ವಿಜಯೇಂದ್ರರನ್ನು ವರುಣಾ ಕ್ಷೇತ್ರಕ್ಕೆ ತಳ್ಳಿ ಹರಕೆಯ ಕುರಿಯಾಗಿಸಲು ಬಿಜೆಪಿ ಯತ್ನ ನಡೆಸಿದೆ: ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಮಾರ್ಚ್ 31: ವಿಜಯೇಂದ್ರರನ್ನು ವರುಣಾ ಕ್ಷೇತ್ರಕ್ಕೆ ತಳ್ಳಿ ಹರಕೆಯ ಕುರಿಯಾಗಿಸಲು ಬಿಜೆಪಿ ಯತ್ನ ನಡೆಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಯಡಿಯೂರಪ್ಪ & ಸನ್ಸ್ ಕಂಪೆನಿಯನ್ನು ಮುಗಿಸಲು ಹೀಗೆಲ್ಲ ತಂತ್ರ ಹೂಡುತ್ತಿದೆ ಬಿಜೆಪಿ. ಅದರ ಮುಂದುವರೆದ ಭಾಗವಾಗಿ ವರುಣಾ ಕ್ಷೇತ್ರಕ್ಕೆ ಬಿವೈ ವಿಜಯೇಂದ್ರ ಅವರನ್ನು ತಳ್ಳಿ ಹರಕೆಯ ಕುರಿಯಾಗಿಸುವ ಪ್ರಯತ್ನ. ಸಂತೋಷ ಕೂಟದ ತಂತ್ರಗಾರಿಕೆಯನ್ನು ಬಿಎಸ್ ಯಡಿಯೂರಪ್ಪ ಅವರು ಅರ್ಥ ಮಾಡಿಕೊಂಡು ಎಚ್ಚೆತ್ತರೆ ಪುತ್ರರ ಭವಿಷ್ಯ ಉಳಿಯಬಹುದು' ಎಂದು ಹೇಳಿದೆ.

ಮುನಿರತ್ನ ವಿರುದ್ಧ ವಾಗ್ದಾಳಿ
'ಸಮಾಜದಲ್ಲಿ ಸಾಮರಸ್ಯ ಕದಡುವುದು ಬಿಜೆಪಿಯ ಹುಟ್ಟುಗುಣ. ಬಿಜೆಪಿ ಶಾಸಕ ಮುನಿರತ್ನ ಹೊಡಿರಿ, ಬಡಿರಿ ಎಂದು ನಿರ್ದೇಶನ ನೀಡುತ್ತಿರುವುದು #BJPRowdyMorcha ದವರಿಗಾ? ಅಥವಾ ಕನ್ನಡ ಭಾಷಿಕರಿಗೂ, ತಮಿಳು ಭಾಷಿಕರಿಗೂ ದ್ವೇಷ ಹಚ್ಚುವ ಕೆಲಸವೇ? ಹಿಂಸೆಗೆ ಪ್ರಚೋದಿಸುವ ಮುನಿರತ್ನ ವಿರುದ್ಧ ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದೂ ಕಾಂಗ್ರೆಸ್ ಟ್ವೀಟ್ ಮಾಡಿದೆ.
'ಧರ್ಮಗಳ ನಡುವೆ ಬೆಂಕಿ ಹಚ್ಚಿದ್ದಾಯ್ತು, ಜಾತಿಗಳ ನಡುವೆ ಬೆಂಕಿ ಹಚ್ಚಿದ್ದಾಯ್ತು, ಈಗ ಕನ್ನಡಿಗರು, ತಮಿಳರ ನಡುವೆ ಬೆಂಕಿ ಹಚ್ಚಲು ಮುಂದಾಗಿದೆ ಬಿಜೆಪಿ. ಸಹೋದರರಂತೆ ಸಾಮರಸ್ಯದಿಂದಿದ್ದ ಕನ್ನಡಿಗರು ಹಾಗೂ ತಮಿಳು ಭಾಷಿಕರ ನಡುವೆ ಹಿಂಸೆಗೆ ಪ್ರಚೋದಿಸಿದ ಮುನಿರತ್ನ ಬಿಜೆಪಿಯ ಹಿಂಸಾ ರಾಜಕೀಯವನ್ನು ತೆರೆದಿಟ್ಟಿದ್ದಾರೆ' ಎಂದು ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿ ಸರ್ಕಾರದ ಬಡವರ ವಿರೋಧಿ
ಕನ್ನಡಿಗರ ಹೆಮ್ಮೆಯ ವಿಶ್ವೇಶ್ವರಯ್ಯ ಕಾಲೇಜು ವಿಶ್ವವಿದ್ಯಾಲಯವನ್ನು ಖಾಸಗೀಕರಣ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಕ್ರಮ ಖಂಡನೀಯ. ಸರ್ ಎಂ ವಿಶ್ವೇಶ್ವರಯ್ಯನವರು ಕಟ್ಟಿದ ರಾಜ್ಯದ ಮೊದಲ ಎಂಜಿನಿಯರಿಂಗ್ ಕಾಲೇಜು ಇದಾಗಿದ್ದು ರಾಜ್ಯದ ಎಲ್ಲಾ ವರ್ಗದ ಮಕ್ಕಳಿಗೂ ಎಂಜಿನಿಯರಿಂಗ್ ಓದಲು ಇದು ಆಸರೆಯಾಗಿತ್ತು ಎಂದು ಕೆಪಿಸಿಸಿ ಹೇಳಿದೆ.
