ಇಂದಿಗೂ ನೆನಪಾಗಿ ಕಾಡುವ ದೇವೇಗೌಡರು ಹೇಳಿದ ಆ ಸ್ವಾರಸ್ಯಕರ ಕಥೆ

ಚುನಾವಣೆ ಬಂತಂದ್ರೆ ಸಾಕು, ಮಾತಿನ ಮೆರವಣಿಗೆಯದ್ದೇ ಕಾರುಬಾರು. ಅನುಭವಿ ರಾಜಕಾರಣಿಗಳ ಮಾತುಗಳು ಕೇಳುವುದಕ್ಕೇ ಚೆಂದ. ಪರಸ್ಪರ ಕೆಸರೆರಚಾಟದ ರಾಜಕೀಯದ ನಡುವಲ್ಲೂ ಆಳವಾದ ಅಧ್ಯಯನದ ಮೂಲಕ ಪ್ರಖರ ವಾಗ್ಮಿಗಳೂ ಆಗಿರುವ ಹಲವು ರಾಜಕಾರಣಿಗಳಿದ್ದಾರೆ.

ಆ ಪಕ್ಷದ ಬೆಂಬಲಿಗರಲ್ಲದವರೂ ಕೆಲವು ರಾಜಕಾರಣಿಗಳ ಮಾತು ಕೇಳುವುದಕ್ಕಾಗಿಯೇ ಸಮಾರಂಭಗಳಿಗೆ ಹೋಗುವವರಿದ್ದಾರೆ. ಪರಸ್ಪರ ತೇಜೋವಧೆಯ ಬಾಲಿಶ ಮಾತುಗಳ ಜೊತೆಯಲ್ಲೇ ಎದುರಾಳಿಗಳನ್ನು ಪದಗಳ ಮೊನಚಿನಲ್ಲೇ ಕುಟುಕುವ ವಿಡಂಬನಾತ್ಮಕ ಮಾತಿನ ಕಲೆಯೂ ಹಲವು ರಾಜಕಾರಣಿಗಳಿಗೆ ಸಿದ್ಧಿಸಿದೆ. ಅಂಥ ರಾಜಕಾರಣಿಗಳಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರೂ ಒಬ್ಬರು.

ಸುಮಾರು ಎರಡು ದಶಕಗಳ ಹಿಂದೆ ಅಂದರೆ 1994ರ ಕಾಲ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ರಂಗೇರಿತ್ತು. ಆಗ ದೇವೇಗೌಡರು ಜನತಾದಳದಲ್ಲಿದ್ದರು. ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವಿನ ಕಿತ್ತಾಟಕ್ಕೆ ತೆರೆ ಎಳೆದುಕೊಂಡು ಒಟ್ಟಾಗಿ ಚುನಾವಣೆಗೆ ಹೋಗುವ ವಾಗ್ದಾನ ಮಾಡಿದ್ದರು. ಅವತ್ತು ಅವರಿಗೆ ಬಿಜೆಪಿ ಪ್ರತಿಸ್ಪರ್ಧಿಯೇ ಆಗಿರಲಿಲ್ಲ. ಅವರಿಗೆ ಎದುರಾಳಿ ಎಂದರೆ ಕಾಂಗ್ರೆಸ್ ಮಾತ್ರ. ಇಂತಹ ಕಾಂಗ್ರೆಸ್ ಗೆ ದೇವೇಗೌಡರು ತಮ್ಮ ಚುನಾವಣಾ ಪ್ರಚಾರದ ವೇಳೆ ಕಥೆಯ ಮೂಲಕ ಎಂತಹ ಟಾಂಗ್ ನೀಡಿದ್ದರೆಂದರೆ ಅದು ಸ್ವಾರಸ್ಯಕರವೂ ಆಗಿತ್ತು. ಅಷ್ಟೇ ಮಾರ್ಮಿಕವೂ ಆಗಿತ್ತು!

