Lingayat CM: ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ತಿರುಚುತ್ತಿದೆ ಎಂದ ನಟ ಚೇತನ್ ಅಹಿಂಸಾ
ಬೆಂಗಳೂರು, ಏಪ್ರಿಲ್. 24: ವಿಧಾನಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಲಿಂಗಾಯತ ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತಿವೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಇತ್ತೀಚಿನ "ಲಿಂಗಾಯತ ಮುಖ್ಯಮಂತ್ರಿ" ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿರುವ ಅವರು, "ಲಿಂಗಾಯತ ಸಿಎಂ ಬಗ್ಗೆ ಸಿದ್ದರಾಮಯ್ಯ ಅವರಿಂದ ಇಂತಹ ಹೇಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಅವರೊಬ್ಬ ಹಿರಿಯ ನಾಯಕ. ಲಿಂಗಾಯತ ಸಮುದಾಯವನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ. ಲಿಂಗಾಯತ ಸಮುದಾಯವನ್ನೇ ಭ್ರಷ್ಟರೆಂದು ಕರೆಯುವುದು ತಪ್ಪು. ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದಿದ್ದಾರೆ.

ಆದರೆ, ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿದೆ. ರಾಜ್ಯದಲ್ಲಿ ಲಿಂಗಾಯತರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬ ಬಿಜೆಪಿ ನಿಲುವಿನ ಕುರಿತ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಗಾಗಲೇ ಲಿಂಗಾಯತ ಮುಖ್ಯಮಂತ್ರಿ (ಬಸವರಾಜ ಬೊಮ್ಮಾಯಿ) ಇದ್ದಾರೆ. ರಾಜ್ಯದ ಎಲ್ಲಾ ಭ್ರಷ್ಟಾಚಾರದ ಮೂಲ ಇವರೇ ಎಂದಿದ್ದರು. ಇದನ್ನೇ ಇಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ವಿವಾದದ ಹಿನ್ನೆಲೆ ಸಿದ್ದರಾಮಯ್ಯ ಅವರಿಗೆ ನಟ ಚೇತನ್ ಬೆಂಬಲ ವ್ಯಕ್ತಪಡಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಾರೆ. "ಸಿದ್ದರಾಮಯ್ಯ ಅವರು ಎಲ್ಲಾ ಲಿಂಗಾಯತ ಸಿಎಂಗಳ ಬಗ್ಗೆ ಹೇಳಿಕೆ ನೀಡಿಲ್ಲ -- ಬೊಮ್ಮಾಯಿ ಅವರ ಹೆಸರನ್ನು ತೆಗೆದುಕೊಳ್ಳದೆ ಹಾಲಿ ಸಿಎಂ ಎಂದು ಮಾತ್ರ ಉಲ್ಲೇಖಿಸಿದ್ದಾರೆ. ಲಿಂಗಾಯತ ಮತಗಳನ್ನು ಮತ್ತೆ ಒಟ್ಟುಗೂಡಿಸುವ ಪ್ರಯತ್ನದಲ್ಲಿ ಬಿಜೆಪಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚುತ್ತಿದೆ" ಎಂದು ಕಿಡಿಕಾರಿದ್ದಾರೆ.
ಮುಂದುವರೆದು, "ಲಿಂಗಾಯತರು ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ತಿರಸ್ಕರಿಸಬೇಕು ಮತ್ತು ಬದಲಿಗೆ ಬಸವನ ಸಮಾನತೆಯನ್ನು ಸ್ಥಾಪಿಸಬೇಕು/ ಒತ್ತಾಯಿಸಬೇಕು" ಎಂದು ನಟ ಚೇತನ್ ಕುಮಾರ್ ಅಹಿಂಸಾ ಆಗ್ರಹಿಸಿದ್ದಾರೆ.

