Karnataka Elections: 'ಮತ್ತೆ ಘರ್ಜಿಸಲಿದೆ ಕರ್ನಾಟಕ', ಇದು ಕಾಂಗ್ರೆಸ್‌ನ ಹೊಸ ಸ್ಲೋಗನ್
ಬೆಂಗಳೂರು, ಮಾರ್ಚ್ 29: ಕರ್ನಾಟಕದ ವಿಧಾನಸಭೆಗೆ ( Karnataka Assembly Elections 2023 ) ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ತಿಳಿಸಿದ್ದಾರೆ. ಮೇ 13 ರಂದು ಮತಗಳನ್ನು ಎಣಿಕೆ ಮಾಡಲಾಗುವುದು ಎಂದು ಚುನಾವಣಾ ವೇಳಾಪಟ್ಟಿಯ ಘೋಷಣೆಯ ಸಮಯದಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಚುನಾವಣಾ ಆಯೋಗವು ರಾಜ್ಯದ 224 ಕ್ಷೇತ್ರಗಳಲ್ಲಿ 5.21 ಕೋಟಿ ಮತದಾರರಿಗೆ ಮತಗಟ್ಟೆಗಳನ್ನು ಸ್ಥಾಪಿಸಲಿದೆ. ಇದರಲ್ಲಿ 36 ಪರಿಶಿಷ್ಟ ಜಾತಿಗೆ ಮೀಸಲಾದ ಮತ್ತು 15 ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ರಾಜ್ಯದಲ್ಲಿ 9. 17 ಲಕ್ಷ ಪ್ರಥಮ ಬಾರಿ ಮತದಾರರಿದ್ದಾರೆ. ಜನವರಿ 2 ರಿಂದ ಏಪ್ರಿಲ್ 1 ರ ನಡುವೆ 18 ವರ್ಷ ತುಂಬುವ 41, 432 ಮತದಾರರು ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ ಎಂದು ಸಿಇಸಿ ಹೇಳಿದೆ.
ಕರ್ನಾಟಕದಲ್ಲಿ ನೋಂದಾಯಿತ ಮತದಾರರಲ್ಲಿ 16, 976 ಶತಾಯುಷಿ ಮತದಾರರು ಸೇರಿದ್ದಾರೆ. ಮತದಾನ ಮಾಡಲು ಪ್ರೋತ್ಸಾಹಿಸಲು ಶತಾಯುಷಿಗಳು ಸೇರಿದಂತೆ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗವು ವಿಶೇಷ ಸಂಪರ್ಕವನ್ನು ನೀಡುತ್ತದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿಯು ಮೇ 24, 2023 ರಂದು ಕೊನೆಗೊಳ್ಳುತ್ತದೆ.
ಆಡಳಿತ ವಿರೋಧಿ ವಿಚಾರವು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಂಬಲಾಗಿದೆ. ಈ ಅಧಿಕಾರ ವಿರೋಧಿ ವಿಚಾರವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಕರ್ನಾಟಕ ಕಾಂಗ್ರೆಸ್ ಪಾಳಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಹೇಳಿದೆ.

ಮತ್ತೊಂದೆಡೆ, ಬಿಜೆಪಿ ಕೋಮು ರಾಜಕಾರಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಎರಡು ವರ್ಷಗಳ ಕಾಲ ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹ 3 ಸಾವಿರ ನೀಡುವುದಾಗಿ ಭರವಸೆ ನೀಡಿದೆ. ಮತದಾರರಲ್ಲಿ ಗಮನಾರ್ಹ ಭಾಗವಾಗಿರುವ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ದಲಿತರನ್ನು ಓಲೈಸಲು ಪಕ್ಷವು ಪ್ರಯತ್ನಿಸುತ್ತಿದೆ. ಮೇ 10 ರಂದು ಬಿಜೆಪಿಯನ್ನು ಗಲ್ಲಿಗೇರಿಸಲು ಕನ್ನಡಿಗರು ಕಾಯುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ತನ್ನ ಹೊಸ ಘೋಷಣೆಯನ್ನು ( ಸ್ಲೋಗನ್ ) ಹೊರತಂದಿದೆ. 'ಮತ್ತೆ ಘರ್ಜಿಸಲಿದೆ ಕರ್ನಾಟಕ', ಎಂದ ಘೋಷಣೆ ಅಡಿ ಚುನಾವಣೆಯಲ್ಲಿ ಹಣಾಹಣಿ ನಡೆಸಲಿದೆ.
ಲಿಂಗಾಯತ, ಒಕ್ಕಲಿಗ ಬೆಂಬಲ ಬಯಸಿದ ಬಿಜೆಪಿ
ಭಾರತೀಯ ಜನತಾ ಪಕ್ಷವು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಯತ್ನ ನಡೆಸಿದೆ. ಪಕ್ಷವು ಇತ್ತೀಚೆಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಈ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಜಾರಿಗೆ ತಂದ ಶೇ 4 ಮೀಸಲಾತಿಯನ್ನು ರದ್ದುಗೊಳಿಸಿದೆ.

ಜೆಡಿಎಸ್ ಕಿಂಗ್ ಮೇಕರ್
ಕರ್ನಾಟಕ ರಾಜಕೀಯದಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವು ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸುತ್ತಿದೆ. ಚುನಾವಣೋತ್ತರ ಮೈತ್ರಿಗೆ ತನ್ನ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡು ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನವಾದ ಅಂತರವನ್ನು ಕಾಪಾಡಿಕೊಂಡಿದೆ. ಜೆಎಎಸ್ ಪಕ್ಷವು ರೈತರ ಕಲ್ಯಾಣ ಮತ್ತು ಪ್ರಾದೇಶಿಕ ಅಭಿವೃದ್ಧಿಯ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದೆ.












Click it and Unblock the Notifications