ಭಾಷಣ ಕೇಳಲೆಂದೇ ಆಗಮಿಸಿದ್ದ ಜನ

ಭಾಷಣ ಕೇಳಲೆಂದೇ ಆಗಮಿಸಿದ್ದ ಜನ

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜನತಾದಳದ ಸಮಾವೇಶ ಏರ್ಪಡಿಸಲಾಗಿತ್ತು. ಅವತ್ತು ಸಮಾವೇಶದ ಐಕಾನ್ ಹೆಚ್.ಡಿ.ದೇವೇಗೌಡರಾಗಿದ್ದರು. ಅವರ ಭಾಷಣ ಕೇಳಲೆಂದೇ ಜನ ಜಮಾಯಿಸಿದ್ದರು. ದೇವೇಗೌಡರು ಮಾತಿಗಿಳಿದಿದ್ದರು. ಮಾತಿನ ನಡುವಲ್ಲಿ ಕೆಲವು ಕಥೆಗಳನ್ನು ಎಳೆದು ತರುವುದು, ಸಂದರ್ಭಕ್ಕೆ ಸೂಕ್ತವಾಗುವ ಘಟನೆಗಳನ್ನು ಸ್ಮರಿಸುವುದು ಆ ಭಾಷಣಕ್ಕೆ ಒಂದಷ್ಟು ತೂಕ ನೀಡುತ್ತದೆ. ಅಂಥ ಕಲೆ ದೇವೇಗೌಡರಿಗೆ ಎಂದೋ ಸಿದ್ಧಿಸಿತ್ತು. ಅಂದೂ ಸಹ ತಮ್ಮ ಮಾತಿನ ಓಘದ ನಡುವಲ್ಲಿ ಗೌಡರೊಂದು ಕಥೆ ಹೇಳತೊಡಗಿದ್ದರು. ..

ಒಂದು ಸಂತೆಯ ಕತೆ!

ಒಂದು ಸಂತೆಯ ಕತೆ!

ವಾರಕ್ಕೊಮ್ಮೆ ನಡೆಯುವ ಸಂತೆಗೆ ಮೂವರು ಮಹಿಳೆಯರು ಜತೆಯಲ್ಲೇ ಹೋಗುತ್ತಿದ್ದರಂತೆ. ಸಂತೆ ಹೋದಾಗಲೆಲ್ಲ. ಒಬ್ಬಳು ಮಹಿಳೆ ಗಂಡನಿಗೆ ಛತ್ರಿಯನ್ನು ಕೊಂಡುಕೊಂಡರೆ, ಮತ್ತೊಬ್ಬಳು ಚಪ್ಪಲಿಯನ್ನು ಕೊಂಡುಕೊಳ್ಳುತ್ತಿದ್ದಳಂತೆ. ಒಂದೆರಡು ಬಾರಿ ಇದೇ ರೀತಿ ನಡೆಯಿತು. ಅವರ ಜತೆಗಿದ್ದ ಮೂರನೇ ಮಹಿಳೆಗೆ ಈ ಇಬ್ಬರು ಪ್ರತಿ ಬಾರಿಯೂ ಖರೀದಿಸಿದ್ದನ್ನೆ ಖರೀದಿಸುತ್ತಾರಲ್ಲ ಏಕಿರಬಹುದು? ಎಂಬ ಕುತೂಹಲ ಆರಂಭವಾಯಿತು. ಹೀಗಾಗಿ ಆಕೆ ಮನಸ್ಸು ತಡೆಯಲಾರದೆ ಕೇಳಿಯೇ ಬಿಟ್ಟಳು.

ನಾನು ನೋಡುತ್ತಲೇ ಇದ್ದೇನೆ. ನೀವು ಪ್ರತಿಸಲ ಬಂದಾಗಲೂ ಛತ್ರಿ ಮತ್ತು ಚಪ್ಪಲಿಯನ್ನು ಖರೀದಿಸುತ್ತಿದ್ದೀರಲ್ಲ ಏಕೆ ಎಂದು ಪ್ರಶ್ನಿಸಿದಳು. ಆಕೆಯ ಪ್ರಶ್ನೆಯಲ್ಲಿ ಅಚ್ಚರಿ, ಕುತೂಹಲ ಎಲ್ಲವೂ ಇತ್ತು. ಆದರೆ ಆ ಮಹಿಳೆಯರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ಅವರಿಬ್ಬರ ಪೈಕಿ ಒಬ್ಬಳು ಹೇಳಿದಳು. ಅಯ್ಯೋ ನನ್ನ ಗಂಡನಿಗೆ ಮರುವು ಜಾಸ್ತಿ ಹೋದಕಡೆಗಳಲ್ಲೆಲ್ಲ ಚಪ್ಪಲಿ ಮರೆತು ಬರುತ್ತಾರೆ. ಮತ್ತೊಬ್ಬಳು ಹೇಳಿದಳು ನನ್ನ ಗಂಡಂದೂ ಅದೇ ಕಥೆ ರ್ರೀ ಅವರು ಕೂಡ ಛತ್ರಿ ಮರೆತು ಬರುತ್ತಾರೆ. ಹೀಗಾಗಿ ಪ್ರತಿ ಬಾರಿ ಸಂತೆಯಲ್ಲಿ ಕೊಂಡುಕೊಳ್ಳೋದು ನಮ್ಮ ಕರ್ಮ ಎಂದರು ಇಬ್ಬರು ಮಹಿಳೆಯರು.

