ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್; ನಾನು ಮಾಡಿರುವ ಅನ್ಯಾಯವಾದರೂ ಏನು?: ಸಿದ್ದರಾಮಯ್ಯ ಪ್ರಶ್ನೆ
ಮೈಸೂರು,ಏಪ್ರಿಲ್13: ಎರಡು ಪಕ್ಷದವರು ಸೇರಿಕೊಂಡು ಸಿದ್ದರಾಮಯ್ಯನ್ನ ಮುಗಿಸಬೇಕು ಎಂದು ಹೊರಟಿದ್ದಾರೆ. ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್. ಹೀಗೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರಲ್ಲ ಈ ನಾಡಿಗೆ ನಾನು ಮಾಡಿರುವ ಅನ್ಯಾಯವಾದರೂ ಏನು? ನನ್ನ ಮೇಲಿನ ಭಯಕ್ಕೆ ನನ್ನನ್ನು ಮುಗಿಸಲು ಹೊರಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಜನರ ಆಶೀರ್ವಾದ ಇರುವವರೆಗೆ ಯಾರಿಂದಲೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ. ನಿಮಗೂ ಕೂಡ ಸ್ವಾಭಿಮಾನ ಇರಬೇಕು, ಯಾವುದೇ ಕಾರಣಕ್ಕೂ ನಾವು ಗುಂಪುಗಾರಿಕೆ ಮಾಡಲ್ಲ, ಪಕ್ಷ ದ್ರೋಹ ಮಾಡಲ್ಲ, ನಾವೆಲ್ಲರೂ ಸಿದ್ದರಾಮಯ್ಯನ ಕೈಯನ್ನು ಬಲಪಡಿಸುವ ಕೆಲಸ ಮಾಡುತ್ತೇವೆ ಎಂಬ ಸಂಕಲ್ಪವನ್ನು ಇಂದು ಮಾಡಬೇಕು.

ನಿಮಗೆ ನನ್ನ ಮೇಲೆ ಕಿಂಚಿತ್ತಾದರೂ ಅಭಿಮಾನ, ಪ್ರೀತಿ ಇದ್ದರೆ ಬಿಜೆಪಿ ಮತ್ತು ಜೆಡಿಎಸ್ ಅನ್ನು ಸೋಲಿಸುವ ಶಪಥ ಮಾಡಬೇಕು. ನಮ್ಮಲ್ಲಿ ಗುಂಪುಗಳಿರುವ ವಿಚಾರ ನನಗೂ ಗೊತ್ತಿದೆ, ಸಿದ್ದೇಗೌಡರು, ಮರೀಗೌಡರ ಮುಖ ನೋಡಬೇಡಿ, ನನ್ನ ಮುಖ ನೋಡಿ ನೀವೆಲ್ಲ ಜೊತೆಗೂಡಿ ಕೆಲಸ ಮಾಡಬೇಕು ಎಂದರು.
ಇಂದು ಕರ್ನಾಟಕದಲ್ಲಿನ ವಾತಾವರಣ ನೋಡಿದರೆ ಕಾಂಗ್ರೆಸ್ ಪಕ್ಷ 200% ಅಧಿಕಾರಕ್ಕೆ ಬಂದೇ ಬರುತ್ತದೆ. ಬಿಜೆಪಿಯವರು ರಾಜ್ಯವನ್ನು ಹಾಳು ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ 2018ರ ಮಾರ್ಚ್ ವರೆಗೆ ಕರ್ನಾಟಕದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಕಳೆದ ಐದೇ ವರ್ಷದಲ್ಲಿ ರಾಜ್ಯದ ಸಾಲ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇಲ್ಲಿ ಜಿಟಿಡಿಯೋ, ಬಿಜೆಪಿಯ ಇನ್ಯಾರೋ ಮುಖ್ಯವಲ್ಲ, ರಾಜ್ಯವನ್ನು ಉಳಿಸುವುದು ಮುಖ್ಯ. ಈ ಬಿಜೆಪಿಯವರ ದುರಾಡಳಿತದಿಂದಾಗಿ ಪ್ರತೀ ವರ್ಷ 56,000 ಕೋಟಿ ಹಣವನ್ನು ಸಾಲ ಮರುಪಾವತಿ ಮಾಡಬೇಕಾಗಿದೆ.

