ಮೈಕ್ರೋಫೈನಾನ್ಸ್‌ಗಳಿಗೆ ರೈತ ಸಂಘದಿಂದ 'ಎಚ್ಚರಿಕೆ'ಯ ಸಂದೇಶ ರವಾನೆ!
ಬೆಂಗಳೂರು, ಫೆಬ್ರವರಿ 14: ಸರ್ಕಾರವು ಮೈಕ್ರೋಫೈನಾನ್ಸ್ ನವರ ಉಪಟಳಕ್ಕೆ ಅಂಕುಶ ಹಾಕಲು ಸುಗ್ರಿವಾಜ್ಞೆ ಹೊರಡಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಜನಜಾಗೃತಿಗೊಳ್ಳುತ್ತಿದ್ದಾರೆ. ಫೈನಾನ್ಸ್ ಕಂಪನಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದು, ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿರುವುದು ಕಂಡು ಬರುತ್ತಿದೆ. ಜತೆಗೆ ಸಾಲಗಾರರ ಬೆನ್ನಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ನಿಂತಿದ್ದು ಕಿರುಕುಳ ನೀಡದಂತೆ ಸಂಸ್ಥೆಗಳಿಗೆ ತೆರಳಿ ಸೂಚನೆ ನೀಡಲಾಗುತ್ತಿದೆ. ಆ ಮೂಲಕ ಸಾಲಗಾರರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಭರದಿಂದ ಸಾಗುತ್ತಿದೆ.
ಇದುವರೆಗೆ ಮೈಕ್ರೋಫೈನಾನ್ಸ್ ಸಂಸ್ಥೆಗಳು ಏಜೆಂಟರ ಮೂಲಕ ಬಡವರಿಗೆ ಸಾಲ ನೀಡಿ ಬಳಿಕ ಆರ್‌ಬಿಐ ನಿಯಮಾವಳಿಯನ್ನು ಮೀರಿ ಅತ್ಯಧಿಕ ಬಡ್ಡಿಯನ್ನು ವಸೂಲಿ ಮಾಡುತ್ತಾ ಸಾಲಗಾರರನ್ನು ಸಾಲಗಾರರಾಗಿಯೇ ಉಳಿಸುತ್ತಿದ್ದರು. ಜತೆಗೆ ಮಾನಸಿಕ ಹಿಂಸೆ ನೀಡಿ ಅವರನ್ನು ಬೆದರಿಸಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಯಾರು ಕೂಡ ಧ್ವನಿ ಎತ್ತದ ಕಾರಣದಿಂದಾಗಿ ಫೈನಾನ್ಸ್ ಸಂಸ್ಥೆಗಳು ಆಡಿದ್ದೇ ಆಟ ಎಂಬಂತಾಗಿತ್ತು. ಆದರೀಗ ಜನರಲ್ಲಿ ಜಾಗೃತಿ ಮೂಡಿದ್ದು ಮೊದಲಿನಂತೆ ಬಲತ್ಕಾರದ ವಸೂಲಿಗೆ ಬ್ರೇಕ್ ಬಿದ್ದಂತಾಗಿದ್ದು, ಇದರಿಂದ ಸಾಲಗಾರರು ಉಸಿರಾಡಲು ಸಾಧ್ಯವಾದಂತಾಗಿದೆ.

ಈಗಾಗಲೇ ರಾಜ್ಯದ ಹಲವೆಡೆ ಸಾಲಗಾರರಿಗೆ ಧೈರ್ಯ ತುಂಬುವ ಸಲುವಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಲ್ಲಲ್ಲಿ ಹೋರಾಟವನ್ನು ಆರಂಭಿಸಿದೆ. ಮೈಕ್ರೋಫೈನಾನ್ಸ್ ಕಪಿಮುಷ್ಠಿಗೆ ಸಿಲುಕಿದವರಲ್ಲಿ ಗ್ರಾಮೀಣ ಪ್ರದೇಶದ ರೈತರಿದ್ದಾರೆ. ಅವರು ಹಣಕಟ್ಟಲಾಗದ ಸ್ಥಿತಿಯಲ್ಲಿದ್ದು ಸಾಲದ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಹೀಗಾಗಿ ಅವರ ಬೆನ್ನಿಗೆ ನಿಂತು ಆರ್ ಬಿಐ ನಿಯಮಾವಳಿಯಂತೆ ಸಾಲವನ್ನು ತೀರಿಸುವ ಕೆಲಸ ಮಾಡಬೇಕಾಗಿದೆ. ಅದಕ್ಕಿಂತ ಮೊದಲು ಜನರ ಬಳಿ ಬಲವಂತದ ವಸೂಲಿ ಮಾಡದಂತೆ ಸೂಚನೆ ನೀಡುವುದು ಅಗತ್ಯವಾಗಿದೆ.
ರೈತಸಂಘದಿಂದ 'ಎಚ್ಚರಿಕೆ ದಿನ' ಆಚರಣೆ
ಇನ್ನು ಚಾಮರಾಜನಗರ, ಮೈಸೂರು ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿರುವ ಕರ್ನಾಟಕ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಯಕರು ಫೈನಾನ್ಸ್ ಸಂಸ್ಥೆಗಳು ಆರ್ ಬಿಐ ನಿಯಮಾವಳಿಯ ಪ್ರಕಾರ ಬಡ್ಡಿ ವಿಧಿಸುತ್ತಿಲ್ಲ ಎಂದು ಆರೋಪಿಸಿವೆ. ಅಲ್ಲದೆ ಚಾಮರಾಜನಗರದ ಕೆಲವು ಫೈನಾನ್ಸ್ ಕಂಪೆನಿಗಳಿಗೆ ಮುತ್ತಿಗೆ ಹಾಕಿ 'ಎಚ್ಚರಿಕೆ'ಯ ದಿನ ಆಚರಿಸಿದ್ದಾರೆ. ಆ ಮೂಲಕ ತಮ್ಮ ಪ್ರತಿಭಟನೆಯನ್ನು ಎಲ್ಲ ಸಂಸ್ಥೆಗಳಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ.

