ಡಿಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಚಾನ್ಸ್ ಇಲ್ಲ: ಪ್ರಲ್ಹಾದ್ ಜೋಶಿ
ಬೆಂಗಳೂರು, ಏಪ್ರಿಲ್. 07: ವಿಧಾನಸಭಾ ಚುನಾವಣೆಗೆ ಮುನ್ನ ಯಾರನ್ನೂ ಮುಖ್ಯಮಂತ್ರಿಯಾಗಿ ಬಿಂಬಿಸದಂತೆ ಪಕ್ಷದ ಹೈಕಮಾಂಡ್ ನಿರ್ದೇಶನ ನೀಡಿದ್ದರೂ ಕೂಡ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಊಹಾಪೋಹಗಳು ತೀವ್ರಗೊಂಡಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಗೆಯೇ ಸಿಎಂ ಸ್ಥಾನದ ಆಕಾಂಕ್ಷಿಗಳು ಎಂದು ಹಲವರು ಹೇಳಿಕೆ ನೀಡಿದ್ದಾರೆ.
ಈ ಸಾಲಿನಲ್ಲಿ ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಡಿಕೆ ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ಆದರೆ, ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಬ್ಬರಲ್ಲಿ ಯೂರು ಮುಖ್ಯಮಂತ್ರಿಯಾಗುವುದಿಲ್ಲ. ಏಕೆಂದರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಬಹುಮತದ ಗಡಿ ದಾಟುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ಕಾಂಗ್ರೆಸ್ ಹಿಂದೇಟು ಹಾಕುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅವರು ಮುಖ್ಯಮಂತ್ರಿಯಾಗಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ನನಗೆ ಮತ್ತು ಕರ್ನಾಟಕದ ಜನರಿಗೆ ಸಮಸ್ಯೆಯಲ್ಲ. ಕಾಂಗ್ರೆಸ್ ಬಹುಮತ ಪಡೆಯುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆಯುವುದಿಲ್ಲ. ನೀವು ಈ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ ಎಂದು ನನಗೆ ಅರ್ಥವಾಗುತ್ತಿಲ್ಲ. ಅಧಿಕಾರವೇ ಇಲ್ಲದೇ ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಹೇಗೆ..? ಅವರು ಸಿಎಂ ಆಗುವ ಪ್ರಶ್ನೆಯೇ ಇಲ್ಲ' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ಪಟ್ಟಿದ್ದಾರೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಈಗಾಗಲೇ 166 ವಿಧಾನಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಆಡಳಿತರೂಢ ಬಿಜೆಪಿ ಯಾವುದೇ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ರಾಜ್ಯಸಭಾ ಸಂಸದ ರಂದೀಪ್ ಸುರ್ಜೇವಾಲಾ ಅವರು ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಬಿಜೆಪಿಗೆ ಚುನಾವಣೆ ಎದುರಿಸಲು ಯಾವುದೇ ಮುಖಗಳಿಲ್ಲ, ಅವರು ಟಿಕೆಟ್‌ಗಾಗಿ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ. ಅದಕ್ಕೆ ನಮ್ಮ ಬಳಿ ಪುರಾವೆಗಳಿವೆ" ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಟಿಕೆಟ್ ಘೋಷಿಸಿದೆ. ಆದರೆ ಬಿಜೆಪಿ ಒಂದೇ ಒಂದು ಸ್ಥಾನಕ್ಕೂ ಟಿಕೆಟ್ ಘೋಷಿಸಲು ಸಾಧ್ಯವಾಗಲಿಲ್ಲ. ನಾನು ಜೆಪಿ ನಡ್ಡಾ ಅವರನ್ನು ಕೇಳುತ್ತೇನೆ. ನೀವು ಯಾಕೆ ಹೆದರುತ್ತೀರಿ? ಜೆಪಿ ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಸಿಎಂ ಬೊಮ್ಮಾಯಿ ಅವರು ಅಭ್ಯರ್ಥಿ ಘೋಷಣೆಯು ಪಕ್ಷದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಭಾವಿಸುತ್ತಾರೆಯೇ..?" ಎಂದು ರಂದೀಪ್ ಸುರ್ಜೇವಾಲಾ ವ್ಯಂಗ್ಯವಾಡಿದ್ದರು.
ಆರೋಗ್ಯ ಸಚಿವ ಮತ್ತು ಬಿಜೆಪಿ ನಾಯಕ ಕೆ ಸುಧಾಕರ್ ಅವರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಕಾಳಜಿ ವಹಿಸಿಸುತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದರು. "ನಮ್ಮ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಅವರು ಏಕೆ ತಲೆಕೆಡಿಸಿಕೊಂಡಿದ್ದಾರೆ? ಅವರಿಗೆ ತಮ್ಮದೇ ಸದಸ್ಯರ ಬಗ್ಗೆ ವಿಶ್ವಾಸವಿಲ್ಲವೇ? ನಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಅವರು ಏಕೆ ಕಾಯುತ್ತಿದ್ದಾರೆ? ಇದು ನಮ್ಮ ಕಾರ್ಯತಂತ್ರ ಒಂದು ಭಾಗವಾಗಿದೆ. ಜೊತೆಗೆ ಅಭ್ಯರ್ಥಿಗಳನ್ನು ಯಾವಾಗ ಘೋಷಿಸಬೇಕೆಂದು ನಮಗೆ ತಿಳಿದಿದೆ. ನಮಗೆ ಅಭ್ಯರ್ಥಿಗಳು ಮುಖ್ಯವಲ್ಲ ಏಕೆಂದರೆ ನಮ್ಮ ಪಕ್ಷವು ಪ್ರಬಲವಾದ ಕಾರ್ಯಕರ್ತರ ಆಧಾರದ ಮೇಲೆ ನಿಂತಿದೆ " ಎಂದಿದ್ದರು.












Click it and Unblock the Notifications