್ಕೆ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷರು.

ಬಜೆಟ್ ಬಗ್ಗೆ ನೌಕರರ ಅಸಮಾಧಾನ
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 17ರಂದು 2023-24ನೇ ಸಾಲಿನ ಬಜೆಟ್ ಮಂಡಿಸಿದರು. ಆದರೆ ಸರ್ಕಾರಿ ನೌಕರರ ಬೇಡಿಕೆಗಳಾದ 7ನೇ ವೇತನ ಆಯೋಗ, ಎನ್‌ಪಿಎಸ್ ಜಾರಿ ಬಗ್ಗೆ ಬಜೆಟ್‌ನಲ್ಲಿ ಸರಿಯಾದ ಪ್ರಸ್ತಾಪವಿಲ್ಲ. ಈ ಬಗ್ಗೆ ಸರ್ಕಾರಿ ನೌಕರರು ಅಸಮಾಧಾನಗೊಂಡಿದ್ದಾರೆ.
ಬಜೆಟ್ ಮಂಡನೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಬಸವರಾಜ ಬೊಮ್ಮಾಯಿ ಬಳಿ 7ನೇ ವೇತನ ಆಯೋಗದ ಬಗ್ಗೆ ಪ್ರಶ್ನಿಸಲಾಗಿತ್ತು. ಆಗ ಅವರು, "7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿದೆ. ಎಲ್ಲವನ್ನೂ ಬಜೆಟ್ ಭಾಷಣದಲ್ಲಿಯೇ ಹೇಳಬೇಕು ಎಂದೇನಿಲ್ಲ. ಸುಧಾಕರ್ ರಾವ್ ಅಧ್ಯಕ್ಷತೆಯ ಆಯೋಗದಿಂದ ವರದಿ ಕೇಳಿದ್ದೇವೆ. ಈ ವರ್ಷವೇ ವರದಿ ಅನುಷ್ಠಾನಗೊಳಿಸಬೇಕು ಎಂಬ ಗುರಿ ಇದೆ" ಎಂದು ಹೇಳಿದ್ದರು.

ಎನ್‌ಪಿಎಸ್ ಅನುಷ್ಠಾನಕ್ಕೆ ವಿರೋಧ
ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ವೇತನ ಆಯೋಗ ತನ್ನ ಪ್ರಶ್ನಾವಳಿಯಲ್ಲಿ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಎನ್. ಪಿ. ಎಸ್. ಯೋಜನೆಯನ್ನು ಅನುಷ್ಟಾನಗೊಳಿಸಿದೆ. ಈ ಯೋಜನೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಅಥವಾ ಸುಧಾರಣೆಗೆ ಯಾವುದೇ ಸಲಹೆಗಳಿವೆಯೇ? ಎಂದು ಕೇಳಿತ್ತು.
ನೌಕರರ ಸಂಘ ಇದಕ್ಕೆ ಉತ್ತರ ನೀಡಿದ್ದು, ಸರ್ಕಾರಿ ನೌಕರರ ಸಂಘದ ವಿರೋಧದ ನಡುವೆಯೂ ರಾಜ್ಯ ಸರ್ಕಾರವು ಈ ಯೋಜನೆಯನ್ನು 1/4/2006 ರಿಂದ ಜಾರಿಗೆ ತಂದಿದೆ ಎಂದು ಹೇಳಿತ್ತು. ಈ ಯೋಜನೆಯು ಅನೇಕ ನ್ಯೂನತೆಗಳಿಂದ ಕೂಡಿರುವುದರಿಂದ ಕೆಲವೊಂದು ಉಪಲಬ್ದಗಳನ್ನು ಮಂಜೂರು ಮಾಡಿದ್ದಾಗಿಯೂ ಎನ್. ಪಿ. ಎಸ್. ನೌಕರರಿಗೆ ಅನುಕೂಲವಾಗುತ್ತಿಲ್ಲ ಎಂದು ದೂರಿದೆ.
6 ರಾಜ್ಯಗಳಲ್ಲಿ ಎನ್. ಪಿ. ಎಸ್. ಯೋಜನೆಯನ್ನು ರದ್ದುಪಡಿಸಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯು ಸಹ ಎನ್. ಪಿ. ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಬೇಕು ಎಂದು ಬೇಡಿಕೆ ಇಟ್ಟಿದೆ.

ಪ್ರಶ್ನಾವಳಿಗೆ ಉತ್ತರ ನೀಡಲು ಅವಕಾಶ
ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ತನಗೆ ವಹಿಸಲಾಗಿರುವ ಪರಿಶೀಲನಾಂಶಗಳ ಕುರಿತಂತೆ ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು ಅಲ್ಲದೇ, ಇಲಾಖೆಗಳಿಂದ, ಸಂಸ್ಥೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆಗಳನ್ನು ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿಗಳನ್ನು ತಯಾರು ಮಾಡಿದೆ.
ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಪ್ರಶ್ನಾವಳಿಗೆ ಉತ್ತರ ನೀಡಿದೆ. ಪ್ರಶ್ನಾವಳಿಗೆ ಉತ್ತರ ನೀಡಲು ಫೆಬ್ರವರಿ 28ರ ತನಕ ಅವಕಾಶ ನೀಡಲಾಗಿದೆ.











Click it and Unblock the Notifications