ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಸಿದ್ದರಾಮಯ್ಯ ಬಣದ ಮೇಲುಗೈ- ಡಿಕೆಶಿ ಆಪ್ತರಿಗೆ ಕೈಕೊಟ್ಟ 'ಕೈ' ಕಮಾಂಡ್
ಬೆಂಗಳೂರು, ಏಪ್ರಿಲ್ 06: ಮುಂಬರುವ ಕರ್ನಾಟಕ ಚುನಾವಣೆಗೆ ( Karnataka Elections 2023 ) ಕಾಂಗ್ರೆಸ್ ( Congress ) ತನ್ನ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇಂದು ಬಿಡುಗಡೆಯಾಗಿರುವ ಎರಡನೇ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ( Siddaramaiah ) ಬಹುತೇಕ ಆಪ್ತರಿಗೆ ಟಿಕೆಟ್ ಸಿಕ್ಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಿಂದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಕಿಮ್ಮನೆ ರತ್ನಾಕರ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಸಿದ್ದರಾಮಯ್ಯನವರ ಆಪ್ತರೂ ಹೌದು.

ಹಿರಿಯ ನಾಯಕ ಸಿದ್ದರಾಮಯ್ಯ ಅವರ ಶಿಷ್ಯರಾಗಿರುವ ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಧಾರವಾಡದಿಂದ ವಿನಯ್ ಕುಲಕರ್ಣಿ ಕಣಕ್ಕಿಳಿದಿದ್ದಾರೆ. ಅವರನ್ನು ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿ ಕ್ಷೇತ್ರದಿಂದಲೂ ಕಣಕ್ಕಿಳಿಸುವ ಯೋಚನೆಯಲ್ಲಿ ಕಾಂಗ್ರೆಸ್ ಇದೆ ಎಂದು ಹೇಳಲಾಗುತ್ತಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ಸಂತೋಷ್ ಲಾಡ್ ಅವರ ಹೆಸರು ಘೋಷಣೆಯಾಗಿದೆ. ಸಂತೋಷ್ ಲಾಡ್ ಸಿದ್ದರಾಮಯ್ಯನವರ ಆಪ್ತರು. ಅಲ್ಲಿ ನಾಗರಾಜ ಛಬ್ಬಿ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಅವರು ಡಿ ಕೆ ಶಿವಕುಮಾರ್ ಅವರ ಬೆಂಬಲಿಗರು.
ಗದಗ ಜಿಲ್ಲೆಯ ನರಗುಂದ ಕ್ಷೇತ್ರದಿಂದ ಮಾಜಿ ಸಚಿವ ಬಿಆರ್ ಯಾವಗಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಡಾ ಸಂಗಮೇಶ್ ಕೊಳ್ಳಿಯವರ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಕೊಳ್ಳಿಯವರ್ ಡಿಕೆಶಿ ಬೆಂಬಲಗರು. ಇನ್ನು ಬದಾಮಿಯಿಂದ ಮಾಜಿ ಸಚಿವ ಬಿಬಿ ಚಿಮ್ಮನಕಟ್ಟಿ ಪುತ್ರ ಭೀಮಸೇನ್ ಚಿಮ್ಮನಕಟ್ಟಿಗೆ ಟಿಕೆಟ್ ಸಿಕ್ಕಿದೆ.

ಭೀಮಸೇನ್ ಅವರ ಬೆನ್ನಿಗೆ ಸಿದ್ದರಾಮಯ್ಯ ನಿಂತಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಸಿದ್ದರಾಮಯ್ಯನವರ ಬಣವು ಮೇಲುಗೈ ಸಾಧಿಸಿದೆ. ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಡಿ ಕೆ ಶಿವಕುಮಾರ್ ಆಪ್ತರಿಗೆ ಟಿಕೆಟ್ ಕೈತಪ್ಪಿರುವುದು ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಕಳೆದ ತಿಂಗಳು ಕಾಂಗ್ರೆಸ್ ಪಕ್ಷವು ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕರ್ನಾಟಕದಲ್ಲಿ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಮೊದಲ ಪಕ್ಷ ಜೆಡಿಎಸ್ ಆಗಿದೆ. ಆಡಳಿತಾರೂಢ ಬಿಜೆಪಿ ಇನ್ನೂ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಮೊದಲ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಹೆಸರುಗಳ ಪೈಕಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಮತ್ತು ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಅವರನ್ನು ಕೊರಟಗೆರೆ (ಎಸ್‌ಸಿ) ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ ಮತ್ತು ಪ್ರಿಯಾಂಕ್ ಖರ್ಗೆ ಕ್ರಮವಾಗಿ ದೇವನಹಳ್ಳಿ ಮತ್ತು ಚಿತ್ತಾಪುರದಿಂದ (ಎಸ್‌ಸಿ) ಸ್ಪರ್ಧಿಸಲಿದ್ದಾರೆ. ಪ್ರಿಯಾಂಕ್ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿದ್ದಾರೆ.

ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಹಾತೊರೆಯುತ್ತಿದ್ದರೆ, ಆಡಳಿತ ಪಕ್ಷವು ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಲು ಕಸರತ್ತು ನಡೆಸಿದೆ.












Click it and Unblock the Notifications