ಕರ್ನಾಟಕ ವಿಧಾನಸಭಾ ಚುನಾವಣೆ: ಮೂವರು ಮಾಜಿ ಸಿಎಂಗಳೇ ಬಿಜೆಪಿಯ ಟಾರ್ಗೆಟ್‍!

ಬೆಂಗಳೂರು, ಮೇ 05: ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಎಂದರೆ ಅವರು ಪ್ರಭಾವಿಗಳು ಮತ್ತು ಜನಪ್ರಿಯ ನಾಯಕರು ಎಂದರ್ಥ. ಇಂತಹ ನಾಯಕರು ತಮ್ಮದೇ ಆದ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡಿರುತ್ತಾರೆ. ಅವರು ಆ ಕ್ಷೇತ್ರದಲ್ಲಿ ಸುಲಭವಾಗಿಯೇ ಗೆಲುವು ಸಾಧಿಸಿಕೊಂಡು ಬರುತ್ತಿರುತ್ತಾರೆ. ಆದರೆ ಈ ಬಾರಿಯ 2023ರ ಚುನಾವಣೆ ಮಾಜಿ ಸಿಎಂಗಳಿಗೆ ಸುಲಭವಾಗಿಲ್ಲ ಕಾರಣ ಅವರನ್ನೇ ಬಿಜೆಪಿ ಟಾರ್ಗೆಟ್ ಮಾಡಿದೆ.

ಸದ್ಯ ಚನ್ನಪಟ್ಟಣದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರೆ, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಹಾಗೂ ಮೈಸೂರಿನ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದಾರೆ. ಸಾಮಾನ್ಯವಾಗಿ ಮಾಜಿ ಸಿಎಂಗಳಾಗಿದ್ದವರು ಎಂದರೆ ಅವರು ಪ್ರಭಾವಿ ನಾಯಕರು ಆಗಿರುವುದರಿಂದ ರಾಜ್ಯದಾದ್ಯಂತ ಅವರ ಬೆಂಬಲಿಗರು ಇರುತ್ತಾರೆ. ಮತ್ತು ಅವರು ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಬಹಳಷ್ಟು ಸಲ ಇಂತಹ ನಾಯಕರ ಮುಂದೆ ಎದುರಾಳಿಗಳನ್ನು ನಾಮಕಾವಸ್ಥೆಗೆ ಇಳಿಸಲಾಗುತ್ತದೆ. ಏಕೆಂದರೆ ಎಷ್ಟೇ ಪ್ರಯತ್ನ ಪಟ್ಟರೂ ಗೆಲುವು ಕಷ್ಟ ಎಂಬುದು ಗೊತ್ತಿರುವುದರಿಂದ ಎದುರಾಳಿ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುವುದಿಲ್ಲ.

Karnataka Election 2023: BJP Targeting The former Chief Ministers

ಹಾಗೆಂದು ಮಾಜಿ ಸಿಎಂಗಳೆಲ್ಲರೂ ಸ್ಪರ್ಧಿಸಿ ಗೆದ್ದಿದ್ದಾರೆ ಎಂದು ಹೇಳಲಾಗುವುದಿಲ್ಲ. ಹಲವರು ಸೋತ ನಿದರ್ಶನಗಳಿವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗುವ ನಾಯಕರು ಪ್ರಭಾವಿಗಳು, ಜನನಾಯಕರು ಆಗಿರುವುದರಿಂದ ಅವರು ಹಲವು ಬಾರಿ ಪ್ರತಿನಿಧಿಸಿಕೊಂಡು ಬರುವುದರೊಂದಿಗೆ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡು ಬಂದಿರುತ್ತಾರೆ. ಮತ್ತು ಆ ಕ್ಷೇತ್ರದಲ್ಲಿ ಸುಲಭವಾಗಿ ಗೆಲುವು ಸಾಧಿಸುವ ಅಭ್ಯರ್ಥಿಯಾಗಿರುತ್ತಾರೆ.

ವರ್ಷದಿಂದ ವರ್ಷಕ್ಕೆ ಕಠಿಣವಾದ ಚುನಾವಣೆ

ಶಾಸಕರಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುವುದಕ್ಕೂ ಸಿಎಂ ಆಗಿ ತನ್ನ ಕ್ಷೇತ್ರದೊಂದಿಗೆ ಇಡೀ ರಾಜ್ಯವನ್ನು ಪ್ರತಿನಿಧಿಸುವುದು ಅಷ್ಟು ಸುಲಭವಲ್ಲ. ಕಾರಣ ತನ್ನ ಕ್ಷೇತ್ರಕ್ಕಿಂತ ಹೆಚ್ಚಾಗಿ ಇಡೀ ರಾಜ್ಯದ ಬಗ್ಗೆ ಗಮನಹರಿಸಬೇಕಾಗುತ್ತದೆ. ಸಿಎಂ ಆಗಿದ್ದ ವೇಳೆ ತನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಜನಸಾಮಾನ್ಯರ ಬೇಕು ಬೇಡಗಳನ್ನು ಆಲಿಸುವುದು ಕಷ್ಟವಾಗಿರುತ್ತದೆ. ರಾಜ್ಯಕ್ಕೆ ಮುಖ್ಯಮಂತ್ರಿ ಆದರೂ ಅವರು ಮೊದಲಿಗೆ ಕ್ಷೇತ್ರದ ಶಾಸಕರಾಗಿರುವುದರಿಂದ ಅವರು ತಮಗೆ ತಕ್ಷಣಕ್ಕೆ ಸಿಗಬೇಕು, ಕ್ಷೇತ್ರದ ಸಮಸ್ಯೆಗಳನ್ನು ಆಲಿಸಬೇಕು ಎಂದು ಮತದಾರರು ಬಯಸುತ್ತಾರೆ.

