Narendra Modi In Karnataka: 4 ಜಿಲ್ಲೆ, 3 ಸಮಾವೇಶ, 1 ರೋಡ್ ಶೋ: ಹಳೇ ಮೈಸೂರು ಮೇಲೆ 'ನಮೋ' ಕಣ್ಣು
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಕೊನೆಯ ಹಂತದ ಕಸರತ್ತಿನಲ್ಲಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಮೇ 10ರಂದು ನಡೆಯುವ ಮತದಾನ ದಿನಕ್ಕೂ ಮುನ್ನ ರಾಜ್ಯದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ರಾಜ್ಯ ನಾಯಕರ ಜೊತೆ ರಾಷ್ಟ್ರೀಯ ನಾಯಕರು ರಾಜಕೀಯ ಸಮಾವೇಶ ಮತ್ತು ರೋಡ್ ಶೋಗಳನ್ನು ನಡೆಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ (ಏಪ್ರಿಲ್ 29)ದಿಂದಲೇ ಕರುನಾಡ ಕುರುಕ್ಷೇತ್ರಕ್ಕೆ ಧುಮುಕಿದ್ದು, ರಾಜ್ಯದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಮೊದಲ ದಿನ ಬೀದರ್, ವಿಜಯಪುರ, ಬೆಳಗಾವಿ ಮತ್ತು ಬೆಂಗಳೂರು ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು.
ಇಂದು (ಭಾನುವಾರ, ಏಪ್ರಿಲ್ 30) ಪ್ರಧಾನಿ ನರೇಂದ್ರ ಮೋದಿ ಮತ್ತೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಮೊದಲು ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದರೆ, ದಿನದ ಕೊನೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ಕಳೆದ ಬಾರಿ ಹಳೇ ಮೈಸೂರು ಭಾಗದ 58 ಕ್ಷೇತ್ರಗಳಲ್ಲಿ ಕೇವಲ 11 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲಲು ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಈ ಭಾಗದ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ವೇಳಾಪಟ್ಟಿ ತಯಾರಿಸಿದೆ.
ಕೋಲಾರದಲ್ಲಿ ನಡೆಯುವ ಸಮಾವೇಶದ ಮೂಲಕ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮತಗಳನ್ನು ಸೆಳೆಯಲಿದ್ದರೆ, ಬೇಲೂರಿನ ಸಮಾವೇಶವು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನವಾಗಲಿದೆ.
ಇನ್ನು ಚನ್ನಪಟ್ಟಣದ ಸಮಾವೇಶವು ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಮತಬೇಟೆಯಾಡಲಿದ್ದಾರೆ. ಆ ಬಳಿಕ ಸಂಜೆ ವೇಳೆಗೆ ನರೇಂದ್ರ ಮೋದಿ ಮೈಸೂರಿನಲ್ಲಿ ಅಬ್ಬರದ ರೋಡ್ ಶೋ ನಡೆಸಲಿದ್ದಾರೆ.
ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಕನಿಷ್ಠ 30 ಸ್ಥಾನಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಪಣತೊಟ್ಟಿರುವ ಕಮಲ ಪಡೆ, ನರೇಂದ್ರ ಮೋದಿ ಮೂಲಕ ಮತ ಸೆಳೆಯಲು ತಂತ್ರಗಾರಿಕೆ ನಡೆಸಿದೆ. ಚುನಾವಣೆಗೆ ಒಂದು ವಾರದ ಕಾಲಾವಕಾಶವಿದ್ದು, ಈ ವೇಳೆ ಬಿಜೆಪಿ ಪರ ಅಲೆ ಎಬ್ಬಿಸಲು ಎದುರು ನೋಡುತ್ತಿದೆ.
ಮೊದಲ ದಿನದ ಮತ ಪ್ರಚಾರ ಕಾರ್ಯಕ್ರಮವು ರಾಜ್ಯದ ಮುಕುಟ ಬೀದರ್‌ನಿಂದ ಆರಂಭವಾಯಿತು. ಈ ವೇಳೆ ಲಕ್ಷಾಂತರ ಜನರು ನರೇಂದ್ರ ಮೋದಿಯವರನ್ನು ನೋಡಲು ಮತ್ತು ಭಾಷಣ ಕೇಳಲು ಆಗಮಿಸಿದ್ದರು. ನರೇಂದ್ರ ಮೋದಿ ಅವರು ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ಕಾಂಗ್ರೆಸ್ ವಿರುದ್ಧ ಮಾತಿನ ಪ್ರಹಾರ ನಡೆಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.












Click it and Unblock the Notifications