ಸರ್ಕಾರ ರಚಿಸಲು ನಮ್ಮ ಬಳಿ ಪ್ಲಾನ್ 'ಬಿ' ರೆಡಿ ಇದೆ; ಫಲಿತಾಂಶಕ್ಕೂ ಮುನ್ನ ಆರ್. ಅಶೋಕ್ ಹೊಸ ಬಾಂಬ್
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ, ಮೇ 10ರಂದು ಮತದಾನ ನಡೆದಿದ್ದು, ಶನಿವಾರ, ಮೇ 13ರಂದು ಬಹು ನಿರೀಕ್ಷೆಯ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶಕ್ಕೂ ಮುನ್ನ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರೆ, ಕೆಲವರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು ಹಲವು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಗಳಿಸಲಿದೆ ಎಂದು ಹೇಳಿದ್ದರೂ, ರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಮುನ್ಸೂಚನೆ ಕಂಡುಬರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ಜೆಡಿಎಸ್ ಕಿಂಗ್ ಮೇಕರ್ ಆಗುವ ಲಕ್ಷಣಗಳು ಕಾಣಿಸುತ್ತಿವೆ.

ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಲ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್. ಅಶೋಕ್, "ಈ ವಿಧಾನಸಭೆ ಚುನಾವಣೆ ಸಮೀಕ್ಷೆಗಳನ್ನು ನಾನು ನಂಬಲ್ಲ. ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಒಂದು ವೇಳೆ ಬಹುಮತ ಬರದಿದ್ದರೆ, ನಮ್ಮ ಬಳಿ ಪ್ಲಾನ್ 'ಬಿ' ರೆಡಿ ಇದೆ,'' ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯದ 224 ಕ್ಷೇತ್ರಗಳ ಎಲ್ಲ ಅಭ್ಯರ್ಥಿಗಳ ಹಣೆಬರಹ ಇವಿಎಂ ಮಷಿನ್‌ಗಳಲ್ಲಿ ಭದ್ರವಾಗಿದ್ದು, ಇದೇ ಮೇ 13ರಂದು ಫಲಿತಾಂಶ ದಿನದಂದು ಸೋಲು-ಗೆಲುವು ತಿಳಿದು ಬರಲಿದೆ.

ಬೆಂಗಳೂರಿನ ಪದ್ಮನಾಭನಗರ ಬಿಜೆಪಿ ಅಭ್ಯರ್ಥಿ ಆಗಿರುವ ಆರ್. ಅಶೋಕ್ ಮಾತನಾಡಿ, "ಕಳೆದ ಬಾರಿ ಸಮೀಕ್ಷೆ ಪ್ರಕಟಿಸಿದ್ದ ಜನ್‌ಕಿ ಬಾತ್ ವರದಿ ಸತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಜನ್‌ಕಿ ಬಾತ್ ಎಕ್ಸಿಟ್ ಪೋಲ್ ಫಲಿತಾಂಶವನ್ನು ನಂಬುತ್ತೇನೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಒಂದು ವೇಳೆ ಸರಳ ಬಹುಮತ ಸಿಗದಿದ್ದರೆ, ಪ್ಲಾನ್ ಬಿ ರೆಡಿ ಮಾಡಿಕೊಂಡಿದ್ದೇವೆ," ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ನಾವು ಸನ್ಯಾಸಿಗಳಲ್ಲ
"ರಾಜ್ಯ ರಾಜಕೀಯದಲ್ಲಿ ನಾವು ಸನ್ಯಾಸಿಗಳು ಅಲ್ಲ. ಅಧಿಕಾರ ಮಾಡುವುದಕ್ಕೆ ಬಂದಿದ್ದೇವೆ. ಹೀಗಾಗಿ ಪ್ಲಾನ್ ಬಿ ಕೂಡ ರೆಡಿ ಇಟ್ಟುಕೊಳ್ಳಬೇಕಾಗುತ್ತದೆ. ಇದೀಗ ಚುನಾವಣೋತ್ತರ ಸಮೀಕ್ಷೆ ಬಂದಿದ್ದು, ನಾಡಿದ್ದು ಸ್ಪಷ್ಟ ಫಲಿತಾಂಶ ತಿಳಿಯಲಿದೆ. ಈ ಬಾರಿಯೂ ಬಿಜೆಪಿ ಗೆಲ್ಲಲಿದೆ," ಎಂದು ಆರ್. ಅಶೋಕ್ ಹೇಳಿದರು.

