ಬೆಂಗಳೂರು: ಇವಿಎಂನಲ್ಲಿ ದೋಷ ಕಂಡುಬಂದರೆ ತಕ್ಷಣವೇ ಬದಲಾವಣೆ; ತುಷಾರ್ ಗಿರಿನಾಥ್
ಬೆಂಗಳೂರು, ಮೇ 9: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೇ ದಿನ ಬಾಕಿ ಇದ್ದು, ಮೇ 10ರಂದು ರಾಜ್ಯದೆಲ್ಲೆಡೆ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತೆ ಕ್ರಮಗಳನ್ನು ಕೈಗೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ವಿಧಾನಸಭೆ ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು 1.56 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಜ್ಜಾಗಿದ್ದು, ಶಾಂತಿಯುತ ಮತ್ತು ಪಾರದರ್ಶಕ ಮತದಾನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿರುವ ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್, "ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ)ನಲ್ಲಿ ದೋಷ ಕಂಡುಬರಲ್ಲ. ಆ ರೀತಿ ಏನಾದರೂ ದೋಷ ಕಂಡುಬಂದರೆ, ನಾವು ತಕ್ಷಣವೇ ಇವಿಎಂ ಮಷಿನ್ ಬದಲಾವಣೆ ಮಾಡುತ್ತೇವೆ," ಎಂದು ಹೇಳಿದ್ದಾರೆ.
ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, "ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ಮಂಗಳವಾರ ಸಂಜೆ ಚುನಾವಣಾ ಸಿಬ್ಬಂದಿ ತೆರಳಲಿದ್ದಾರೆ. 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ," ಎಂದು ತಿಳಿಸಿದರು.

"ಮಾಸ್ಟರಿಂಗ್ ಸೆಂಟರ್‌ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಲಿದ್ದೇವೆ. ನಿಯೋಜಿತ ಸಿಬ್ಬಂದಿ ಆಯಾ ಮಾಸ್ಟರಿಂಗ್ ಸೆಂಟರ್‌ಗಳಲ್ಲಿ ಇವಿಎಂ ಪಡೆದು ಮಂಗಳವಾರ ಸಂಜೆ ವೇಳೆಗೆ ನಿಗದಿಪಡಿಸಿದ ಮತಗಟ್ಟೆಗೆ ತೆರಳುತ್ತಾರೆ. ನಾವು ಈಗಾಗಲೇ ರೂಟ್ ಮ್ಯಾಪ್ ತಯಾರಿ ಮಾಡಿದ್ದೇವೆ," ಎಂದು ತುಷಾರ್ ಗಿರಿನಾಥ್ ಹೇಳಿದರು.
ಒಂದು ಬಸ್‌ನಲ್ಲಿ ಐದರಿಂದ ಆರು ಮತಗಟ್ಟೆಗಳಿಗೆ ಸಂಬಂಧಿಸಿದ ಚುನಾವಣಾ ಸಿಬ್ಬಂದಿಯನ್ನು ಡ್ರಾಪ್ ಮಾಡಲಾಗುವುದು. ಬುಧವಾರ (ಮೇ 10) ಬೆಳಗ್ಗೆ ಮತಗಟ್ಟೆಗಳಲ್ಲಿ 6 ಗಂಟೆಗೆ ಅಣಕು ಮತದಾನ ನಡೆಸಲಿದ್ದಾರೆ. ನಂತರ ಏಳು ಗಂಟೆಗೆ ಮತದಾನ ಆರಂಭವಾಗಲಿದೆ ಎಂದರು.
ಯಾವುದೇ ಮತಗಟ್ಟೆಗಳಲ್ಲಿ ಇವಿಎಂಗಳಲ್ಲಿ ದೋಷ ಕಂಡುಬಂದರೆ ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್‌ಗಳನ್ನು ನಿಯೋಜನೆ ಮಾಡಲಾಗಿದೆ. 30 ನಿಮಿಷಗಳಲ್ಲಿ ಇವಿಎಂ ಸರಿ ಮಾಡುವಂತಹ ಕೆಲಸ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.












Click it and Unblock the Notifications