Ration Card Cancellation: ಜನಗಣತಿ ವೇಳೆ ಪಡಿತರ ಚೀಟಿ ರದ್ದಾಗುತ್ತಾ? ಈ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ
Ration Card Cancellation: ರಾಜ್ಯದಲ್ಲಿ ಸದ್ಯ ಜನಗಣತಿ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ, ನಕಲಿ ಬಿಪಿಎಲ್ ಕಾರ್ಡ್ ರದ್ದುಪಡಿಸಿ, ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸುವ ಕೆಲಸ ಕೂಡ ಮುಂದುವರೆದಿದೆ. ಈ ನಡುವೆಯೇ ಇದೀಗ ಪಡಿತರ ಚೀಟಿದಾರರಿಗೆ ಆತಂಕವೊಂದು ಎದುರಾಗಿದೆ. ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದೀಗ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆಹಚ್ಚಿ ಅಂತಹವರನ್ನು ಎಪಿಎಲ್‌ಗೆ ವರ್ಗಾವಣೆ ಮಾಡುವ ಕೆಲಸವನ್ನು ಸರ್ಕಾರ ಮುಂದುವರೆಸಿದೆ. ಇದರ ಉದ್ದೇಶ ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸುವುದಾಗಿದೆ. ಮತ್ತೊಂದೆಡೆ ಇದೀಗ ಜಣಗಣತಿ ಮಾಡುತ್ತಿದ್ದು, ಇದರಿಂದ ಪಡಿತರ ಚೀಟಿ ರದ್ದಾಗುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಹಲವು ಜನರಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಲಾಗುತ್ತಿದೆ. ಕೆಲವು ಸಾರ್ವಜನಿಕರು ಗಣತಿದಾರರು ತಮ್ಮ ಪಡಿತರ ಚೀಟಿಯ ರದ್ದತಿಗೆ ಬಂದಿದ್ದಾರೆ ಎಂಬ ತಪ್ಪು ಕಲ್ಪನೆಯಿಂದ ಸರಿಯಾದ ಮಾಹಿತಿ ನೀಡಲು ಸಹಕರಿಸದೆ ಸಮೀಕ್ಷೆಗೆ ಅಡ್ಡಿ ಆಗುತ್ತಿರುವುದು ಕಂಡುಬರುತ್ತಿದೆ.
ಈ ಸಮೀಕ್ಷೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಆಗಿದ್ದು, ಹಿಂದುಳಿದ ವರ್ಗಗಳ ಹಾಗೂ ಇತರೆ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶವನ್ನು ಸಂಗ್ರಹಿಸಲು ಮಾತ್ರ ನಡೆಸಲಾಗುತ್ತಿದೆ. ಯಾವುದೇ ಪಡಿತರ ಚೀಟಿ ರದ್ದತಿ ಕಾರ್ಯವನ್ನು ಸಮೀಕ್ಷೆಯಲ್ಲಿ ಮಾಡಲಾಗುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಯೋಜನೆಗಳನ್ನು ರೂಪಿಸಲು ಈ ದತ್ತಾಂಶ ಸಹಕಾರಿ ಆಗಲಿದೆ. ಆದ್ದರಿಂದ ಸಾರ್ವಜನಿಕರು ಈ ಸಮೀಕ್ಷೆ ಬಗ್ಗೆ ಯಾವುದೇ ತಪ್ಪು ಕಲ್ಪನೆ ಹೊಂದದೆ ಮತ್ತು ವದಂತಿಗಳಿಗೆ ಕಿವಿಕೊಡದೇ ಸ್ವಯಂ ಆಗಿ ಭಾಗವಹಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ. ಆದರೆ, ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು, ಬಡವರಿಗೆ ಸಿಗಬೇಕಾದ ಅನ್ನವನ್ನು ಕಿತ್ತುಕೊಳ್ಳುತ್ತಿದ್ದರು. ಆದರೆ, ಇದೀಗ ಇಂತಹವರ ವಿರುದ್ಧ ಸರ್ಕಾರ ಇದೀಗ ಸಮರ ಸಾರುತ್ತಿದೆ. ಈ ಮೂಲಕ ಅನರ್ಹರ ಬಳಿಯ ಬಿಪಿಎಲ್ ಕಾರ್ಡ್ ರದ್ದುಪಡಿಸಿ ಎಪಿಎಲ್‌ಗೆ ವರ್ಗಾವಣೆ ಮಾಡಲಾಗುತ್ತಿದೆ. ಹೀಗೆ ಬಡವರಿಗೆ ಸೇರಬೇಕಾದ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಈ ಹಿಂದೆಯೇ ಅನರ್ಹರಿಗೆ ಶಾಕ್ ಕೊಡಲು ಸರ್ಕಾರ ಮುಂದಾಗಿದ್ದು, ಹಲವರ ವಿರೋಧದಿಂದ ಹಿಂದೆ ಸರಿದಿತ್ತು. ಇದೀಗ ಪರಿಶೀಲನೆ ಬಳಿಕ ರದ್ದು ಮಾಡಲು ಮುಂದಾಗಿದೆ.
ತುಂಬಾ ಜನ ಅರ್ಹರಿದ್ದರೂ ಸಹ ಅವರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿಲ್ಲ. ಆದ್ದರಿಂದ ಅರ್ನಹರ ಬಳಿ ಇರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ. ಒಂದು ವೇಳೆ ಅರ್ಹರ ಬಳಿಯ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದರೆ, ಸೂಕ್ತ ದಾಖಲೆಗಳೊಂದಿಗೆ ಆಹಾರ ಇಲಾಖೆ ಕಚೇರಿಗೆ ಮಾಹಿತಿ ಸಲ್ಲಿಸಬಹುದು. ಆಗ ಪರಿಶೀಲನೆ ನಡೆಸಿ ರದ್ದಾಗಿದ್ದ ಬಿಪಿಎಲ್ ಕಾರ್ಡ್ ಅನ್ನು ಮತ್ತೆ ವಿತರಣೆ ಮಾಡುವ ಕುರಿತು ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ.












Click it and Unblock the Notifications