ತಮ್ಮ ಹೇಳಿಕೆಯನ್ನು ತಿರುಚಿರುವ ಬಗ್ಗೆ ಸಿದ್ದರಾಮಯ್ಯ ಕೂಡ ಹೇಳಿಕೆ ನೀಡಿದ್ದರು. "ಬಿಜೆಪಿಯವರು ನನ್ನ ಹೇಳಿಕೆಯ ವೀಡಿಯೋವನ್ನು ಕಟ್ ಮಾಡಿ ತಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಲಿಂಗಾಯತರೆಲ್ಲ ಭ್ರಷ್ಟರೆಂದು ಹೇಳಿದ್ದೇನೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣಾ ಲಾಭ ಪಡೆಯುವ ಬಿಜೆಪಿಯ ಇಂಥ ಷಡ್ಯಂತ್ರಗಳಿಗೆ ನಾಡಿನ ಲಿಂಗಾಯತ ಸಮುದಾಯ ಕಿವಿಗೊಡುವುದಿಲ್ಲ ಎಂಬ ನಂಬಿಕೆ ನನಗಿದೆ" ಎಂದಿದ್ದರು.
"ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರೊಬ್ಬ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ. ಲಿಂಗಾಯತರೆಲ್ಲ ಭ್ರಷ್ಟರು ಎಂದು ನಾನು ಹೇಳಿಯೇ ಇಲ್ಲ. ಅದೆಲ್ಲ ಕರ್ನಾಟಕ ಬಿಜೆಪಿ ಸೃಷ್ಟಿಸಿದ ಸುಳ್ಳುಗಳಷ್ಟೆ" ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
"ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು, ಜೆ.ಹೆಚ್ ಪಟೇಲರು, ಬಿ.ಡಿ ಜತ್ತಿ, ಎಸ್.ಆರ್ ಕಂಠಿ ಇಂಥ ಅನೇಕ ಪ್ರಾಮಾಣಿಕ ಮುಖ್ಯಮಂತ್ರಿಗಳನ್ನು ಲಿಂಗಾಯತ ಸಮುದಾಯ ಈ ನಾಡಿಗೆ ನೀಡಿದೆ. ಈ ಎಲ್ಲಾ ನಾಯಕರ ಬಗೆಗೆ ನನಗೆ ವಿಶೇಷ ಪ್ರೀತಿ, ಅಭಿಮಾನವಿದೆ" ಎದು ಸಿದ್ದರಾಮಯ್ಯ ತಿಳಿಸಿದ್ದಾರೆ.

"ವೀರಶೈವ - ಲಿಂಗಾಯತರ ಬಗ್ಗೆ ನಮಗೆ ಗೌರವ ಇರುವುದರಿಂದಲೇ ಹೆಚ್ಚು ಟಿಕೇಟನ್ನು ಅವರಿಗೆ ನೀಡಿದ್ದೇವೆ. ಕಳೆದ ಬಾರಿ 47 ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರೆ, ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಸುಮಾರು 52 - 53 ಕ್ಷೇತ್ರಗಳಲ್ಲಿ ಟಿಕೇಟ್ ನೀಡಿದ್ದೇವೆ" ಎಂದು ತಮ್ಮ ಪಕ್ಷಕ್ಕೆ ಲಿಂಗಾಯತ ಸಮುದಾಐದ ಮೇಲಿರುವ ಗೌರವದ ಬಗ್ಗೆ ತಿಳಿಸಿದ್ದಾರೆ.
"ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನ ಮಾಡುವುದಿಲ್ಲ, ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದು ನಮ್ಮಲ್ಲಿ ನಡೆದುಕೊಂಡುಬಂದ ಪದ್ಧತಿ. ಬಿಜೆಪಿಯವರು ಜಾತಿ ಮೇಲೆ ಮಾಡಿದರೆ ಅದು ಅವರ ಪಕ್ಷದ ವಿಚಾರ. ಅದಕ್ಕೆ ನಮ್ಮ ತಕರಾರಿಲ್ಲ" ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇತ್ತ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. "ಭಾನುವಾರ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಅವರನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿದೆ. ಹಿಂದಿನ ಕಾಲದ ಲಿಂಗಾಯತ ಮುಖ್ಯಮಂತ್ರಿಗಳು ರಾಜ್ಯಕ್ಕೆ ಮಾತ್ರವಲ್ಲದೆ ಸಮುದಾಯಕ್ಕೆ ಕೀರ್ತಿ ತಂದವರ ಕೊಡುಗೆಯ ಬಗ್ಗೆ ಸಿದ್ದರಾಮಯ್ಯನವರು ಸ್ಪಷ್ಟವಾಗಿ ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.












Click it and Unblock the Notifications