ಮೈಸೂರಿನಲ್ಲಿಯೂ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯ ಭಾಗವಾಗಿ ನಗರದಲ್ಲಿರುವ ಮೈಕ್ರೋ ಫೈನಾನ್ಸ್‌ಗಳಿಗೆ ತೆರಳಿ ಗೋಡೆಗಳಿಗೆ ನೋಟಿಸ್ ಅಂಟಿಸಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಹಿಂದ್ರಾ ಫೈನಾನ್ಸ್, ಇಕ್ವಿಟಾಸ್ ಬ್ಯಾಂಕ್, ಐಐಎಫ್‌ಎಲ್, ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ತೆರಳಿ ಕಚೇರಿಯ ವ್ಯವಸ್ಥಾಪಕರನ್ನು ಕಚೇರಿಯಿಂದ ಹೊರಗೆ ಕರೆದು ಸಂಘಟನೆ ಬರೆದಿರುವ ಒಕ್ಕಣೆ, ರೈತರ ನೋಟಿಸ್ ಅನ್ನು ಓದಿ ತಿಳಿಸಿದ್ದಲ್ಲದೆ ಅದನ್ನು ಫೈನಾನ್ಸ್ ಕಂಪನಿಯ ಬಾಗಿಲು, ಗೋಡೆಗಳಿಗೆ ಅಂಟಿಸಿದ್ದಾರೆ.
'ಸಾಲಸಮಸ್ಯೆ'ಗೆ ತಾರ್ಕಿಕ ಅಂತ್ಯ ಯಾವಾಗ?
ಎರಡು ದಿನದ ಹಿಂದೆ ಐಐಎಫ್‌ಎಲ್ ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದು ಮನೆಯನ್ನು ಹರಾಜು ಮಾಡುವುದಾಗಿ ಗೋಡೆ ಬರಹ ಬರೆದಿದ್ದರಿಂದ ಭಯಭೀತರಾಗಿ ಊರನ್ನೇ ತೊರೆದಿದ್ದ ಕುಟುಂಬದ ಸದಸ್ಯರು ನೋಟಿಸ್ ಅಂಟಿಸಿದ್ದಾರೆ. ಸಾಲ ಪಡೆದ ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಸ್ಥಳೀಯ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ತಿಳಿಗೊಳಿಸಬೇಕಿದೆ. ಇಲ್ಲದೆ ಹೋದರೆ ಫೈನಾನ್ಸ್ ಕಂಪನಿ ಮತ್ತು ಜನರ ನಡುವೆ ಸಂಘರ್ಷಗಳು ಏರ್ಪಡುವ ಸಾಧ್ಯತೆ ಇಲ್ಲದಿಲ್ಲ.
ಹಾಗೆನೋಡಿದರೆ ಮೈಕ್ರೋಫೈನಾನ್ಸ್ ಕಂಪನಿಗಳು ಹುಟ್ಟಿಕೊಂಡ ಉದ್ದೇಶವೇ ಬೇರೆ ಆದರೀಗ ಅವು ನಡೆದುಕೊಳ್ಳುವ ರೀತಿಯೇ ವಿಚಿತ್ರವಾಗಿದೆ. ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶವನ್ನು ಮೈಕ್ರೋಫೈನಾನ್ಸ್ ಸಂಸ್ಥೆಗಳು ಹೊಂದಿದ್ದವು. ಬದಲಾದ ಕಾಲಘಟ್ಟದಲ್ಲಿ ಸಂಪೂರ್ಣ ವಾಣಿಜ್ಯೀಕರಣಗೊಳಿಸಿದ್ದು, ಲಾಭ ಮಾಡುವ ಉದ್ದೇಶದಿಂದ ಆರ್ ಬಿಐ ನಿಯಮಾವಳಿಯನ್ನು ಉಲ್ಲಂಘಿಸಿ ದುಪ್ಪಟ್ಟು ಬಡ್ಡಿಯನ್ನು ವಸೂಲಿ ಮಾಡಿ ದಿವಿನಾಗುತ್ತಿವೆ. ಆದರೆ ಸಾಲಪಡೆದವರು ಬಡ್ಡಿಕಟ್ಟುವುದರಲ್ಲೇ ಆಯುಷ್ಯ ಕಳೆದು ಹೋಗುತ್ತಿದೆ. ಅದು ಏನೇ ಇರಲಿ ಮೈಕ್ರೋಫೈನಾನ್ಸ್ ನಿಂದ ಸೃಷ್ಟಿಯಾಗಿರುವ 'ಸಾಲಸಮಸ್ಯೆ'ಗೆ ತಾರ್ಕಿಕ ಅಂತ್ಯ ಕಾಣಲೇ ಬೇಕಾಗಿದೆ.












Click it and Unblock the Notifications