Rahul Gandhi ಇಂದ ಕಿವಿ ಮೇಲೆ ಲಾಲ್‌ಬಾಗ್ ಇಡುವ ಯತ್ನ: BJP ಸರಣಿ ಟ್ವೀಟ್
ರಾಹುಲ್ ಗಾಂಧಿ ಅವರೇ ಕನ್ನಡಿಗರು ಸ್ವಾಭಿಮಾನಿಗಳು ನಿಮ್ಮ ಪುಕ್ಸಟ್ಟೆ ಗ್ಯಾರಂಟಿಗಳಿಗೆ ತಲೆ ಬಾಗುವವರಲ್ಲ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಬೆಂಗಳೂರು, ಮಾರ್ಚ್ 20: ಸುಳ್ಳು, ವಚನದ್ರೋಹ, ಮೋಸ... ಕಾಂಗ್ರೆಸಿಗೆ ಇದ್ಯಾವುದೂ ಹೊಸತಲ್ಲ. 'ಗ್ಯಾರಂಟಿ' ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಇದೀಗ ತೆರೆ ಕಂಡಿರುವ ಕಾಂಗ್ರೆಸ್ ನಾಟಕ ಸುಳ್ಳಿನ ಸರಪಳಿ ಎಂಬುದು ಇತರೆ ರಾಜ್ಯಗಳಲ್ಲಿ ಬಯಲಾಗಿದೆ. ಸ್ವಾಭಿಮಾನಿ ಕನ್ನಡಿಗರು ಇಂತಹ ಮೋಸಕ್ಕೆ ಬಲಿಯಾಗುವವರಲ್ಲ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ರಾಹುಲ್ ಗಾಂಧಿ ಅವರು ನಿರುದ್ಯೋಗಿ ಯುವಕರಿಗೆ ನೀಡಿದ ಗ್ಯಾರಂಟಿಯ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, 'ರಾಹುಲ್ ಗಾಂಧಿ ಅವರೇ ಕನ್ನಡಿಗರು ಸ್ವಾಭಿಮಾನಿಗಳು ನಿಮ್ಮ ಪುಕ್ಸಟ್ಟೆ ಗ್ಯಾರಂಟಿಗಳಿಗೆ ತಲೆ ಬಾಗುವವರಲ್ಲ. ರಾಜ್ಯಕ್ಕೆ ಬಂದು ಜನರ ಕಿವಿ ಮೇಲೆ ಲಾಲ್‌ಬಾಗ್ ಇಡುವ ನಿಮ್ಮ ಪ್ರಯತ್ನಕ್ಕೆ ಜನತೆಯೇ ಉತ್ತರ ಕೊಡಲಿದ್ದಾರೆ ಕಾದು ನೋಡಿ' ಎಂದು ತಿಳಿಸಿದೆ.

'ಲೂಟಿಗಾಗಿ ರಾಜ್ಯವನ್ನು ಎಟಿಎಂ ಮಷಿನ್ ಮಾಡಿಕೊಳ್ಳಲು ಆಗಮಿಸಿರುವ ರಾಹುಲ್ ಗಾಂಧಿ ಅವರೇ, ಸುಳ್ಳು ಪುಕ್ಸಟ್ಟೆ ಗ್ಯಾರಂಟಿಗಳನ್ನು ಕೊಟ್ಟು ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದ ಜನರನ್ನು ವಂಚಿಸಿರುವುದು ಕರ್ನಾಟಕದ ಜನತೆಗೆ ತಿಳಿದಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ' ಎಂದು ಹೇಳಿದೆ.
'ವಿದೇಶಿ ನೆಲದಲ್ಲಿ ಕೂತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ರಾಹುಲ್ ಗಾಂಧಿ ಅವರನ್ನು ದೇಶದ್ರೋಹಿ ಎನ್ನದೆ ಮತ್ತೇನೆಂದು ಕರೆಯಬೇಕು. ಕುಂಬಳಕಾಯಿ ಕಳ್ಳ ಎಂದರೆ ರಾಹುಲ್ ಗಾಂಧಿ ಯವರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಯಾಕೆ?' ಎಂದು ಪ್ರಶ್ನಿಸಿದೆ.