ಈ ಸಾಲ ಹೀಗೆ ಮುಂದುವರೆದರೆ ಕುಡಿಯಲು ನೀರು, ಅಕ್ಕಿ, ಸೇತುವೆ, ರಸ್ತೆ, ಮನೆಗಳನ್ನು ಜನರಿಗೆ ಕೊಡಲು ಆಗುತ್ತದಾ? ಬಿಜೆಪಿ ಮತ್ತು ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕಾ? ಇದನ್ನು ನಿಮ್ಮ ಆತ್ಮಸಾಕ್ಷಿಗೆ ಕೇಳಿನೋಡಿ. ಯಾರೋ ಬರ್ತಾರೆ, ಹೋಗ್ತಾರೆ ನಾವು ಕೂಲಿ ಮಾಡೋದು ತಪ್ಪುತ್ತಾ ಎಂದು ಅಂದುಕೊಂಡು ತಪ್ಪು ನಿರ್ಧಾರ ಮಾಡಬೇಡಿ, ರಾಜ್ಯ ಉಳಿದರೆ ಅಲ್ವಾ ನಾವು, ನೀವೆಲ್ಲ ಉಳಿಯೋದು. ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತೀ ವರ್ಷ 78,000 ದಿಂದ 80,000 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಹೀಗಿದ್ದಾಗ ಇವರು ರಸ್ತೆಗೆ, ನೀರಾವರಿಗೆ ಎಲ್ಲಿಂದ ದುಡ್ಡು ಕೊಡುತ್ತಾರೆ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಇದ್ದಾಗ ಬಡವರಿಗೆ 7 ಕೆ.ಜಿ ಅಕ್ಕಿ ಕೊಡುತ್ತಿದ್ದೆವು, ಇವರು ಬಂದು 5 ಕೆ.ಜಿ ಮಾಡಿದ್ದಾರೆ. ಜನರ ತೆರಿಗೆ ಹಣದಲ್ಲಿ ಜನರಿಗೆ ಅಕ್ಕಿ ಕೊಡಲು ಇವರಿಗೆ ಸಮಸ್ಯೆ ಏನು? ಈ ಸರ್ಕಾರ 40% ಕಮಿಷನ್ ಹಗರಣದಿಂದ ತುಂಬಿದೆ, ಇಲ್ಲಿ ಒಂದು ಲಕ್ಷ ರೂಪಾಯಿ ಕೆಲಸಕ್ಕೆ 40,000 ಲಂಚ ಕೊಡಬೇಕು. ಕಂಟ್ರಾಕ್ಟರ್ ಗೆ 25,000, ಜಿಎಸ್‌ಟಿಗೆ 18,000 ಕೊನೆಗೆ ಉಳಿಯೋದು 17,000 ಇದರಲ್ಲಿ ಏನು ಕೆಲಸ ಆಗುತ್ತೆ? ಕೆಲಸ ಮಾಡಿದ್ರೂ ಗುಣಮಟ್ಟ ಇರುತ್ತಾ? ಹೀಗೆ ಮಾಡಿ ರಾಜ್ಯವನ್ನೇ ತಿಂದುಬಿಟ್ಟಿದ್ದಾರೆ. ಈಗ ರಾಜ್ಯವನ್ನು ಉಳಿಸಬೇಕಾದುದ್ದು ನಮ್ಮ ಜವಾಬ್ದಾರಿ ಅಲ್ವಾ?
ಚಾಮುಂಡೇಶ್ವರಿ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ನಂತರ ನಾನು ವರುಣಾಕ್ಕೆ ಹೋದರೆ, ಕಾರಣ ನನ್ನ ಹುಟ್ಟೂರು ಸಿದ್ದರಾಮನಹುಂಡಿ ವರುಣಾ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಕಳೆದ ಬಾರಿ ನಾನು ಇಲ್ಲಿಂದಲೇ ನಿಂತು ನಿವೃತ್ತಿಯಾಗಬೇಕು ಎಂದು ತೀರ್ಮಾನ ಮಾಡಿದ್ದೆ, ಯಾವುದೋ ಕಾರಣಗಳಿಗಾಗಿ ಸೋತುಹೋದೆ. ಈ ಕ್ಷೇತ್ರದ ಅಭಿವೃದ್ಧಿ ಮಾಡಿದ್ದು ನಾನಾ ಅಥವಾ ಜಿಟಿಡಿಯಾ? ಹಾಗಾದರೆ ನಾನು ಹೇಳಿದವರಿಗೆ ನೀವು ಕೈಹಿಡಿಯಬೇಕು ಅಲ್ವಾ? ಎಂದು ಪ್ರಶ್ನಿಸಿದರು.












Click it and Unblock the Notifications