ಸಿಎಂ ಆದ ಸಂದರ್ಭದಲ್ಲಿ ರಾಜ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿರುವುದರಿಂದ ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಕ್ಷೇತ್ರದತ್ತ ಹೆಚ್ಚು ಆಸ್ಥೆ ವಹಿಸಲು ಕಷ್ಟವಾಗಬಹುದು ಇದು ಚುನಾವಣೆಯ ಸಂದರ್ಭ‍ದಲ್ಲಿ ಕ್ಷೇತ್ರದಲ್ಲಿ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಆದರೂ ಇತ್ತೀಚೆಗಿನ ವರ್ಷಗಳಲ್ಲಿ ನಡೆಯುತ್ತಿರುವ ಚುನಾವಣೆಗಳನ್ನು ಗಮನಿಸಿದರೆ ಎಲ್ಲ ನಾಯಕರಿಗೂ ವರ್ಷದಿಂದ ವರ್ಷಕ್ಕೆ ಚುನಾವಣೆಗಳು ಕಠಿಣವಾಗುತ್ತಲೇ ಹೋಗುತ್ತಿವೆ.

Karnataka Election 2023: BJP Targeting The former Chief Ministers

ಬಿಜೆಪಿ ಅಭ್ಯರ್ಥಿಗಳೇ ಪ್ರಬಲ ಸ್ಪರ್ಧಿಗಳು

ಇದುವರೆಗಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿಯ 2023ರ ವಿಧಾನಸಭಾ ಚುನಾವಣೆ ಬಹುಮುಖ್ಯವಾಗಿ ಮಾಜಿ ಸಿಎಂಗಳಾದ ಹೆಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮತ್ತು ಸಿದ್ದರಾಮಯ್ಯ ಅವರಿಗೆ ಕಬ್ಬಿಣದ ಕಡಲೆಯಾಗಿರುವುದು ಸುಳ್ಳೇನಲ್ಲ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಪ್ರಬಲ ಸ್ಪರ್ಧಿಯಾಗಿದ್ದರೆ, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯ ಮಹೇಶ್ ತೆಂಗಿನಕಾಯಿ ಪ್ರತಿಸ್ಪರ್ಧಿಯಾಗಿದ್ದಾರೆ. ಇನ್ನು ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ವಿ.ಸೋಮಣ್ಣ ಸ್ಪರ್ಧೆಯೊಡ್ಡಿದ್ದಾರೆ.

ಈ ಬಾರಿ ಮೂವರು ಮಾಜಿ ಸಿಎಂಗಳಿಗೆ ಬಿಜೆಪಿ ಅಭ್ಯರ್ಥಿಗಳೇ ಪ್ರಬಲ ಸ್ಪರ್ಧಿಯಾಗಿರುವುದು ವಿಶೇಷ. ಈ ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇ ಬೇಕೆಂಬ ಹಠಕ್ಕೆ ಬಿದ್ದಿದೆ. ಅಭ್ಯರ್ಥಿಗಳ ಪರವಾಗಿ ಬಿಜೆಪಿಯ ರಾಜ್ಯ ನಾಯಕರು ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾಯಾದಿಯಾಗಿ ಕೇಂದ್ರದ ಹಲವು ನಾಯಕರನ್ನು ಕರೆತಂದು ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ.

Karnataka Election 2023: BJP Targeting The former Chief Ministers

ಕುತೂಹಲದಿಂದ ಕಾಯುತ್ತಿರುವ ನಾಡಿನ ಜನತೆ

ಸದ್ಯ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮಾಜಿ ಸಿಎಂಗಳು ಸ್ವಲ್ಪ ಎಚ್ಚರ ತಪ್ಪಿದರೂ ಅದರ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಹೀಗಾಗಿ ಚನ್ನಪಟ್ಟಣ, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಮತ್ತು ವರುಣಾ ಕ್ಷೇತ್ರಗಳು ಹೈವೊಲ್ಟೇಜ್ ಕ್ಷೇತ್ರಗಳಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗಮನಸೆಳೆಯುತ್ತಿದ್ದು, ಮಾಜಿ ಸಿಎಂಗಳು ಗೆಲುವಿನೊಂದಿಗೆ ತಮ್ಮ ವರ್ಚಸ್ಸು ಉಳಿಸಿಕೊಳ್ಳುತ್ತಾರಾ? ಕ್ಷೇತ್ರದ ಮತದಾರರು ಯಾವ ತೀರ್ಮಾನ ಮಾಡುತ್ತಾರೆ? ಎಂಬಿತ್ಯಾದಿ ಮತದಾರರ ಕುತೂಹಲಕ್ಕೆ ಮೇ.13ರ ತನಕ ಕಾಯಲೇಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+