'ಕೈ ಪಕ್ಷದ ರಾಜಕುಮಾರ ರಾಹುಲ್ ಗಾಂಧಿ ಅವರು ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ. ಆಡಿಸಿದಂತೆಯೇ ಆಡುವ, ನುಡಿಸಿದಂತೆ ನುಡಿಯುವ ಪಪ್ಪೆಟ್ ಎಂದರೂ ತಪ್ಪಾಗಲಾರದು' ಎಂದು ಟ್ವೀಟ್ ಮಾಡಿದೆ.
ಭಾರತವನ್ನು ಒಳಗಿನಿಂದಲೇ ಟೊಳ್ಳುಗೊಳಿಸಿ ದೇಶ ಒಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಈ ದುರುದ್ದೇಶಕ್ಕಾಗಿ ಸೊರೋಸ್‌ನಂತಹ ದುಶ್ಶಕ್ತಿಗಳೊಂದಿಗೆ ಸೇರಿ ರಾಹುಲ್ ಗಾಂಧಿ ಅವರು ವಿದೇಶೀ ಕೈಗೊಂಬೆ ಆಗಿದ್ದಾರೆ. ಇನ್ನು ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಾಗಷ್ಟೇ ಉಳಿದಿಲ್ಲ, ಬದಲಾಗಿ ಟುಕ್ಡೆ ಟುಕ್ಡೆ ಗ್ಯಾಂಗ್‌ನ ಲೀಡರ್ ಆಗಿದೆ' ಎಂದು ಹೇಳಿದೆ.
ಇಂದು ಬೆಳಗಾವಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಭಾರತ ಐಕ್ಯತಾ ಯಾತ್ರೆಯಲ್ಲಿ ಕರ್ನಾಟಕದಲ್ಲಿ ಸಿಕ್ಕ ಯಶಸ್ಸು, ಜನರು ನೀಡಿದ ಅಪಾರ ಬೆಂಬಲವನ್ನು ನಾನು ಯಾವತ್ತೂ ಮರೆಯುವಂತಿಲ್ಲ. ನಮ್ಮ ಹೋರಾಟಕ್ಕೆ ಶಕ್ತಿ ತುಂಬಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ಈ ಐತಿಹಾಸಿಕ ಯಾತ್ರೆಯ ವೇಳೆ ಯುವಕರು ನನಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ನಾನು ಅವನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳುತ್ತೇನೆ' ಎಂದು ತಿಳಿಸಿದರು.
'ಯಾವುದೇ ಪದವಿ ಪಡೆದರೂ ಕರ್ನಾಟಕದ ಯುವಕರಿಗೆ ಏಕೆ ಕೆಲಸ ಸಿಗುತ್ತಿಲ್ಲ? ಕರ್ನಾಟಕವು ಇಡೀ ದೇಶದಲ್ಲಿ ಅತಿ ಭ್ರಷ್ಟ ಸರ್ಕಾರವಾಗಲು ಕಾರಣವೇನು?, ಕಾಂಟ್ರ್ಯಾಕ್ಟರ್ ಅಸೋಸಿಯೇಷನ್, ಖಾಸಗಿ ಶಾಲೆಗಳ ಮಂಡಳಿ ಬರೆದ ಪತ್ರಕ್ಕೆ ಪ್ರಧಾನ ಮಂತ್ರಿ ಏಕೆ ಉತ್ತರಿಸುತ್ತಿಲ್ಲ ಎಂದು ಕೆಲವರು ನನ್ನನ್ನು ಪ್ರಶ್ನಿಸಿದರು' ಎಂದು ಹೇಳಿದರು.
'ಇದಕ್ಕೆಲ್ಲಾ BJP 40 ಪರ್ಸೆಂಟ್ ಕಮಿಷನ್ ಲೂಟಿ ಕಾರಣ. PSI ಹಗರಣ, ಅಸಿಸ್ಟಂಟ್ ಪ್ರೊಫೆಸರ್ ನೇಮಕಾತಿ ಹಗರಣಗಳ ಮೂಲಕ BJP ಯು ಯುವಕರ ಭವಿಷ್ಯ ಹಾಳುಮಾಡಿದೆ. ಮೈಸೂರು ಸ್ಯಾಂಡಲ್ ಹಗರಣದಲ್ಲಿ ಲಂಚ ಪಡೆದ ಶಾಸಕ, ಅವರ ಪುತ್ರನಿಗೆ ಸರ್ಕಾರ ರಕ್ಷಣೆ ನೀಡಿದೆ. ಯುವಕರ ಭವಿಷ್ಯವನ್ನು ಸರಿ ಹಾದಿಗೆ ತರುವ ನಿಟ್ಟಿನಲ್ಲಿ ಯುವನಿಧಿ ಗ್ಯಾರಂಟಿ ನೆರವಾಗಲಿದೆ' ಎಂದು ರಾಹುಲ್ ಗಾಂಧಿ ತಿಳಿಸಿದರು.












Click it and Unblock the Notifications