"ಕಳೆದ ಬಾರಿಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನೋಡಿದರೆ, ಜೆಡಿಎಸ್ ಮತ್ತೆ ಕಾಂಗ್ರೆಸ್ ಜೊತೆ ಹೋಗುವ ಸಾಧ್ಯತೆ ಕಡಿಮೆ ಇದ್ದು, ಸಿದ್ದರಾಮಯ್ಯ ಮತ್ತು ದೇವೆಗೌಡರು ಎಣ್ಣೆ-ಸೀಗೆಕಾಯಿ. ಅವರಿಬ್ಬರಿಗೂ ಆಗುವುದಿಲ್ಲ. ಕಾಂಗ್ರೆಸ್ ಜೊತೆಗಂತೂ ನಾವು ಹೋಗಲ್ಲ. ಹೀಗಾಗಿ ಮುಂದಿನ ನಿರ್ಧಾರ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ," ಎಂದು ಹೇಳಿದರು.
ಬಟ್ಟೆ-ಬರೆ ಸಿದ್ಧ ಮಾಡಿಕೊಂಡಿರುವ ಕಾಂಗ್ರೆಸ್ಸಿಗರು
" ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನದ ಬಳಿಕ ಸಮೀಕ್ಷೆಗಳನ್ನು ನೋಡಿರುವ ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈಗಲೇ ಸಭೆ ಆರಂಭಿಸಿದ್ದಾರೆ. ಕೂಸು ಹುಟ್ಟುವುದಕ್ಕೆ ಮುನ್ನವೇ ಕುಲಾವಿ ಹೊಲಿಸುತ್ತಿದ್ದಾರೆ," ಎಂದು ಆರ್. ಅಶೋಕ್ ಲೇವಡಿ ಮಾಡಿದರು.
"ಈ ಹಿಂದೆ ಗೋವಾಕ್ಕೆ ಡಿ.ಕೆ. ಶಿವಕುಮಾರ್ ಕಿಟ್ ಹೊತ್ತುಕೊಂಡು ಹೋಗಿದ್ದರು. ರಾಜ್ಯದಲ್ಲಿ ಇನ್ನೂ ಫಲಿತಾಂಶ ಬಂದಿಲ್ಲ. ಆಗಲೇ ರೆಸಾರ್ಟ್ ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ. ಬಟ್ಟೆ ಬರೆ ಕಟ್ಕೊಂಡು ಹೋಗುವುದಕ್ಕೆ ಸಿದ್ಧರಾಗಿದ್ದಾರೆ. ಆದರೆ ಗೋವಾದಲ್ಲಿ ಏನಾಯ್ತಲ್ಲ, ಅದೇ ಕರ್ನಾಟಕದಲ್ಲಿ ಮರುಕಳಿಸಲಿದೆ," ಎಂದು ನೆನಪಿಸಿದರು.
ಮುಖ್ಯಮಂತ್ರಿಯನ್ನು ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸುತ್ತೆ
"ಬಿಜೆಪಿಯಲ್ಲಿ ಜಾತಿ ನೋಡಿ ಮಂತ್ರಿ, ಮುಖ್ಯಮಂತ್ರಿ ಮಾಡಲ್ಲ. ನಮ್ಮದು ಕೇಡರ್ ಬೇಸ್ ಪಾರ್ಟಿ. ನಮ್ಮಲ್ಲಿ ಅತ್ಯುನ್ನತ ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನ ಮಾಡುತ್ತದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಕುಟುಂಬಕ್ಕೆ ಹತ್ತಿರವಿದ್ದವರು ಆಗುತ್ತಾರೆ. ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದವರ ಬಿಟ್ಟು ಬೇರೆಯವರಿಗೆ ಅವಕಾಶವಿಲ್ಲ. ಆದರೆ, ನಮ್ಮಲ್ಲಿ ಕಾರ್ಯಕರ್ತರು ದೊಡ್ಡ ಹುದ್ದೆಗೇರಬಹುದು," ಎಂದು ಬಿಜೆಪಿ ನಾಯಕ ಆರ್. ಅಶೋಕ್ ಅಬಿಪ್ರಾಯಪಟ್ಟರು.












Click it and Unblock the Notifications