Karnataka Elections: ಚನ್ನಪಟ್ಟಣದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ ಎಚ್‌ಡಿಕೆ? ಇಲ್ಲಿದೆ ಗ್ರೌಂಡ್ ರಿಪೋರ್ಟ್
ಚನ್ನಪಟ್ಟಣ, ಮಾರ್ಚ್ 31: ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ದಿನಾಂಕ ಬುಧವಾರ ಪ್ರಕಟಗೊಂಡಿದ್ದು, ಮೇ 10 ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು, ರಾಜ್ಯದ ಉಳಿದ ಭಾಗಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ.
ಕಳೆದ ಬಾರಿಯಂತೆ ಈ ಬಾರಿಯೂ ಕೆಲ ಕ್ಷೇತ್ರಗಳಲ್ಲಿ ಹೈವೊಲ್ಟೇಜ್ ಕದನ ಏರ್ಪಡುವುದು ಪಕ್ಕಾ ಆಗಿದೆ. ಈಗಾಗಲೇ ಮೈಸೂರಿನ ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆಂದು ಎಂದು ಘೋಷಿಸಲಾಗಿದೆ. ಅವರ ವಿರುದ್ಧ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ. ಒಂದು ವೇಳೆ, ವಿಜಯೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿದರೆ, ವರುಣಾ ಕ್ಷೇತ್ರವು ಹೈವೊಲ್ಟೇಜ್ ಕಣವಾಗಿ ಮಾರ್ಪಡಲಿದೆ.

ಇದೇ ರೀತಿಯಲ್ಲಿ, ರಾಮನಗರದ ಚನ್ನಪಟ್ಟಣವು ರಾಜ್ಯ ಹೈವೊಲ್ಟೇಜ್ ಕ್ಷೇತ್ರವೆಂದೇ ಗುರುತಿಸಿಕೊಂಡಿದೆ. ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ರಾಮನಗರ ಹಾಗೂ ಚನ್ನಪಟ್ಟಣದಿಂದ ಕಣಕ್ಕಿಳಿದಿದ್ದರು. ಈ ಬಾರಿ ಅವರು ಚನ್ನಪಟ್ಟಣವೊಂದರಲ್ಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮನಗರವನ್ನು ಬಿಟ್ಟುಕೊಟ್ಟಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅಭೂತ ಪೂರ್ವ ಗೆಲುವು ಸಾಧಿಸಿದ್ದರು. ಐದು ಬಾರಿ ಶಾಸಕರಾಗಿದ್ದ ಸಿ ಪಿ ಯೋಗೇಶ್ವರ್ ಅವರನ್ನು ಸೋಲಿಸಿದ್ದರು. ಆದರೆ, ಈ ಬಾರಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಹಲವು ಸಂಕಷ್ಟಗಳು ಎದುರಾಗಿವೆ ಎಂಬ ಮಾತುಗಳು ಕೇಳಿಬಂದಿದೆ.
ಕುಮಾರಸ್ವಾಮಿ ಅವರ ಕುಟುಂಬ ರಾಜಕಾರಣದಿಂದ ಜನರು ಬೇಸತ್ತಿದ್ದಾರೆ ಎನ್ನಲಾಗುತ್ತಿದೆ. ರಾಮನಗರದಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ಗೆ ಟಿಕೆಟ್ ನೀಡಲಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ರಾಜ್ಯಸಭೆ ಸದಸ್ಯರಾಗಿದ್ದಾರೆ. ಎಚ್‌ಡಿಕೆ ಸಹೋದರ ಎಚ್ ಡಿ ರೇವಣ್ಣ ಅವರು ಶಾಸಕರಾಗಿದ್ದಾರೆ.

ರೇವಣ್ಣ ಅವರ ಕಿರಿಯ ಪುತ್ರ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿದ್ದಾರೆ. ಇನ್ನೊಬ್ಬ ಪುತ್ರ ಸೂರಜ್ ರೇವಣ್ಣ ಎಂಎಲ್‌ಸಿ ಆಗಿದ್ದಾರೆ. ಈಗ ರೇವಣ್ಣ ಅವರ ಪತ್ನಿ ಭವಾನಿ ಅವರಿಗೂ ಹಾಸನ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಬೆಳೆವಣಿಗೆಗಳು ಜನರಲ್ಲಿ ಅಸಮಾಧಾನ ತಂದಿವೆ ಎನ್ನಲಾಗುತ್ತಿದೆ.
ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿವೆ. ಈಗಾಗಲೇ ಐದು ಬಾರಿ ಶಾಸಕರಾಗಿರುವ ಬಿಜೆಪಿ ಎಂಎಲ್‌ಸಿ ಸಿ ಪಿ ಯೋಗೇಶ್ವರ್ ಅವರು ಕುಮಾರಸ್ವಾಮಿಗೆ ಪ್ರಬಲ ಪೈಪೋಟಿ ನೀಡುವುದಂತೂ ಪಕ್ಕಾ ಆಗಿದೆ.
ಯೋಗೇಶ್ವರ್ ಅವರು ಚನ್ನಪಟ್ಟಣದ ಸ್ಥಳೀಯರು. ಮೇಲಾಗಿ, ಒಕ್ಕಲಿಗ ಸಮುದಾಯಕ್ಕೇ ಸೇರಿದವರು. ಚನ್ನಪಟ್ಟಣ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವುದು ಸಿ ಪಿ ಯೋಗೇಶ್ವರ್‌ಗೆ ಸಹಾಯ ಮಾಡಬಹುದು ಎನ್ನಲಾಗಿದೆ. ಆದರೆ, ಯೋಗೇಶ್ವರ್ ಅವರು ಬಿಜೆಪಿಯಿಂದಲೇ ಕಣಕ್ಕಿಳಿಯಲಿದ್ದಾರೆಯೇ ಅಥವಾ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಸ್ಪರ್ಧಿಸಲಿದ್ದಾರೆಯೇ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಕಾರಣ, ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಮೊದಲ ಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ಕಾರಣದಿಂದ ಸಿ ಪಿ ಯೋಗೇಶ್ವರ್ ಅವರ ನಡೆಯ ಬಗ್ಗೆ ಶಂಕೆಗಳು ದಟ್ಟವಾಗಿವೆ.












Click it and Unblock the Notifications