ಮಾನ ಮರ್ಯಾದೆ ಸಂತೇಲಿ ಸಿಗುತ್ತಾ?

ಮಾನ ಮರ್ಯಾದೆ ಸಂತೇಲಿ ಸಿಗುತ್ತಾ?

ಮಾತು ಮುಗಿಸಿದ ಇಬ್ಬರು ಮಹಿಳೆಯರಿಗೆ ಕುತೂಹಲವೊಂದು ಹಾಗೆಯೇ ಉಳಿದಿತ್ತು. ಅದೇನೆಂದರೆ ನಮ್ಮ ಗಂಡಂದಿರು ಹೋದಲ್ಲೆಲ್ಲ ಛತ್ರಿ, ಚಪ್ಪಲಿ ಕಳೆದುಕೊಂಡು ಬರುತ್ತಾರೆ. ಆಕೆಯ ಗಂಡ ಏನನ್ನೂ ಕಳೆದುಕೊಂಡು ಬರಲ್ವಾ? ಎಂದು! ಸರಿ, ಇದನ್ನು ಆಕೆಯ ಬಳಿಯೇ ಕೇಳಿ ಬಿಡೋಣ ಎಂಬ ನಿರ್ಧಾರಕ್ಕೆ ಬಂದ ಆ ಮಹಿಳೆಯರಿಬ್ಬಳು ಆಕೆಯನ್ನು ಕೇಳಿಯೇ ಬಿಟ್ಟರು. ಆ ಮಹಿಳೆ ನೀಡಿದ ಉತ್ತರ ಹೀಗಿತ್ತು.. ಅಯ್ಯೋ ನನ್ನ ಗಂಡ ಹೋದಲೆಲ್ಲ ಮಾನಮರ್ಯಾದೆ ಕಳೆದುಕೊಂಡು ಬರ್ತಾನೆ. ಅದನ್ನೇನು ಸಂತೇಲಿ ಖರೀದಿ ಮಾಡೋಕೆ ಆಗ್ತಾದಾ? ಅವಳ ಉತ್ತರಕ್ಕೆ ಆ ಇಬ್ಬರು ಮಹಿಳೆಯರು ಮರು ಮಾತನಾಡದೆ ತೆಪ್ಪಗಾಗಿದ್ದರು!

ಶಿಳ್ಳೆಗಿಟ್ಟಿಸಿಕೊಂಡ ಗೌಡರು

ಶಿಳ್ಳೆಗಿಟ್ಟಿಸಿಕೊಂಡ ಗೌಡರು

ಅದಾದ ಬಳಿಕ ಚುನಾವಣೆಯಲ್ಲಿ ಗೆಲುವು ಪಡೆದು ಮುಖ್ಯಮಂತ್ರಿಯಾದರು. ಆ ನಂತರ ಬದಲಾದ ಕಾಲಘಟ್ಟದಲ್ಲಿ ತಾವು ಪ್ರಬಲವಾಗಿ ಟೀಕಿಸಿದ್ದ ಕಾಂಗ್ರೆಸ್ ಬೆಂಬಲದ ಮೇರೆಗೆ ಪ್ರಧಾನಮಂತ್ರಿಯೂ ಆದರು. ಅಷ್ಟೇ ಅಲ್ಲ, ಪ್ರಧಾನಿ ಮಾಡಿದ ಕಾಂಗ್ರೆಸ್ ಮತ್ತೆ ಬೆಂಬಲ ಹಿಂಪಡೆದು ಪಟ್ಟದಿಂದ ಕೆಳಗಿಳಿಸಿದ್ದು ಇತಿಹಾಸ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+