'ಈಗ ವಿಶ್ವೇಶ್ವರಯ್ಯ ಕಾಲೇಜು ವಿಶ್ವವಿದ್ಯಾಲಯವನ್ನು ಸ್ವಾಯತ್ತ ಸಂಸ್ಥೆಯಾಗಿ ಮಾಡುವ ಮೂಲಕ ರಾಜ್ಯದಲ್ಲಿ ಉಳಿದಿರುವ ಕೆಲವೇ ಸರ್ಕಾರಿ ಕಾಲೇಜುಗಳನ್ನೂ ಸಹ ಖಾಸಗೀಕರಣ ಮಾಡಿ ಬಡವರ ಮಕ್ಕಳಿಗೆ ಎಂಜಿನಿಯರಿಂಗ್ ಓದು ಲಭ್ಯವಿಲ್ಲದಂತೆ ಮಾಡಲು ಹೊರಟಿದ್ದಾರೆ ಬಸವರಾಜ ಬೊಮ್ಮಾಯಿ ಹಾಗೂ ಸಿಎನ್ ಅಶ್ವತ್ಥ ನಾರಾಯಣ. ಇದು ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಯಾಗಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಹೊರಹಾಕಿದ ಸತ್ಯ
'ನಾನೇ ಎಲ್ಲಾ, ನನ್ನ ಕೇಳೋರು ಯಾರೂ ಇಲ್ಲ ಎನ್ನುವ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಹೊರಹಾಕಿದ ಸತ್ಯ ಏನೆಂದರೆ ಬಿಜೆಪಿಗರಲ್ಲೇ ಮೋದಿಗೆ ಮೂರು ಕಾಸಿನ ಬೆಲೆ ಇಲ್ಲ ಎಂಬುದು. ಮೋದಿ ತೋರಿಸಿದರೆ ಬಿಜೆಪಿ ಶಾಸಕರೇ ಬೆಲೆ ಕೊಡುವುದಿಲ್ಲ, ಜನ ಮತ ಕೊಡುವರೇ ಬಿಜೆಪಿ? ಕರ್ನಾಟಕದಲ್ಲಿ ಮೋದಿಯದ್ದು ಹಳಸಲು ಮುಖವಾಗಿದೆ ಎಂಬ ಸತ್ಯ ಹೊರಬಿದ್ದಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಯುವತಿಯ ಅತ್ಯಾಚಾರ: ಬಿಜೆಪಿ ಟೀಕಿಸಿದ ಕಾಂಗ್ರೆಸ್
'ಬೆಂಗಳೂರಿನಲ್ಲಿ ಚಲಿಸುವ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಆಘಾತಕಾರಿ. ಭ್ರಷ್ಟ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಕನಿಷ್ಠ ಸುರಕ್ಷಿತ ವಾತಾವರಣ ಇಲ್ಲದಾಗಿದೆ. ಅತ್ಯಾಚಾರ ಸಂತ್ರಸ್ತೆಯನ್ನೇ ಅಪರಾಧಿಯಾಗಿಸುವ ಬಿಜೆಪಿ ಕ್ರಿಮಿನಲ್‌ಗಳಿಗೆ, ಅತ್ಯಾಚಾರಿಗಳಿಗೆ ಬೆಂಬಲ ನೀಡಿದ್ದೇ ಈ ಘಟನೆಗಳಿಗೆ ಕಾರಣ' ಎಂದು ಕೆಪಿಸಿಸಿ ಟ್ವೀಟಿಸಿದೆ.












Click it and Unblock the Notifications